ಮಹದಾಯಿ ಸಮಸ್ಯೆ ಬಗೆಹರಿಸೋ ಇಚ್ಛಾಶಕ್ತಿ ಪ್ರಧಾನಿಗಳಿಗಿಲ್ಲ: ಸಿದ್ದರಾಮಯ್ಯ

Public TV
1 Min Read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಈಗಲೂ ಮನಸ್ಸು ಮಾಡಿದರೆ ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಮಹದಾಯಿ ವಿವಾದವನ್ನು ನ್ಯಾಯಾಧೀಕರಣದ ಹೊರಗೆ ಬಗೆಹರಿಸಬಹುದು. ಆದರೆ ಈ ಇಚ್ಛಾಶಕ್ತಿಯೇ ನಮ್ಮ ಪ್ರಧಾನಿಗಳಲ್ಲಿ ಇಲ್ಲ. ಮಹದಾಯಿ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ ಒಂದೇ ಒಂದು ಮಾತಾದರೂ ಈಡೇರಿದೆಯೇ ಎಂದು ಟ್ವಿಟ್ಟರ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಸಿಎಎ ಹಾಗೂ ಎನ್‍ಆರ್ ಸಿ ಇವು ಅಸಂವಿಧಾನಿಕವಾದುವು, ಹಾಗಾಗಿ ಬಿಜೆಪಿ ಪಕ್ಷ ತಾವು ಮಾಡುತ್ತಿರುವ ತಪ್ಪಿಗೆ ಜನಬೆಂಬಲ ಪಡೆದು, ಅದನ್ನೇ ಸರಿ ಎಂದು ಸಾಬೀತುಪಡಿಸಲು ಸಾರ್ವಜನಿಕ ಸಭೆ, ಸಮಾರಂಭ ಮಾಡುತ್ತಿದೆ. ಈ ಕಾಯ್ದೆಯಿಂದಾಗಿ ಸಂವಿಧಾನದ ಮೂಲ ಆಶಯಗಳಾದ ಸಮಾನತೆ ಮತ್ತು ಜಾತ್ಯಾತೀತತೆಗೆ ಧಕ್ಕೆಯಾಗಲಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹತ್ತಿಕ್ಕಿ ಸರ್ವಾಧಿಕಾರಿ ಆಡಳಿತ ಜಾರಿಯಲ್ಲಿದೆ. ದೇಶಾದ್ಯಂತ ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕರ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಗಳು ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿದೆ. ಜನತೆ ಭಯದಲ್ಲಿ ದಿನ ದೂಡುವಂತಹ ಪರಿಸ್ಥಿತಿ ಇದೆ ಎಂದು ಟ್ವೀಟ್ ಮಾಡಿದ್ದಾರೆ.

ಹಿಂಗಾರು ಮಳೆ ನಷ್ಟದಿಂದಾಗಿ ಸುಮಾರು 45 ತಾಲೂಕುಗಳು ಭೀಕರ ಬರ ಎದುರಿಸುತ್ತಿವೆ. ಈವರೆಗೆ ಬರಪರಿಹಾರಕ್ಕಾಗಿ ನಯಾಪೈಸೆ ಹಣ ಬಿಡುಗಡೆಯಾಗಿಲ್ಲ. ರಾಜ್ಯದ ಪಾಲಿನ ಹಲವು ಅನುದಾನಗಳು ಬಂದಿಲ್ಲ. ಕೇಂದ್ರ ತಾನು ದಿವಾಳಿಯಾಗುವ ಜೊತೆಗೆ ರಾಜ್ಯಗಳನ್ನು ದಿವಾಳಿ ಎಬ್ಬಿಸುತ್ತಿದೆ. ಮುಂದಿನ ವರ್ಷದಲ್ಲಿ ನಮ್ಮ ರಾಜ್ಯದಿಂದ ಸಂಗ್ರಹವಾದ ವಿವಿಧ ತೆರಿಗೆಗಳಲ್ಲಿ ರಾಜ್ಯದ ಪಾಲಿನ ಅನುದಾನ ಕನಿಷ್ಠ ರೂ.5000 ಕೋಟಿ ಕಡಿತವಾಗಲಿದೆ. ಹೀಗಾದರೆ ಅಭಿವೃದ್ಧಿ ಕಾರ್ಯಗಳು ನಡೆಯುವುದಾದರೂ ಹೇಗೆ? ನನ್ನದೇ ಕ್ಷೇತ್ರದಲ್ಲಿ ಸಂಪುಟ ಅನುಮೋದನೆ ಪಡೆದ ರೂ.500 ಕೋಟಿ ವೆಚ್ಚದ ಕೆರೂರು ಏತ ನೀರಾವರಿ ಯೋಜನೆ ಹಣವಿಲ್ಲದೆ ಮೂಲೆ ಸೇರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *