ಉದ್ಯೋಗ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದ ಗ್ಯಾಂಗ್ ಅರೆಸ್ಟ್

Public TV
2 Min Read

– 35 ಮೊಬೈಲ್, 52 ನಕಲಿ ಸಿಮ್, 3 ಲ್ಯಾಪ್‍ಟಾಪ್ ವಶ
– ವಂಚನೆಯಲ್ಲಿ ಇಬ್ಬರು ಹುಡುಗಿಯರು ಶಾಮೀಲು
– 1 ಕೋಟಿ ರೂ. ವಂಚನೆ ಆರೋಪ

ಭೋಪಾಲ್: ಉದ್ಯೋಗ ಕೊಡಿಸುವುದಾಗಿ ಹೇಳಿ ಯುವಕ ಹಾಗೂ ಯುವತಿಯರಿಂದ ಹಣ ಪಡೆದು ಚಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಮಧ್ಯಪ್ರದೇಶ ಇಂದೋರ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಇಬ್ಬರು ಯುವತಿಯರು ಶಾಮೀಲಾಗಿದ್ದಾರೆ.

ಈ ಗ್ಯಾಂಗ್‍ನ ಕಿಂಗ್‍ಪಿನ್ ರಂಜಿತ್ ಸಿಂಗ್ ಕುಶ್ವಾಹ ಪರಾರಿಯಾಗಿದ್ದಾನೆ. ಯುವಕರಿಗೆ ವಂಚಿಸುತ್ತಿದ್ದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ನೀಡಿದ ಮಾಹಿತಿಯಿಂದ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಬಂಧಿತರಿಂದ 14 ಎಟಿಎಂ ಕಾರ್ಡ್‍ಗಳು, 34 ಮೊಬೈಲ್‍ಗಳು, 52 ನಕಲಿ ಸಿಮ್‍ಗಳು, 3 ಲ್ಯಾಪ್‍ಟಾಪ್‍ಗಳು, ಆಕ್ಟಿವಾ, ನಗದು ಮತ್ತು ಗ್ರಾಹಕರ ಬಳಿ ಇರುವ 16 ರೆಜಿಸ್ಟರ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ರಂಜಿತ್ ಸಿಂಗ್ ನಡೆಸುತ್ತಿದ್ದ ಕಂಪನಿಯಲ್ಲಿ ಕೆಲಸಕ್ಕಾಗಿ ನನಗೆ ಫೋನ್ ಬಂದಾಗ ನಾನು ರಾಜಸ್ಥಾನದಲ್ಲಿದ್ದೆ. ನಾನು ಕೆಲಸಕ್ಕೆ ಸೇರಿದ ಮೇಲೆ ನಿರುದ್ಯೋಗಿ ಯುವಕರ ಮಾಹಿತಿ ಪಡೆದು ಅವರಿಗೆ ಪ್ರತಿದಿನ ಕರೆಯಲು ಹೇಳಿದರು. ಅಷ್ಟೇ ಅಲ್ಲದೆ ಉದ್ಯೋಗ ಕೊಡಿಸಲು ನೋಂದಣಿ ಹೆಸರಿನಲ್ಲಿ 1,500 ರೂ. ಪಡೆಯುವಂತೆ ತಿಳಿಸಿದ್ದರು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದ ದರ್ಶನ್ ತಿಳಿಸಿದ್ದಾರೆ.

ರಂಜಿತ್ ಹಾಗೂ ಆತನ ಜೊತೆಗಿದ್ದ ಕೆಲವರು ಸಾಮಾಜಿಕ ಜಾಲತಾಣದ ಮೂಲಕ ಯುವಕರ ಫೋನ್ ನಂಬರ್ ಗಳನ್ನು ಪಡೆಯುತ್ತಿದ್ದರು. ನಂತರ ಕಾಲ್ ಸೆಂಟರ್ ನಿಂದ ಫೋನ್ ಮಾಡಿ, ಉತ್ತಮ ಕೆಲಸ ಕೊಡಿಸುವುದಾಗಿ ಹಣ ಕೇಳುತ್ತಿದ್ದರು. ಅಷ್ಟೇ ಅಲ್ಲದೆ ಉದ್ಯೋಗಕ್ಕಾಗಿ ಖಾತೆ ತೆರೆಯಲು, ಲ್ಯಾಪ್‍ಟಾಪ್ ಖರೀದಿಗೆ ಸೇರಿದಂತೆ ಇತರ ಖರ್ಚುಗಳಿಗೆ ಹಣವನ್ನು ಠೇವಣಿ ಪಡೆಯುತ್ತಿದ್ದರು ಎಂದು ದರ್ಶನ್ ದೂರಿದ್ದಾರೆ.

ಆರೋಪಿಗಳು ನಕಲಿ ಐಡಿ ನೀಡಿ ಸಿಮ್ ಕಾರ್ಡ್ ಖರೀದಿಸುತ್ತಿದ್ದರು. ಈ ರೀತಿ ಸುಮಾರು 100 ಸಿಮ್‍ಕಾರ್ಡ್ ಗಳನ್ನು ಖರೀದಿಸಿ, ಯುವಕರಿಗೆ ಮೋಸ ಮಾಡಿದ್ದಾರೆ. ಯುವಕರಿಂದ ಹಣ ಪಡೆದ ಬಳಿಕ ಸಿಮ್‍ಕಾರ್ಡ್ ಗಳನ್ನು ಮುರಿದು ಹಾಕುತ್ತಿದ್ದರು. ಇದನ್ನು ವಿರೋಧಿಸಿದ್ದಕ್ಕೆ ನನಗೆ ಬೆದರಿಕೆ ಹಾಕಿದರು. ಹೀಗಾಗಿ ನಾನು ಅವರಿಂದ ದೂರ ಉಳಿದೆ. ಕೆಲ ದಿನಗಳ ಬಳಿಕ ಇಂದೋರ್ ನಗರದಲ್ಲಿ ಟಿಫಿನ್ ಸೆಂಟರ್ ಪ್ರಾರಂಭಿಸಿದೆ ಎಂದು ದರ್ಶನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಂಚಿಸಿದ್ದು ಹೇಗೆ?
ಆರೋಪಿಗಳು ಕೆಲವು ಪಾಲುದಾರರೊಂದಿಗೆ ಒಂದು ವೆಬ್‍ಸೈಟ್ ಪ್ರಾರಂಭಿಸಿದ್ದಾರೆ. ನಂತರ ಯುವಕ ಹಾಗೂ ಯುವತಿಯರ ಪ್ರೊಫೈಲ್ ಮತ್ತು ಆಯ್ಕೆಯ ಪ್ರಕಾರ ಉತ್ತಮ ಕಂಪನಿಯಲ್ಲಿ ಕೆಲಸ ಕೊಡಿಸುವ ಭರವಸೆ ನೀಡುತ್ತಿದ್ದರು. ಆರೋಪಿಗಳು ಫೀಸ್ ನೆಪದಲ್ಲಿ ಉದ್ಯೋಗ ಆಕಾಂಕ್ಷಿಗಳಿಂದ 3 ಸಾವಿರ ರೂ.ದಿಂದ 30 ಸಾವಿರ ರೂ.ವರೆಗೂ ಹಣ ಪಡೆಯುತ್ತಿದ್ದರು. ಒಂದು ಸಾವಿರಕ್ಕೂ ಹೆಚ್ಚು ನಿರುದ್ಯೋಗಿಗಳನ್ನು ವಂಚಿಸಿದ ನಾಲ್ಕು ಜನರನ್ನು ಬಂಧಿಸಲಾಗಿದೆ. ಆರೋಪಿಗಳ ಕಚೇರಿಯಲ್ಲಿ ನೂರಾರು ಯುವಕರ ಬಯೋಡೇಟಾ, ಪಾಸ್‍ಬುಕ್‍ಗಳು ಮತ್ತು ಅವರ ಬ್ಯಾಂಕ್ ಖಾತೆಗಳ ಇತರ ಪ್ರಮುಖ ಮಾಹಿತಿ ಪತ್ತೆಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *