ಅಂದು ಡೌರಿ ಕೇಳಿದ್ದ ವರನನ್ನ ಮಂಟಪದಿಂದಲೇ ಕಳುಹಿಸಿದ್ಳು- ಇಂದು ಯುವತಿ ಮುಂದೆ ಸಾವಿರಾರು ಮದುವೆ ಪ್ರಸ್ತಾಪ

Public TV
1 Min Read

ಭೋಪಾಲ್: ಅಂದು ಮದುವೆಯಲ್ಲಿ ವರದಕ್ಷಿಣೆ ಕೇಳಿದ್ದ ವರ ಮತ್ತು ಆತನ ಕುಟುಂಬಸ್ಥರನ್ನು ಕಲ್ಯಾಣ ಮಂಟಪದಿಂದ ಹೊರ ಕಳುಹಿಸಿದ್ದ ವಧುವಿಗೆ ಇಂದು ಸಾವಿರಾರು ಮದುವೆ ಪ್ರಸ್ತಾಪಗಳು ಬರುತ್ತಿವೆ.

ಕಲ್ಯಾಣ ಮಂಟಪದಲ್ಲಿ ಮದುವೆ ನಿಂತರೆ ಹುಡುಗಿಯ ಜೀವನ ಹಾಳಾಯ್ತು ಎಂಬ ಹಳೆಯ ಮಾತಿದೆ. ಇಂದು ಈ ಯುವತಿ ಆ ಮಾತನ್ನ ಸುಳ್ಳಾಗಿಸಿದ್ದು, ಸಾವಿರಾರು ಮದುವೆ ಪ್ರಸ್ತಾಪಗಳು ಮನೆಯ ಬಾಗಿಲಿಗೆ ಬರುತ್ತಿದೆ. ಶಿವಾಂಗಿ ಎಂಬ ಯುವತಿಯೇ ವರದಕ್ಷಿಣೆ ಕೇಳಿದ್ದ ವರನನ್ನು ವಾಪಾಸ್ಸು ಕಳುಹಿಸಿದ ದಿಟ್ಟ ವಧು.

ಫೆಭ್ರವರಿ 15ರಂದು ಪ್ರಸಾದ್ ಅಗರವಾಲ್ ಪುತ್ರಿ ಶಿವಾಂಗಿ ಮದುವೆ ಗ್ವಾಲಿಯರ್ ವ್ಯಾಪಾರಿ ಸುರೇಶಚಂದ್ರ ಅಗರವಾಲ್ ಎಂಬವರ ಪುತ್ರ ಪ್ರತೀಕ್ ಜೊತೆ ನಿಶ್ಚಯವಾಗಿತ್ತು. ಫೆಬ್ರವರಿ 15ರಂದು ಕಲ್ಯಾಣ ಮಂಟಪದಲ್ಲಿ ಎರಡೂ ಕುಟುಂಬಸ್ಥರು ಮದುವೆ ಶಾಸ್ತ್ರಗಳಲ್ಲಿ ತೊಡಗಿಸಿಕೊಂಡಿದ್ದರು.

ಮದುವೆ ಶಾಸ್ತ್ರಗಳು ಆರಂಭಗೊಳ್ಳುತ್ತಿದ್ದಂತೆ ವರ ಪ್ರತೀಕ್ ತಂದೆ ಬಿದಾಯಿ ಮೊದಲು ವರದಕ್ಷಿಣೆಯ ಹಣ ಎರಡು ಲಕ್ಷ ಮತ್ತು ಚಿನ್ನಾಭರಣ ನೀಡಬೇಕೆಂದು ಷರತ್ತು ವಿಧಿಸಿದ್ದರು. ಈ ವೇಳೆ ತಂದೆಯ ಕಣ್ಣೀರು ನೋಡಿದ ಶಿವಾಂಗಿ ಹಸೆಮಣೆ ಮೇಲೆ ಕುಳಿತುಕೊಳ್ಳಲು ಒಪ್ಪಿಕೊಳ್ಳಲಿಲ್ಲ. ಬದಲಾಗಿ ತಂದೆಗೆ ಕಣ್ಣೀರು ಹಾಕಿಸಿದ್ದ ವರ ಮತ್ತು ಆತನ ಕುಟುಂಬಸ್ಥರನ್ನು ಮಂಟಪದಿಂದ ಹೊರ ಕಳುಹಿಸುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು.

ಎಂಜಿನಿಯರಿಂಗ್ ಮತ್ತು ಎಂಬಿಎ ಪದವೀಧರೆ ಆಗಿರುವ ಶಿವಾಂಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಕಲ್ಯಾಣ ಮಂಟಪದಲ್ಲಿಯ ಘಟನೆಯನ್ನು ಕೆಟ್ಟ ಕನಸು ಎಂದು ತಿಳಿದು ತನ್ನ ವೃತ್ತಿಪರ ಜೀವನದತ್ತ ಗಮನ ನೀಡುತ್ತಿದ್ದಾಳೆ. ರೈಲ್ವೇ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿದ್ದಾಳೆ ಎಂದು ಶಿವಾಂಗಿ ತಂದೆ ಹೇಳುತ್ತಾರೆ.

ಶಿವಾಂಗಿ ದಿಟ್ಟ ನಿರ್ಧಾರದ ಬಗ್ಗೆ ಸ್ಥಳೀಯ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸಿದ್ದವು. ಸಾಮಾಜಿಕ ಜಾಲತಾಣದಲ್ಲಿ ಶಿವಾಂಗಿ ನಿರ್ಧಾರಕ್ಕೆ ಎಲ್ಲರು ಬೆಂಬಲ ಸೂಚಿಸಿದ್ದರು. ಅಂದು ಮದುವೆ ತಿರಸ್ಕರಿಸಿದ್ದ ಯುವತಿಗೆ ಇಂದು ಸಾವಿರಾರು ಮದುವೆ ಪ್ರಸ್ತಾಪಗಳು ಬರುತ್ತಿವೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಪ್ರಕಟಿಸಿವೆ.

Share This Article
Leave a Comment

Leave a Reply

Your email address will not be published. Required fields are marked *