ತಮ್ಮನ್ನಾರನ್ನ ವಿರೋಧಿಸುವುದಾದ್ರೆ ಅವರ ಸಿನಿಮಾಗಳನ್ನೂ ನೋಡಬೇಡಿ: ಮಧು ಬಂಗಾರಪ್ಪ

Public TV
2 Min Read

– ನಟ ಶಿವರಾಜ್ ಕುಮಾರ್ ತಮಿಳಿನ ಜೈಲರ್‌ ಚಿತ್ರದಲ್ಲಿ ನಟಿಸಿಲ್ಲವೇ..? ಅಂತ ಪ್ರಶ್ನೆ
– ನೇಮಕವಾಗುವ 51 ಸಾವಿರ ಶಿಕ್ಷಕರಿಗೆ 2 ಸಾವಿರ ಹೆಚ್ಚುವರಿ ವೇತನ

ಶಿವಮೊಗ್ಗ: ಮಾರ್ಕೆಟಿಂಗ್‌ ಸ್ಟ್ರ್ಯಾಟಜಿಗಾಗಿ ತಮನ್ನಾರನ್ನ ಮೈಸೂರು ಸ್ಯಾಂಡಲ್‌ ಸೋಪ್‌ ರಾಯಭಾರಿಯನ್ನಾಗಿ ಮಾಡಿದ್ದಾರೆ. ಒಂದು ವೇಳೆ ತಮ್ಮನ್ನಾ ಅವರನ್ನ ವಿರೋಧಿಸುವುದಾದ್ರೆ ಅವರ ಚಿತ್ರಗಳನ್ನ ನೀವು ನೋಡಬೇಡಿ ಅಂತ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಸ್ಯಾಂಡಲ್‌ ಸೋಪ್‌ಗೆ ರಾಯಭಾರಿಯನ್ನಾಗಿ ತಮನ್ನಾ ಅವರ ಆಯ್ಕೆಯನ್ನ ಸಮರ್ಥಿಸಿಕೊಂಡಿದ್ದಾರೆ.

ಯಾವುದೇ ವಿಷಯವಿದ್ದರೂ ಟೀಕೆ ಟಿಪ್ಪಣಿಗಳು ಇದ್ದೇ ಇರುತ್ತದೆ. ಬಹುಶಃ ಮಾರ್ಕೆಟಿಂಗ್ ಸ್ಟ್ರ್ಯಾಟಜಿಗಾಗಿ ಈ ರೀತಿ ಮಾಡಿರಬಹುದು. ಒಂದು ವೇಳೆ ತಮ್ಮನ್ನಾ ಅವರನ್ನು ವಿರೋಧಿಸುವುದಾದ್ರೆ ಅವರ ಚಿತ್ರಗಳನ್ನು ನೀವು ನೋಡಬೇಡಿ. ಹಾಗೇ ನೋಡಿದ್ರೆ ನಟ ಶಿವರಾಜ್ ಕುಮಾರ್ ಅವರೂ ತಮಿಳಿನ ʻಜೈಲರ್ʼ ಸಿನಿಮಾದಲ್ಲಿ ನಟಿಸಿಲ್ಲವೇ..? ಕೆಎಸ್‌ಡಿಎಲ್ ಒಂದು ಸಂಸ್ಥೆಯಾಗಿ ಅದಕ್ಕೆ ತನ್ನದೇ ನಿರ್ಧಾರ ಕೈಗೊಳ್ಳುವ ಹಕ್ಕು ಇದೆ.‌ ಪ್ರತಿಯೊಂದರಲ್ಲೂ ತಪ್ಪು ಹುಡುಕೋದು ಸರಿಯಲ್ಲ. ಅವರು ಎಲ್ಲಾ ರೀತಿಯಲ್ಲಿ ಯೋಚಿಸಿ ಸೂಕ್ತ ನಿರ್ಧಾರ ಕೈಗೊಂಡಿರುತ್ತಾರೆ. ಎಲ್ಲದರಲ್ಲೂ ತಪ್ಪು ಹುಡುಕುವ ಚಾಳಿ ಇದ್ದರೆ ಅದನ್ನು ರಿಪೇರಿ ಮಾಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಮಲೆನಾಡಿನಲ್ಲಿ ಮಂಗನ ಕಾಟ ಹೆಚ್ಚಾಗಿವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಂಗನ ಕಾಟದ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆ. ಆ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ. ಮಂಕಿ ಪಾರ್ಕ್ ಸ್ಥಾಪನೆ ಹಾಗೂ ಆನೇ ಕಾರಿಡರ್ ಸ್ಥಾಪನೆ ದೊಡ್ಡ ಮಟ್ಟದಲ್ಲಿ ಆಗಬೇಕಾದ ಕೆಲಸ, ಅದು ಅನುಷ್ಠಾನ ಆಗಬೇಕು. ಆನೆ ಕಾರಿಡರ್ ಕುರಿತಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಈಗಾಗಲೇ ಗಮನ ಹರಿಸಿದ್ದಾರೆ. ವಿಧಾನಸಭೆಯಲ್ಲಿ ಮಂಗನ ಕಾಟ ಹಾಗೂ ಆನೆಯ ಸಮಸ್ಯೆ ಕುರಿತು ಚರ್ಚೆ ಆಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ 51 ಸಾವಿರ ಶಿಕ್ಷಕರ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಿಂದಿನ ಸರ್ಕಾರಗಳು ಈ ವಿಷಯದಲ್ಲಿ ತಡವಾಗಿ ಕ್ರಮ ಕೈಗೊಳ್ಳುತ್ತಿದ್ದವು. ಏಕೆಂದರೆ ಒಂದು ತಿಂಗಳ ವಿಳಂಬವಾಗಿ ನೇಮಕ ಮಾಡಿದರೂ ಸರ್ಕಾರಕ್ಕೆ ಉಳಿತಾಯವಾಗುತ್ತಿತ್ತು. ಆದರೆ, ಸಿದ್ದರಾಮಯ್ಯ ಅವರ ಸರ್ಕಾರದ ಬೊಕ್ಕಸ ಭರ್ತಿಯಾಗಿದೆ. ಹಾಗಾಗಿ 51 ಸಾವಿರ ಶಿಕ್ಷಕರ ನೇಮಕ ಮಾಡಿದ್ದೇವೆ. 29-30 ರಂದು ಶಾಲೆ ಆರಂಭವಾಗಲಿದೆ. ಈ ಸಂಬಂಧ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಯಲಿದೆ. ಈ 51 ಸಾವಿರ ಶಿಕ್ಷಕರಿಗೂ ನಾವು ಬಹಳ ಏನು ಹಣ ಕೊಡುತ್ತಿಲ್ಲ. ಈ ವರ್ಷದಿಂದ 2,000 ಸೇರಿಸಿ ಕೊಡುತ್ತಿದ್ದೇವೆ. ಸಿದ್ದರಾಮಯ್ಯ ಸರ್ಕಾರದ ಖಜಾನೆ ಭರ್ತಿ ಆಗಿರುವುದರಿಂದ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.

Share This Article