ಮಹಾ ಕುಂಭಮೇಳದಿಂದ ದೇಶದ ಸಾಮೂಹಿಕ ಪ್ರಜ್ಞೆ ಬಲಗೊಂಡಿದೆ – ಲೋಕಸಭೆಯಲ್ಲಿ ಮೋದಿ ಶ್ಲಾಘನೆ

Public TV
2 Min Read

ನವದೆಹಲಿ: ಇತ್ತೀಚಿಗೆ ನಡೆದ ಮಹಾ ಕುಂಭಮೇಳವು ನಮ್ಮ ಚಿಂತನೆಯನ್ನು ಮತ್ತಷ್ಟು ಬಲಪಡಿಸಿದೆ. ಜೊತೆಗೆ ದೇಶದ ಸಾಮೂಹಿಕ ಪ್ರಜ್ಞೆಯು ನಮ್ಮೆಲ್ಲರ ಶಕ್ತಿಯ ಬಗ್ಗೆ ಹೇಳುತ್ತದೆ. ಕಳೆದ ವರ್ಷ ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಸಮಾರಂಭವು ಮುಂದಿನ 1000 ವರ್ಷಗಳಿಗೆ ಭಾರತ ಹೇಗೆ ತಯಾರಿ ನಡೆಸುತ್ತದೆ ಎಂಬುದನ್ನು ನಮಗೆಲ್ಲರಿಗೂ ತೋರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಶ್ಲಾಘಿಸಿದರು.

ಲೋಕಸಭೆಯಲ್ಲಿ ಮಹಾ ಕುಂಭಮೇಳದ ಯಶಸ್ಸಿನ ಬಗ್ಗೆ ಮಾತನಾಡಿದ ಅವರು, ಮಹಾ ಕುಂಭಮೇಳದ ಯಶಸ್ಸಿಗೆ ಅನೇಕ ಜನರು ಕೊಡುಗೆ ನೀಡಿದ್ದಾರೆ. ನಾನು ಎಲ್ಲಾ ಕರ್ಮಯೋಗಿಗಳನ್ನು ಅಭಿನಂದಿಸುತ್ತೇನೆ. ದೇಶಾದ್ಯಂತ ಭಕ್ತರಿಗೆ, ಉತ್ತರ ಪ್ರದೇಶದ ಜನರಿಗೆ ಮತ್ತು ವಿಶೇಷವಾಗಿ ಪ್ರಯಾಗ್‌ರಾಜ್‌ನ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ. ಜನರು ಅನುಕೂಲತೆ ಹಾಗೂ ಅನಾನುಕೂಲತೆಯ ಬಗ್ಗೆ ಚಿಂತಿಸದೆ ಮಹಾ ಕುಂಭಮೇಳದಲ್ಲಿ ಭಾಗವಹಿಸಿದರು. ಈ ಮೂಲಕ ನಮ್ಮ ಸಂಪ್ರದಾಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುವ ಪ್ರಕ್ರಿಯೆಯು ಮುಂದುವರಿಯುತ್ತದೆ ಎಂದರು.ಇದನ್ನೂ ಓದಿ: ನಾಗ್ಪುರ ಹಿಂಸಾಚಾರವು ಆಕಸ್ಮಿಕವಲ್ಲ, ಪೂರ್ವ ಯೋಜಿತ ದಾಳಿ – ʻಮಹಾʼ ಸಿಎಂ ದೇವೇಂದ್ರ ಫಡ್ನವೀಸ್

ಇಂದು ಭಾರತದ ಯುವಕರು ಅದರ ಸಂಪ್ರದಾಯ, ನಂಬಿಕೆ ಮತ್ತು ಪದ್ಧತಿಗಳನ್ನು ಹೆಮ್ಮೆಯಿಂದ ಅಳವಡಿಸಿಕೊಳ್ಳುತ್ತಿದ್ದಾರೆ. ಒಂದು ದೇಶವಾಗಿ ನಾವು ದೊಡ್ಡ ಗುರಿಗಳನ್ನು ಸಾಧಿಸುವ ವಿಶ್ವಾಸವನ್ನು ಗಳಿಸಿದ್ದೇವೆ. ತನ್ನ ಪರಂಪರೆಯೊಂದಿಗೆ ಸಂಪರ್ಕ ಸಾಧಿಸುವ ಸಂಪ್ರದಾಯವು ಇಂದಿನ ಭಾರತದ ದೊಡ್ಡ ಆಸ್ತಿಯಾಗಿದೆ. ಯುವ ಪೀಳಿಗೆ ಕೂಡ ಮಹಾ ಕುಂಭಮೇಳದಲ್ಲಿ ಪೂರ್ಣ ಭಾವನೆಯಿಂದ ಭಾಗವಹಿಸಿದೆ. ಮಹಾ ಕುಂಭಮೇಳದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ದೇಶದ ಮೂಲೆ ಮೂಲೆಯಲ್ಲೂ ಆಧ್ಯಾತ್ಮಿಕ ಪ್ರಜ್ಞೆ ಹೊರಹೊಮ್ಮಿದೆ. ಮಹಾ ಕುಂಭಮೇಳವನ್ನು ಭಾರತದ ಇತಿಹಾಸದಲ್ಲಿ ಒಂದು ಮಹತ್ವದ ತಿರುವು. ಜಗತ್ತು ದೇಶದ ಬೃಹತ್ ಸ್ವರೂಪವನ್ನು ಕಂಡಿದೆ. ಎಲ್ಲರ ಪ್ರಯತ್ನದ ಜೀವಂತ ಸಾಕಾರವಾಗಿದೆ ಎಂದು ಹೇಳಿದರು.

 

ಮಹಾ ಕುಂಭಮೇಳದಲ್ಲಿ ನಾವು ನಮ್ಮ ರಾಷ್ಟ್ರೀಯ ಪ್ರಜ್ಞೆಯ ಮಹಾ ಜಾಗೃತಿಯನ್ನು ಕಂಡಿದ್ದೇವೆ. ಇದು ನಮಗೆ ಹೊಸ ನಿರ್ಣಯಗಳನ್ನು ಸಾಧಿಸಲು ಸ್ಫೂರ್ತಿ ನೀಡುತ್ತದೆ. ನಮ್ಮ ಸಾಮರ್ಥ್ಯಗಳ ಬಗ್ಗೆ ಕೆಲವು ಜನರು ಹೊಂದಿರುವ ಅನುಮಾನ ಹಾಗೂ ಭಯಕ್ಕೆ ಮಹಾಕುಂಭವು ಸೂಕ್ತ ಉತ್ತರವನ್ನು ನೀಡಿದೆ. ಮಹಾಕುಂಭದಿಂದ ಅನೇಕ ಅಮೃತಗಳು ಹೊರಹೊಮ್ಮಿವೆ ಮತ್ತು ಏಕತೆಯ ಅಮೃತವು ಅದರ ಅತ್ಯಂತ ಪವಿತ್ರ ಪ್ರಸಾದವಾಗಿದೆ ಎಂದರು.

ವಿವೇಕಾನಂದರು ಚಿಕಾಗೋ ಧರ್ಮ ಸಂಸತ್ತಿನಲ್ಲಿ ಮಾಡಿದ ಭಾಷಣ, ಗಾಂಧೀಜಿಯವರ `ದಂಡಿ ಮೆರವಣಿಗೆ’ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ `ದೆಹಲಿ ಚಲೋ’ ಘೋಷಣೆಯಂತಹ ಐತಿಹಾಸಿಕ ಸಂದರ್ಭಗಳನ್ನು ಉಲ್ಲೇಖಿಸಿದ ಮೋದಿ, ಪ್ರಯಾಗ್‌ರಾಜ್ ಮಹಾ ಕುಂಭವನ್ನು ಜಾಗೃತಿ ಭಾರತದ ಪ್ರತಿಬಿಂಬವನ್ನು ಕಾಣುವ ಒಂದು ಪ್ರಮುಖ ಮೈಲಿಗಲ್ಲಾಗಿ ನಾನು ನೋಡುತ್ತೇನೆ ಎಂದರು. ಇತ್ತೀಚಿನ ಮಾರಿಷಸ್ ಭೇಟಿಯನ್ನು ಉಲ್ಲೇಖಿಸಿದ ಅವರು, ಕಳೆದ ವಾರ ನಾನು ತ್ರಿವೇಣಿ ಸಂಗಮದ ಪವಿತ್ರ ನೀರನ್ನು ಮಾರಿಷಸ್‌ಗೆ ತೆಗೆದುಕೊಂಡು ಹೋಗಿದ್ದೆ. ಆ ನೀರನ್ನು ಅಲ್ಲಿನ ಗಂಗಾ ಕೊಳದಲ್ಲಿ ಮುಳುಗಿಸಿದಾಗ, ಅಲ್ಲಿ ಅಪಾರ ಉತ್ಸಾಹ ಮತ್ತು ನಂಬಿಕೆಯ ವಾತಾವರಣವಿತ್ತು ಎಂದು ಸಂತಸ ವ್ಯಕ್ತಪಡಿಸಿದರು.ಇದನ್ನೂ ಓದಿ: ನ್ಯಾಯಬೆಲೆ ಅಂಗಡಿಯಲ್ಲಿ ಟೋಕನ್ ಎಸೆದವನ ಮೇಲೆ ಕ್ರಮ: ಮುನಿಯಪ್ಪ

Share This Article