ಯೋಧರ ನಾಡಿಗೆ ಬಂದ ಮಿಗ್-21 ಯುದ್ಧ ವಿಮಾನ

Public TV
1 Min Read

ಮಡಿಕೇರಿ: ಆಧುನಿಕ ಯುಗದ ವೀರ ಸೇನಾನಿ ಜನರಲ್ ತಿಮ್ಮಯ್ಯ ಹುಟ್ಟಿ ಬೆಳೆದ ಸನ್ನಿಸೈಡ್ ನಿವಾಸ, ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಮತ್ತೊಂದು ಆಕರ್ಷಣೆಯಾಗಿ ಮಿಗ್-21 ವಿಮಾನ ಮ್ಯೂಸಿಯಂಗೆ ಬಂದಿದೆ.

ಸದ್ಯ ಮಡಿಕೇರಿಗೆ ತರಲಾಗಿರುವ ಮಿಗ್-21 ಯುದ್ಧ ವಿಮಾನ 1971ನೇ ಯುದ್ಧದಲ್ಲಿ ದೊಡ್ಡಪಾತ್ರ ವಹಿಸಿದೆ. 15 ವರ್ಷಗಳ ಹಿಂದೆಯೇ ಈ ವಿಮಾನವನ್ನು ಸೇವೆಯಿಂದ ಹೊರಗಿಡಲಾಗಿತ್ತು. ಆಗಿನ ಸಮಯದಲ್ಲಿ ಈ ವಿಮಾನ 40-45 ಲಕ್ಷ ರೂ. ಬೆಲೆಯನ್ನು ಹೊಂದಿತ್ತು. ಮಡಿಕೇರಿ ನಗರದಲ್ಲಿ ತಿಮ್ಮಯ್ಯ ಮ್ಯೂಸಿಯಂನಲ್ಲಿ ಕೆಲಸಗಳು ನಡೆಯುತ್ತಿದ್ದು, ನಂದಾ ಕಾರ್ಯಪ್ಪ ಅವರು ವಿಮಾನಕ್ಕಾಗಿ ಹಲವು ಬಾರಿ ಸೇನೆಗೆ ಮನವಿ ಸಲ್ಲಿಸಿದ್ದರು.

ಇವರ ಪ್ರಯತ್ನದ ಫಲವಾಗಿ ಕಳೆದ ಜನವರಿ 11 ರಂದು ಮಿಗ್-21 ವಿಮಾನ ತಿಮ್ಮಯ್ಯ ಮ್ಯೂಸಿಯಂ ಸೇರಿತ್ತು. ಆದರೆ ಅದರ ಜೋಡಣೆ ಮಾತ್ರ ಅಗಿರಲ್ಲಿಲ್ಲ. ಅಲಹಾಬಾದ್‍ನಿಂದ ಟ್ರಕ್‍ನಲ್ಲಿ ಬಂದಿರುವ ಮಿಗ್-21 ವಿಮಾನ ಬಿಡಿ ಬಿಡಿಯಾಗಿತ್ತು. ಏರ್ಫೋರ್ಸ್ ಗ್ರೌಂಡ್ ಇಂಜಿನಿಯರ್ ಗಳು ಮಿಗ್-21ನ್ನು ಜೋಡಿಸುವ ಕಾರ್ಯವನ್ನು ಮಾಡಿದ್ದಾರೆ.

ಈ ವಿಮಾನ 1965 ಹಾಗೂ 1971 ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿತ್ತು. ಆಕಾಶದಲ್ಲಿ ಮಿಂಚಿನ ವೇಗದಲ್ಲಿ ಹಾರುವ ಸಾಮರ್ಥ್ಯವಿರುವ ಜೆಟ್, ಶ್ರತುಗಳ ಹುಟ್ಟಡಗಿಸಿತ್ತು. ಕಾರ್ಗಿಲ್ ಕದನದಲ್ಲೂ ಮಿಗ್-21 ತನ್ನ ಸಾಮರ್ಥ್ಯ ತೋರುವ ಜತೆಗೆ ವಾಯು ಸೇನೆಯ ಶಕ್ತಿಯಾಗಿತ್ತು. ದಶಕದ ಹಿಂದೆ ಮಿಗ್-21 ಎಂಬ ಈ ಬಾಹುಬಲಿ ತನ್ನ ಹಾರಾಟವನ್ನು ನಿಲ್ಲಿಸಿತ್ತು. ಇದರ ಜೊತೆಗಿದ್ದ ಇತರೆ ವಿಮಾನಗಳು ಕಳೆದ ಡಿಸೆಂಬರ್ ನಲ್ಲಿ ಹಾರಾಟ ನಿಲ್ಲಿಸಿವೆ.

ಕಳೆದ ವರ್ಷ ನಮ್ಮ ಹೆಮ್ಮೆಯ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಎಲ್ಲರಿಗೂ ಗೊತ್ತೇ ಇದೆ. ಅವರು ಕೂಡಾ ಮಿಗ್-21ನ ಅಪ್ಡೇಟೆಡ್ ಜೆಟ್ ಮಿಗ್-21 ಬೈಸನ್ ಅನ್ನು ಬಳಸಿದ್ದರು. ಈಗ ಮಡಿಕೇರಿಗೆ ಬಂದ ವಿಮಾನವನ್ನು ಜೋಡಣೆ ಮಾಡಿ ಕ್ರೇನ್ ನೆರವಿನಿಂದ ವೀಕ್ಷಣೆಗೆ ಅನುಕೂಲ ಆಗುವಂತೆ ನಿಲ್ಲಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಯುದ್ಧ ವಿಮಾನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *