ದಾಸೋಹದ ಅಕ್ಕಿಯನ್ನ ಬಡವರಿಗೆ ವಿತರಿಸಲು ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ನಿರ್ಧಾರ

Public TV
2 Min Read

– 5 ಕೆಜಿ ತೂಕದ 5 ಸಾವಿರ ಬ್ಯಾಗ್‍ಗಳು ಸಿದ್ಧ

ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ದಾನಿಗಳಿಂದ ಬಂದಿರುವ ಅಕ್ಕಿಯನ್ನು ಬೆಟ್ಟದ ಸುತ್ತಮುತ್ತಲಿನ ಸುಮಾರು ಆರುವರೆ ಸಾವಿರ ಬಡ ಕುಟುಂಬಗಳಿಗೆ ವಿತರಿಸಲು ಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿರುವ ಕಾಡಂಚಿನ ಗ್ರಾಮಗಳ ಜನರ ಬದುಕು ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ಅವರ ನೆರವಿಗೆ ಧಾವಿಸಲು ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ಮಹ ದೇಶ್ವರಬೆಟ್ಟದ ದಾಸೋಹಕ್ಕೆ ದಾನಿಗಳಿಂದ ಸುಮಾರು 80 ಟನ್ ಅಕ್ಕಿ ಸಂಗ್ರಹವಾಗಿದೆ. ಇದರಲ್ಲಿ ಸದ್ಯಕ್ಕೆ ಸುಮಾರು 32 ಟನ್ ಅಕ್ಕಿಯನ್ನು ಕೊಂಬುಡಿಕ್ಕಿ, ದೊಡ್ಡಾಣೆ, ತುಳಸಿಕೆರೆ, ಪಡಸಲನತ್ತ, ನಾಗನತ್ತ, ಗೋಪಿನಾಥಂ, ಪೊನ್ನಾಚಿ ಬಿದರಹಳ್ಳಿ ಮೊದಲಾದ ಗ್ರಾಮಗಳ ಆರುವರೆ ಸಾವಿರ ಬಡ ಕುಟುಂಬಗಳಿಗೆ ವಿತರಿಸಲು ನಿರ್ಧರಿಸಲಾಗಿದೆ.

ಈ ಗ್ರಾಮಗಳಲ್ಲಿ ಬಹುತೇಕ ಬಡವರು ವಾಸಿಸುತ್ತಿದ್ದು, ಅವರ ನೆರವಿಗೆ ಧಾವಿಸುವ ಸಲುವಾಗಿ ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ದಾಸೋಹದ ಅಕ್ಕಿಯನ್ನು ಹಂಚುವ ಪ್ರಸ್ತಾವನೆ ಮಾಡಿದ್ದರು. ಇದಕ್ಕೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಉಪಾಧ್ಯಕ್ಷರಾದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‍ಕುಮಾರ್ ಮೌಖಿಕವಾಗಿ ಸಮ್ಮತಿ ಸೂಚಿಸಿದ್ದಾರೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

ಏಪ್ರಿಲ್ 19 ರಂದು ಮಹದೇಶ್ವರಬೆಟ್ಟ, ಕೊಂಬುಡಿಕ್ಕಿ, ಗೋಪಿನಾಥಂ, ಪೊನ್ನಾಚಿ, ಬಿದರಹಳ್ಳಿಯಲ್ಲಿ ಅಕ್ಕಿ ವಿತರಣೆ ಚಾಲನೆಗೆ ಸಚಿವ ಸುರೇಶ್ ಕುಮಾರ್ ಚಾಲನೆ ನೀಡಲಿದ್ದಾರೆ. ಇದಕ್ಕಾಗಿ 5 ಕೆ.ಜಿ.ತೂಕದ 5,000 ಬ್ಯಾಗ್‍ಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಅಲ್ಲದೇ ಪ್ರಾಧಿಕಾರದ ವತಿಯಿಂದ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿ ಮತ್ತು ಬಡಕುಟುಂಬಗಳಿಗೆ ವಿತರಿಸಲು 10 ಸಾವಿರ ಮಾಸ್ಕ್ ಗಳನ್ನು ತಯಾರಿಸಲಾಗುತ್ತಿದೆ.

ಇದೇ ವೇಳೆ ಡೈನಾಮಿಕ್ ಭಾರತ್ ಗ್ಲೋಬಲ್ ವಿಷನ್ ಎಂಬ ಸ್ವಯಂ ಸೇವಾ ಸಂಸ್ಥೆ, ಕಾಡಿನಲ್ಲಿಯೇ ವಾಸವಿರುವ ಹಾಗೂ ಮೂಲ ಗ್ರಾಮಗಳಿಗೆ ಸಂಪರ್ಕವೇ ಇರದ ಒಂದು ಸಾವಿರ ಕುಟುಂಬಗಳಿಗೆ ಮುಂದಿನ ಮೂರು ತಿಂಗಳಿಗೆ ಆಗುವಷ್ಟು ಪಡಿತರ ಹಾಗೂ 30 ವಿವಿಧ ಪದಾರ್ಥಗಳನ್ನು ನೀಡಲು ಮುಂದೆ ಬಂದಿದೆ. ಈ ಕಾರ್ಯಕ್ಕೂ ಸಹ ಏಪ್ರಿಲ್ 19 ರಂದು ಚಾಲನೆ ನೀಡಲಾಗುವುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *