– ಮಸೀದಿ ಮುಂದೆ ಕರ್ಪೂರ, ಡಿಜೆ ಸದ್ದು, ಜೈಶ್ರೀರಾಮ್ ಜೈಕಾರ
– 20 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ
ಮಂಡ್ಯ: ಮದ್ದೂರಿನಲ್ಲಿ ಹಿಂಸಾಚಾರದ ಬಳಿಕ ಬುಧವಾರ ಬಿಜೆಪಿ-ಜೆಡಿಎಸ್ ನಾಯಕರ ಸಮ್ಮುಖದಲ್ಲಿ 27 ಗಣೇಶ ಮೂರ್ತಿಗಳ 3 ಕಿ.ಮೀ. ಮೆರವಣಿಗೆ ನಡೀತು. ಈ ವೇಳೆ, ಕೇಸರಿ ವಿರಾಟರೂಪ ಪ್ರದರ್ಶನವಾಯಿತು. 20 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಮೆರವಣಿಗೆ ಮೂಲಕ ಸಾಗಿ ಶಿಂಷಾ ನದಿಯಲ್ಲಿ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಮಾಡಲಾಯಿತು.
ಕೇಸರಿ ಶಾಲುಗಳು-ಧ್ವಜಗಳ ಹಾರಾಟ, ಜೈ ಶ್ರೀರಾಮ್… ಜೈ ಗಣೇಶ ಜೈಕಾರಗಳು, ತಮಟೆ-ಡಿಜೆ, ಪಟಾಟಿಕಯ ಸದ್ದು ಮುಗಿಲುಮುಟ್ಟಿತ್ತು. ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಕಾಶಿ ವಿಶ್ವನಾಥ ದೇಗುಲದಲ್ಲಿ ಬಿಜೆಪಿಗರು ಪೂಜೆ ಸಲ್ಲಿಸಿದರು. ಐಬಿ ಸರ್ಕಲ್ನಿಂದ ಮೆರವಣಿಗೆ ಪ್ರಾರಂಭವಾಗಿ ಪೇಟೆಬೀದಿ ಮಾರ್ಗವಾಗಿ ಕೊಲ್ಲಿ ಸರ್ಕಲ್ನಲ್ಲಿ ಅಂತ್ಯವಾಯಿತು.
ಐಬಿ ಸರ್ಕಲ್ನಲ್ಲಿ ಅಶೋಕ್, ಸಿ.ಟಿ.ರವಿ, ಅಶ್ವಥ್ ನಾರಾಯಣ್ರನ್ನು ಹೊತ್ತು ಕಾರ್ಯಕರ್ತರು ಕುಣಿದರು. ಕೇಸರಿ ಬಾವುಟ ಹಿಡಿದು ಅಶೋಕ್ ಸಾಗಿದರು. ಅಭಿಮಾನಿಯೋರ್ವ ಅಂಬರೀಶ್ ಫ್ಲೆಕ್ಸ್ ಹಿಡಿದು ಬಂದಾಗ ಅಭಿಮಾನಿಗಳ ಹರ್ಷೋದ್ಘಾರ ಜೋರಾಗಿತ್ತು. ಕಲ್ಲು ತೂರಿದ್ದ ಮಸೀದಿ ಮುಂಭಾಗ ಮೆರವಣಿಗೆ ಬಂದಾಗ ಭಾರಿ ಪ್ರಮಾಣದಲ್ಲಿ ಕರ್ಪೂರ ಹಚ್ಚಲಾಯಿತು. ಬಳಿಕ ಹೊಳೆ ಆಂಜನೇಯ ದೇವಾಲಯ ಬಳಿಯ ಶಿಂಷಾ ನದಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಡೀತು.
ಮಂಡ್ಯ ಮಾತ್ರವಲ್ಲದೇ ಮೈಸೂರು, ರಾಮನಗರ, ಹಾಸನ, ಚಾಮರಾಜನಗರ, ಬೆಂಗಳೂರಿನಿAದಲೂ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಗಿತ್ತು. ಮದ್ಯ ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿತ್ತು. ಮೆರವಣಿಗೆ ನಡುವೆ ರಾಮಮಂದಿರ ಪಾರ್ಕ್ ಬಳಿ ವೇದಿಕೆ ಮೇಲೆ ಬಿಜೆಪಿ ನಾಯಕರು ಭಾಷಣ ಮಾಡಿದರು. ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರ ತಂಡ ಕಲ್ಲೆಸೆತದಲ್ಲಿ ಗಾಯಗೊಂಡವರ ಮನೆಗೆ ಭೇಟಿ ನೀಡಿದ್ದರು.