ಸಾರ್ವಜನಿಕರ ಆಸ್ತಿಗೆ ಹಾನಿಗೊಳಿಸಿದ್ರೆ ಪ್ರತಿಭಟನಾಕಾರರಿಂದಲೇ ವಸೂಲಿ- ಮಸೂದೆ ಜಾರಿಗೆ ಮಧ್ಯಪ್ರದೇಶ ಚಿಂತನೆ

Public TV
1 Min Read

ಭೋಪಾಲ್‌: ಪ್ರತಿಭಟನೆ ವೇಳೆ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗಳಿಗೆ ಹಾನಿಯುಂಟುಮಾಡುವಂತಹ ಪ್ರತಿಭಟನಾಕಾರರಿಂದಲೇ ಹಣ ವಸೂಲಿ ಮಾಡುವ ಮಸೂದೆ ಜಾರಿಗೊಳಿಸಲು ಮಧ್ಯಪ್ರದೇಶ ಸರ್ಕಾರ ಚಿಂತಿಸಿದೆ. ಆಸ್ತಿ ಹಾನಿಗೆ ತಗುಲುವ ವೆಚ್ಚವನ್ನು ಮರುಪಡೆಯಲು ರಾಜ್ಯಾದ್ಯಂತ ಹಕ್ಕು ನ್ಯಾಯಮಂಡಳಿ ಸ್ಥಾಪಿಸಲು ಯೋಜಿಸಿದೆ.

ಬಿಜೆಪಿ ನೇತೃತ್ವದ ಸರ್ಕಾರ ಆಡಳಿತದಲ್ಲಿರುವ ಉತ್ತರ ಪ್ರದೇಶ ಹಾಗೂ ಹರಿಯಾಣದಲ್ಲಿ ಈ ಕಾನೂನನ್ನು ಜಾರಿಗೊಳಿಸಲಾಗಿದೆ. ಆಸ್ತಿಗೆ ಹಾನಿ ಮಾಡುವವರಿಂದ ಪರಿಹಾರ ಮರುಪಡೆಯಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು 2020ರಲ್ಲಿ ರಾಜ್ಯಾದ್ಯಂತ ನ್ಯಾಯಮಂಡಳಿಗಳನ್ನು ಸ್ಥಾಪಿಸಿದ್ದಾರೆ. ಇದನ್ನೂ ಓದಿ: ಬೆಕ್ಕು, ಶ್ವಾನಗಳಲ್ಲೂ ಕೊರೊನಾ ರೂಪಾಂತರ ಆಲ್ಫಾ ಸೋಂಕು ಪತ್ತೆ- ಅಧ್ಯಯನ

ನ್ಯಾಯಮಂಡಳಿಗಳನ್ನು ಸ್ಥಾಪಿಸುವ ಹೊಸ ಕಾನೂನನ್ನು ಶೀಘ್ರವೇ ಜಾರಿಗೆ ತರಲಾಗುವುದು. ನ್ಯಾಯಮಂಡಳಿಗಳು ಸಿವಿಲ್ ನ್ಯಾಯಾಲಯದಂತೆಯೇ ಅಧಿಕಾರ ಹೊಂದಿರುತ್ತವೆ. ಸಾರ್ವಜನಿಕ ಆಸ್ತಿಗೆ ಹಾನಿಯಾದ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿ ಜಿಲ್ಲಾಧಿಕಾರಿಗಳದ್ದಾಗಿರುತ್ತದೆ ಎಂದು ಮಧ್ಯಪ್ರದೇಶ ಸರ್ಕಾರ ತಿಳಿಸಿದೆ.

ನ್ಯಾಯಮಂಡಳಿಯಲ್ಲಿರುವ ಪ್ರಕರಣಗಳನ್ನು ಮೂರು ತಿಂಗಳೊಳಗೆ ಪರಿಹರಿಸಬೇಕು. ನ್ಯಾಯಮಂಡಳಿ ಆದೇಶವನ್ನು ಹೈಕೋರ್ಟ್‌ನಲ್ಲಿ ಮಾತ್ರ ಪ್ರಶ್ನಿಸಬಹುದು. ವಸೂಲಿ ಮಾಡದಿದ್ದರೆ ಆರೋಪಿಗಳ ಆಸ್ತಿಯನ್ನೂ ಹರಾಜು ಹಾಕಬಹುದು. ಜಿಲ್ಲಾಮಟ್ಟದಲ್ಲಿ ಹಕ್ಕು ಆಯುಕ್ತರಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಕುರಿತು ನ್ಯಾಯಾಧೀಕರಣಕ್ಕೆ ವರದಿ ಸಲ್ಲಿಸುತ್ತಾರೆ ಎಂದು ಹೇಳಿದೆ. ಇದನ್ನೂ ಓದಿ: ‘ಅಪ್ಪು’ ಸವಿನೆನಪು – ನ.9 ರಂದು ಅಭಿಮಾನಿಗಳಿಗೆ ಅನ್ನಸಂತರ್ಪಣೆ

ಆದರೆ, ಈ ಮಸೂದೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಮಾಜಿ ಕಾನೂನು ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ.ಸಿ.ಶರ್ಮಾ ಮಾತನಾಡಿ, ಮತದಾರರಿಗೆ ಪ್ರತಿಭಟಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ಸರ್ಕಾರ, ಅವುಗಳನ್ನು ಹತ್ತಿಕ್ಕಲು ಈ ಕಾನೂನುಗಳನ್ನು ತರುತ್ತಿದೆ ಎಂದು ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇದೇ ನವೆಂಬರ್‌ ಅಂತ್ಯಕ್ಕೆ ನಿಗದಿಯಾಗಿರುವ ವಿಧಾನಸಭಾ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಜಾರಿ ಬಗ್ಗೆ ಚರ್ಚಿಸಲಾಗುವುದು ಎಂದು ಸರ್ಕಾರ ಹೇಳಿದೆ.

Share This Article
Leave a Comment

Leave a Reply

Your email address will not be published. Required fields are marked *