ಮಡಿಕೇರಿ ನಗರದ ಜನತೆಗೆ ಟಾಯ್ಲೆಟ್ ನೀರು ಕುಡಿಸಿದ ನಗರಸಭೆ

Public TV
1 Min Read

ಮಡಿಕೇರಿ: ಪ್ರತಿ ಜನರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕೆಂದು ಎಲ್ಲೆಡೆ ಸರ್ಕಾರವೇ ಕುಡಿಯುವ ನೀರಿನ ಘಟಕಗಳನ್ನು ಮಾಡುತ್ತಿದೆ. ಆದರೆ ಮಡಿಕೇರಿ ನಗರ ಸಭೆ ಮಾತ್ರ ನಗರದ ಜನರಿಗೆ ಕುಡಿಯುವ ನೀರಿನ ಬದಲಿಗೆ ಟಾಯ್ಲೆಟ್ ನೀರು ಪೂರೈಕೆ ಮಾಡುತ್ತಿದೆ.

ಹೌದು ಮಡಿಕೇರಿ ನಗರದ ಹೊಸಬಡಾವಣೆಯ 50 ಕ್ಕೂ ಹೆಚ್ಚು ಮನೆಗಳಿಗೆ ಟಾಯ್ಲೆಟ್ ಮಿಶ್ರಿತ ನೀರು ಪೂರೈಕೆಯಾಗುತ್ತಿದೆ. ಕಳೆದ ಹಲವು ದಿನಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿತ್ತು. ಇದನ್ನು ನಗರಸಭೆಯ ಗಮನಕ್ಕೂ ತರಲಾಗಿತ್ತು. ಇದರಿಂದ ನಗರಸಭೆ ಅಧಿಕಾರಿಗಳೇನು ಹೆಚ್ಚೆತ್ತುಕೊಂಡಂತೆ ಕಂಡಿಲ್ಲ.

ಕಳೆದ ಎರಡು ದಿನಗಳಿಂದ ಟಾಯ್ಲೆಟ್ ನೀರು ಮನೆಯ ನಲ್ಲಿಗಳಲ್ಲಿ ಪೂರೈಕೆಯಾಗುತ್ತಿದೆ. ಇದಕ್ಕೆ ಮುಖ್ಯಕಾರಣ ನಗರದಲ್ಲಿ 60 ವರ್ಷಗಳ ಹಿಂದೆ ಅಳವಡಿಸಿರುವ ನೀರು ಪೂರೈಕೆ ಪೈಪುಗಳು ಹೊಡೆದು ಹೋಗಿರುವುದು. ಇತ್ತೀಚಿನ ವರ್ಷಗಳಲ್ಲಿ ಒಳಚರಂಡಿ ನಿರ್ಮಾಣದ ಸಂದರ್ಭ ಪೈಪುಗಳು ಡ್ಯಾಮೇಜ್ ಆಗಿ ಇದೀಗ ಟಾಯ್ಲೆಟ್ ಮಿಶ್ರಿತ ನೀರು ಮನೆಗಳಿಗೆ ಪೂರೈಕೆಯಾಗುತ್ತಿದೆ. ಕೂಡಲೇ ಅಧಿಕಾರಿಗಳು ಪರಿಶೀಲನೆ ನಡೆಸಿ ಸರಿಪಡಿಸಬೇಕು. ಇಲ್ಲದಿದ್ದರೆ ಬೀದಿಗೆ ಇಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

ಮಡಿಕೇರಿ ನಗರಕ್ಕೆ ಕೂಟ್ಟು ಹೊಳೆಯಿಂದ ನೀರು ಪೂರೈಕೆ ಮಾಡಲಾಗುತ್ತದೆ. ನಗರದ ಸ್ಟೋನ್ ಹಿಲ್‍ನಲ್ಲಿ ಇರುವ ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಣ ಮಾಡಿ, ಬಳಿಕ ಪೂರೈಕೆ ಮಾಡಲಾಗುತ್ತದೆ. ಆದರೆ ಅಲ್ಲಿಂದ ಸ್ವಲ್ಪ ದೂರದಲ್ಲೇ ಇರುವ ಹೊಸಬಡಾವಣೆಯ ಕ್ರಿಶ್ಚಿಯನ್ ಸ್ಮಶಾನದ ರಸ್ತೆಯ 50 ಕ್ಕೂ ಹೆಚ್ಚು ಮನೆಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಈಗಾಗಲೇ ನಗರಸಭೆ ಸಿಬ್ಬಂದಿಗಳು ಎಲ್ಲಿಂದ ಟಾಯ್ಲೆಟ್ ನೀರು ಮನೆಗಳಿಗೆ ಪೂರೈಕೆ ಆಗುತ್ತಿದೆ ಎಂದು ಹುಡುಕಾಡುತ್ತಿದ್ದಾರೆ. ಹಲವೆಡೆ ಅಗೆದು, ಹೊಸದಾಗಿ ಪೈಪುಗಳನ್ನು ಜೋಡಿಸಲಾಗುತ್ತಿದೆ. ಆದರೂ ಇಂದಿಗೂ ಎಲ್ಲಿಂದ ಈ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎನ್ನೋದು ಗೊತ್ತಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *