ಕೋವಿಡ್‌ ಲಸಿಕೆ ಪಡೆಯಿರಿ… ಟಿವಿ, ವಾಷಿಂಗ್‌ ಮಷಿನ್‌, ರೆಫ್ರಿಜರೇಟರ್‌ ಬಹುಮಾನ ಗೆಲ್ಲಿ!

Public TV
1 Min Read

ಮುಂಬೈ: ಕೋವಿಡ್‌ ನಾನಾ ರೂಪಾಂತರಗಳೊಂದಿಗೆ ಜಾಗತಿಕವಾಗಿ ಆತಂಕ ಮೂಡಿಸಿದೆ. ಕೋವಿಡ್‌ ವಿರುದ್ಧದ ಹೋರಾಟಕ್ಕೆ ಲಸಿಕೆ ಪಡೆಯುವಂತೆ ಸಾಕಷ್ಟು ಅರಿವು ಮೂಡಿಸಿದರು ಎಷ್ಟೋ ಮಂದಿ ಈವರೆಗೂ ಲಸಿಕೆ ಹಾಕಿಸಿಕೊಂಡಿಲ್ಲ. ಇದರಿಂದ ಬೇಸತ್ತಿರುವ ಮಹಾರಾಷ್ಟ್ರದ ಹಿಂಗೋಲಿ ಪುರಸಭೆ ವಿನೂತನ ಕಾರ್ಯಕ್ರಮ ಜಾರಿಗೆ ಮುಂದಾಗಿದೆ.

ಕೋವಿಡ್‌ ಲಸಿಕೆ ಹಾಕಿಸಿಕೊಂಡವರಿಗೆ ಎಲ್‌ಇಡಿ ಟಿವಿ, ರೆಫ್ರಿಜರೇಟರ್‌, ವಾಷಿಂಗ್‌ ಮಷಿನ್‌ ಮೊದಲಾದ ಬಹುಮಾನಗಳನ್ನು ನೀಡಲು ಹಿಂಗೋಲಿ ನಗರಸಭೆ ನಿರ್ಧರಿಸಿದೆ. ಈ ರೀತಿಯ ಬಹುಮಾನಗಳನ್ನು ನೀಡಿದರೆ ಖಂಡಿತ ಜನರು ಲಸಿಕೆ ಹಾಕಿಸಿಕೊಳ್ಳಲು ಉತ್ಸಾಹ ತೋರಿಸುತ್ತಾರೆಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಲಸಿಕೆ ಪಡೆಯಲು ಜನರನ್ನು ಉತ್ತೇಜಿಸಲು ಚಂದ್ರಾಪುರ್‌ ನಾಗರಿಕ ಸಂಸ್ಥೆಯು ಇದೇ ರೀತಿಯ ಬಹುಮಾನಗಳನ್ನು ಘೋಷಿಸಿತ್ತು. ಇದನ್ನೂ ಓದಿ: ವಿದ್ಯಾರ್ಥಿಗೆ ಸೋಂಕು – ಶಾಲೆಯ ಎಲ್ಲ ಮಕ್ಕಳಿಗೂ ಕೊರೊನಾ ಟೆಸ್ಟ್

ಹಿಂಗೋಲಿ ಜಿಲ್ಲೆಯಲ್ಲಿ ಈವರೆಗೆ ಶೇ. 70 ರಷ್ಟು ಮಂದಿ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ. ಈ ಪೈಕಿ ಶೇ. 56 ರಷ್ಟು ಮಂದಿ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗ ವಿಶ್ವದಲ್ಲಿ ಕೊರೊನಾ ವೈರಸ್‌ ಹೊಸ ರೂಪಾಂತರ ಓಮಿಕ್ರಾನ್‌ ಭೀತಿ ಎದುರಾಗಿದೆ. ಮುಂಜಾಗ್ರತೆ ಕ್ರಮವಾಗಿ ಹಿಂಗೋಲಿ ಜಿಲ್ಲಾಧಿಕಾರಿ ಜಿತೇಂದ್ರ ಪಾಪಲ್ಕರ್‌ ಅವರು ಅಧಿಕಾರಿಗಳ ತುರ್ತು ಸಭೆ ಕರೆದು, ಜನರು ಲಸಿಕೆ ಪಡೆದುಕೊಳ್ಳುವಂತೆ ಉತ್ತೇಜಿಸಲು ಸೂಕ್ತ ಬಹುಮಾನ ನೀಡುವ ವಿಷಯವನ್ನು ಚರ್ಚಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 7 ಕೋಟಿ 50 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ: ಸುಧಾಕರ್

ಈ ಹಿನ್ನೆಲೆಯಲ್ಲಿ ಪುರಸಭೆಯ ಅಧಿಕಾರಿ ಡಾ. ಅಜಯ್‌ ಕುರ್ವಾಡೆ ಅವರು, ಲಕ್ಕಿ ಡ್ರಾ ಆಯೋಜನೆಯ ಉಪಾಯ ಮಾಡಿದ್ದಾರೆ. ಡಿ.27ರಂದು ಲಕ್ಕಿ ಡ್ರಾ ನಡೆಯಲಿದ್ದು, ಡಿ.2ರಿಂದ 24ರ ನಡುವೆ ಲಸಿಕೆ ಪಡೆದವರಿಗೆ ಲಕ್ಕಿ ಡ್ರಾ ಟಿಕೆಟ್‌ ಸಿಗಲಿದೆ ಎಂದು ತಿಳಿಸಿದ್ದಾರೆ.

ಹಿಂಗೋಲಿ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ ದೃಢಪಟ್ಟ 16,059 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 395 ಮಂದಿ ಮೃತಪಟ್ಟಿದ್ದಾರೆ. 15,659 ಮಂದಿ ಗುಣಮುಖರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *