ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಈಗಾಗಲೇ ಮಳೆಗಾಲ (Rain) ಆರಂಭವಾಗಿದೆ. ಜಿಲ್ಲೆಯ ನಾನಾ ಭಾಗದಲ್ಲಿ ಈಗಾಗಲೇ ಸಣ್ಣಪುಟ್ಟ ಭೂಕುಸಿತಗಳು (Landslide) ಉಂಟಾಗುತ್ತಿದೆ. ಈ ಹಿನ್ನಲೆ ಜಿಲ್ಲಾಡಳಿತ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿತ್ತು. ಆದೇಶ ಉಲ್ಲಂಘಿಸಿದ 12 ಲಾರಿಗಳನ್ನು ಪೊಲೀಸರು ಹಾಗೂ ಆರ್‌ಟಿಓ (RTO) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಮಳೆಗಾಲ ಅರಂಭ ಅದ್ರೆ ಸಾಕು ಕೊಡಗಿನ ಬೆಟ್ಟಗುಡ್ಡದ ನಿವಾಸಿಗಳು ಅತಂಕಕ್ಕೆ ಒಳಗಾಗುತ್ತಾರೆ. ಈ ನಡುವೆ ಜಿಲ್ಲೆಯ ನಾನಾ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತಗಳು ಉಂಟಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಸ್ತೆ ಸಂಪರ್ಕಗಳಲ್ಲಿ ವ್ಯತ್ಯಯಗಳು ಉಂಟಾಗಬಾರದು ಎಂದು ಭಾರೀ ವಾಹನಗಳಿಗೆ ನಿಷೇಧ ಹೇರಲಾಗಿತ್ತು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಜು.6ರಿಂದ ಆ.5ರವರೆಗೆ 18.500 ಕೆಜಿಗಿಂತ ಹೆಚ್ಚಿನ ಸಾಗಾಣಿಕೆ ವಾಹನ, ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಮಲ್ಟಿ ಆಕ್ಸಿಲ್ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು.
ಅದರೆ ಕೆಲ ಲಾರಿ ಚಾಲಕರು ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ, ರಾತ್ರಿ ವೇಳೆಯಲ್ಲಿ ಮಡಿಕೇರಿಗೆ ಆಗಮಿಸುತ್ತಿದ್ದ ಲಾರಿಗಳನ್ನು ಪೊಲೀಸರು ಹಾಗೂ ಆರ್‌ಟಿಓ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ದಂಡ ವಿಧಿಸಿ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾಧಿಕಾರಿಗಳು ಭಾರೀ ವಾಹನಗಳಿಗೆ ನಿಷೇಧ ಹೇರಿದ್ದರು. ಚೆಕ್‌ಪೋಸ್ಟ್ ಸಿಬ್ಬಂದಿ ನಿರ್ಲಕ್ಷö್ಯದಿಂದಲೇ ವಾಹನಗಳು ಓಡಾಟ ನಡೆಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಆದೇಶ ಉಲ್ಲಂಘಿಸಿ 12 ಲಾರಿಗಳು ವಿವಿಧೆಡೆಗಳಿಂದ ಮಡಿಕೇರಿ ಮೂಲಕ ಮಂಗಳೂರು ಸೇರಿದಂತೆ ಇನ್ನಿತರ ಕಡೆಗಳಿಗೆ ಸಂಚರಿಸುತ್ತಿರುವ ಕುರಿತು ಸ್ಥಳೀಯ ಚಾಲಕರಿಗೆ ಮಾಹಿತಿ ತಿಳಿದು ಬಂದಿತ್ತು. ತಕ್ಷಣ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ ಬಳಿ ಲಾರಿಗಳನ್ನು ತಡೆದು ಪೊಲೀಸರು ಹಾಗೂ ಆರ್‌ಟಿಓ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಉಪನಿರೀಕ್ಷಕಿ ಅನ್ನಪೂರ್ಣ, ಸಂಚಾರಿ ಠಾಣಾಧಿಕಾರಿ ಶ್ರೀಧರ್, ಆರ್‌ಟಿಓ ಅಧಿಕಾರಿ ಮೋಹನ್ ಕುಮಾರ್ ಹಾಗೂ ಪೊಲೀಸರು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು, ಜೂನ್‌ನಲ್ಲೇ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ರಸ್ತೆ ಹಾಳಗುತ್ತದೆ ಎಂದು ಆದೇಶ ಮಾಡಲಾಗಿತ್ತು. ಇದೇ ಮೊದಲು ಈ ರೀತಿಯಾಗಿದೆ. ಕುಶಾಲನಗರ ಮೂಲಕ ಲಾರಿ ಚಾಲಕರು ಬಂದಿದ್ದಾರೆ. ಚೆಕ್‌ಪೋಸ್ಟ್ಗಳ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಭಾರೀ ವಾಹನಗಳು ಜಿಲ್ಲೆಗೆ ಪ್ರವೇಶಿಸಿದೆ. ಈ ಬಗ್ಗೆ ಕೊಡಗು ಎಸ್ಪಿ ಅವರೊಂದಿಗೆ ಸಭೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.