ಟಿಕ್ ಟಾಕ್ ನಿಷೇಧಿಸುವಂತೆ ಕೇಂದ್ರಕ್ಕೆ ಹೈಕೋರ್ಟ್ ಆದೇಶ

Public TV
1 Min Read

ಚೆನ್ನೈ: ಸದ್ಯ ಎಲ್ಲೆಡೆ ಹೆಸರುವಾಸಿಯಾಗಿರುವ ಶಾರ್ಟ್ ವಿಡಿಯೋ ಫ್ಲ್ಯಾಟ್‍ಫಾರ್ಮ್ ಟಿಕ್ ಟಾಕ್ ಅಪ್ಲಿಕೇಶನ್ ನ್ನು ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.

ಟಿಕ್ ಟಾಕ್‍ನಂತಹ ಆ್ಯಪ್ ಯುವಕರ ಭವಿಷ್ಯ ಹಾಗೂ ಮಕ್ಕಳ ಮನಸ್ಥಿತಿಯನ್ನು ಹಾಳು ಮಾಡುತ್ತಿದೆ. ಈ ಕುರಿತು ನ್ಯಾ. ಎನ್ ಕಿರುಬಕರನ್ ಹಾಗೂ ನ್ಯಾ. ಎಸ್ ಸುಂದರ್ ಅವರಿದ್ದ ದ್ವಿಸದಸ್ಯ ಪೀಠ ಟಿಕ್ ಟಾಕ್ ವಿಡಿಯೋಗಳನ್ನು ಪ್ರಸಾರ ಮಾಡುವ ಮಾಧ್ಯಮಗಳನ್ನು ನಿಷೇಧಿಸುವಂತೆ ಆದೇಶಿಸಿದೆ. ಇದನ್ನೂ ಓದಿ:ದೇಶದಲ್ಲಿ ಬ್ಯಾನ್ ಆಗುತ್ತಾ ಟಿಕ್ ಟಾಕ್?

ಮಕ್ಕಳು ಸೈಬರ್ ಸಂತ್ರಸ್ತ್ರರಾಗುವುದನ್ನು ತಪ್ಪಿಸಲು ಅಮೆರಿಕ ಸರ್ಕಾರ ಮಕ್ಕಳ ಆನ್‍ಲೈನ್ ಗೌಪ್ಯತೆ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದೆ. ಇದೇ ರೀತಿಯಲ್ಲಿ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಫೆಬ್ರವರಿಯಲ್ಲಿ ತಮಿಳುನಾಡು ವಿಧಾನಸಭಾ ಅಧಿವೇಶನದಲ್ಲಿ ನಾಗಪಟ್ಟಣದ ಶಾಸಕ ತಮೀಮ್ ಅನ್ಸಾರಿ ಈ ಅಪ್ಲಿಕೇಶನ್ ಅನ್ನು ನಿಷೇಧ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಅಪ್ಲಿಕೇಶನ್ ನಿಂದಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂದು ಸದನಕ್ಕೆ ತಿಳಿಸಿದ್ದರು. ಇದನ್ನೂ ಓದಿ:ಟಿಕ್ ಟಾಕ್ ವಿಡಿಯೋ ಮಾಡಿ ಅಪ್ಲೋಡ್ ಮಾಡುವವರೇ ಎಚ್ಚರ

ಈ ಮನವಿ ಸಂಬಂಧ ಮಾಹಿತಿ ತಂತ್ರಜ್ಞಾನ ಸಚಿವ ಎಂ. ಮಣಿಕಂಠನ್ ಟಿಕ್ ಟಾಕ್ ಬ್ಯಾನ್ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಹೇಗೆ ಬ್ಲೂ ವೇಲ್ ಮಕ್ಕಳನ್ನು ಹಾಳು ಮಾಡುತ್ತಿದೆಯೋ ಅದೇ ರೀತಿ ಟಿಕ್ ಟಾಕ್‍ನಿಂದ ಯುವ ಜನತೆ ಹಾಳಾಗುತ್ತಿದ್ದಾರೆ. ತಮಿಳುನಾಡಿನ ಸಂಸ್ಕೃತಿ ಇದರಿಂದಾಗಿ ಹಾಳಾಗುತ್ತಿದೆ ಎಂದು ಅವರು ತಿಳಿಸಿದ್ದರು.

ಟಿಕ್ ಟಾಕ್ ಆ್ಯಪ್ ಭಾರತದಲ್ಲಿ 16ರಿಂದ 24 ವಯಸ್ಸಿನವರು ಹೆಚ್ಚಾಗಿ ಬಳಸುತ್ತಾರೆ. ಜನವರಿ ತಿಂಗಳಿನಲ್ಲಿ ತಮಿಳುನಾಡಿನ ವಿರುದುನಗರದ ಜಿಲ್ಲೆಯಲ್ಲಿ ನಾಲ್ಕು ಜನರು ತಮಾಷೆಗಾಗಿ ಪೊಲೀಸ್ ಠಾಣೆಯಲ್ಲೇ ಪೊಲೀಸರ ಟಿಕ್ ಟಾಕ್ ವಿಡಿಯೋವನ್ನು ಮಾಡಿದ್ದರು. ಆಗ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಹುಡುಗಿಯರ ಟಿಕ್ ಟಾಕ್ ವಿಡಿಯೋವನ್ನು ಡೌನ್ ಲೋಡ್ ಮಾಡಿ ಅದನ್ನು ತಿರುಚಿ ವೇಶ್ಯಾವಾಟಿಕೆ ದಂಧೆಗೆ ಗ್ರಾಹಕರನ್ನು ಸೆಳೆಯುತ್ತಿದ್ದ ಜಾಲವನ್ನು ತಮಿಳುನಾಡು ಪೊಲೀಸರು ಬೇಧಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *