ಬಿಜೆಪಿಯಿಂದ ನನಗೂ ಆಮಿಷ: ಮಾಗಡಿ ಶಾಸಕ

Public TV
1 Min Read

ರಾಮನಗರ: ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಸಂದರ್ಭದಿಂದಲೂ ನನಗೆ ಬಿಜೆಪಿ ಸತತವಾಗಿ ಆಮಿಷ ನೀಡಿತ್ತು ಎಂದು ಮಾಗಡಿ ಶಾಸಕ ಎ.ಮಂಜುನಾಥ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಬಿಡದಿಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಎ.ಮಂಜುನಾಥ್ ಅವರು, ಅಪರೇಷನ್ ಕಮಲ ನಡೆಯುತ್ತಿರುವ ಬಗ್ಗೆ ಚುನಾವಣೆಯ ಬಳಿಕ ನಾನು ಪಕ್ಷದ ನಾಯಕರಾದ ಎಚ್‍ಡಿ ಕುಮಾರಸ್ವಾಮಿ ಹಾಗೂ ಎಚ್‍ಡಿ ದೇವೇಗೌಡ ಅವರಿಗೆ ಮಾಹಿತಿ ನೀಡಿದ್ದೆ. ನನಗೆ ವಿವಿಧ ರೀತಿಯ ಆಮಿಷಗಳನ್ನು ಬಿಜೆಪಿ ನಾಯಕರು ನೀಡಿದ್ದರು. ಆದರೆ ಈಗ ಯಾರು ಸಂಪರ್ಕ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಅವರು ನೀಡಿದ್ದ ಆಫರನ್ನು ನಾನು ಸತತವಾಗಿ ನಿರಾಕರಿಸಿದ್ದೇನೆ. ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್, ಅಶ್ವಥ್ ನಾರಾಯಣ್, ಅರವಿಂದ ಲಿಂಬಾವಳಿ ಆಮಿಷ ನೀಡಿದ್ದರು. ನಿಮ್ಮನ್ನ ಸಚಿವರನ್ನಾಗಿ ಮಾಡುತ್ತೇವೆ, ಹಣ ಕೊಡುತ್ತೇವೆ, ಸರ್ಕಾರದ ಪ್ರಮುಖ ಜವಾಬ್ದಾರಿಗಳನ್ನು ನೀಡುತ್ತೇವೆ ಎಂದಿದ್ದರು. ಆದರೆ ಆಮಿಷಗಳಿಗೆ ನಾನು ಮಣಿಯುವ ಪ್ರಶ್ನೆಯೇ ಇಲ್ಲ. ಪಕ್ಷದ ನಾಯಕರು ಹಾಗೂ ಕ್ಷೇತ್ರದ ಜನತೆ ಈ ಬಗ್ಗೆ ಸಂಶಯಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಜೆಡಿಎಸ್ ಬಿಟ್ಟು ನಾನು ಎಲ್ಲಿಯೂ ಹೋಗುವುದಿಲ್ಲ ಎಂದ ಅವರು, ನಾನು ಕಳೆದ 10 ವರ್ಷಗಳಿಂದ ಜನರ ಸೇವೆ ಮಾಡುತ್ತಿದ್ದು, ಕ್ಷೇತ್ರದ ಜನತೆ ನನಗೆ ಸೇವೆ ಮಾಡುವ ಅವಕಾಶ ನೀಡಿದ್ದಾರೆ. ಅವರ ನಂಬಿಕೆಯನ್ನು ನಾನು ಕಳೆದುಕೊಳ್ಳುವುದಿಲ್ಲ. ಪಕ್ಷದಲ್ಲಿಯೇ ಉಳಿದು ಶಾಸಕನಾಗಿ ನನ್ನ ಕಾರ್ಯವನ್ನು ಮುಂದುವರಿಸುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *