ಬಿಜೆಪಿ 40 ಪರ್ಸೆಂಟ್ ಕೊಚ್ಚೆಯಲ್ಲಿ ಉರುಳಾಡುತ್ತಿದೆ, ಕರ್ನಾಟಕ `ಕಮಿಷನ್ ರಾಜ್ಯ’ವಾಗಿದೆ- HDK

Public TV
3 Min Read

ಬೆಂಗಳೂರು: ಡಬಲ್ ಎಂಜಿನ್ ಬಿಜೆಪಿ (BJP) ಸರ್ಕಾರ 40 ಪರ್ಸೆಂಟ್ ಕೊಚ್ಚೆಯಲ್ಲಿ ಉರುಳಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ತಾಜಾ ಉದಾಹರಣೆ ಬೇಕಾ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಅಮಿತ್ ಶಾ (Amit Shah) ಅವರಿಗೆ ಕುಟುಕಿದ್ದಾರೆ.

ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Maadal Virupakshappa) ಅವರ ಪುತ್ರನ ಮನೆಯಲ್ಲಿ 7.62 ಕೋಟಿ ರೂ. ನಗದು ಪತ್ತೆಯಾದ ವಿಚಾರಕ್ಕೆ ಸಿಡಿಮಿಡಿಗೊಂಡ ಹೆಚ್‌ಡಿಕೆ ಸರಣಿ ಟ್ವೀಟ್ ಮೂಲಕ ಟೀಕಿಸಿದ್ದಾರೆ. ಇದನ್ನೂ ಓದಿ: 40 ಲಕ್ಷ ಲಂಚ ಪ್ರಕರಣ – ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ರಾಜೀನಾಮೆ

ಹೆಚ್‌ಡಿಕೆ ಟ್ವೀಟ್‌ನಲ್ಲಿ ಏನಿದೆ?
ರಾಜ್ಯಕ್ಕೆ ಮತ್ತೆ ಹಾರಿ ಬಂದ ಅಮಿತ್ ಶಾ ಅವರಿಗೆ ಹಾರ್ದಿಕ ಸ್ವಾಗತ.. ಸುಸ್ವಾಗತ. ನಿಮ್ಮ ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಭರ್ತಿ 40 ಪರ್ಸೆಂಟ್ ಕಮಿಷನ್ ಉಡಾಯಿಸುತ್ತಿದೆ ಎನ್ನುವುದಕ್ಕೆ ನಿಮ್ಮ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಕಂತೆ ಕಂತೆಗಳ ಪುರಾಣವೇ ದೊಡ್ಡ ಪುರಾವೆ.

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹಾಗೂ ಸರ್ ಎಂ.ವಿಶ್ವೇಶ್ವರಯ್ಯನವರ ಕನಸಿನ ಕೂಸಾದ ಸಾಬೂನು ಕಾರ್ಖಾನೆಯನ್ನು ಸ್ವಚ್ಚಗೊಳಿಸುವುದು ಎಂದರೆ ಇದೇನಾ? ನಿಮ್ಮ `ಸ್ವಚ್ಚ ಭಾರತ್’ ಪರಿಕಲ್ಪನೆಯೇ ಅದ್ಭುತ!! ವಾರೆವ್ಹಾ.. ಅಮಿತ್ ಶಾ ಅವರೇ!! ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ಬಿಜೆಪಿ ಶಾಸಕನ ಪುತ್ರನ ಮನೆಯಲ್ಲಿ ಸಿಕ್ಕಿದ್ದು ಬರೋಬ್ಬರಿ 6 ಕೋಟಿ!

ಅಮಿತ್ ಶಾ ಅವರೇ ಈಗ ಹೇಳಿ.. ಕರ್ನಾಟಕ ಯಾರ ಎಟಿಎಂ? ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ ಎಂದು ನೀವು ಹೇಳಿದ್ದು ಈ ಅರ್ಥದಲ್ಲಿಯಾ? ಭ್ರಷ್ಟಾಚಾರ ಮುಕ್ತ ಮಾಡುವುದು ಎಂದರೆ ಅಪ್ಪನ ಪರವಾಗಿ ಪುತ್ರರತ್ನ ಕಂತೆ-ಕಂತೆ ಕಟ್ಟುಗಳನ್ನು ಸ್ವಂತ ಎಟಿಎಂಗೆ ಇಳಿಸುವುದಾ? ಸಾಬೂನು ಕಾರ್ಖಾನೆಯನ್ನು ಸಖತ್ತಾಗಿ ಸಾರಿಸಿ ಗುಂಡಾಂತರ ಮಾಡುವುದಾ?

ನಿಮ್ಮ ಡಬಲ್ ಎಂಜಿನ್ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕೊಚ್ಚೆಯಲ್ಲಿ ಉರುಳಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ತಾಜಾ ಉದಾಹರಣೆ ಬೇಕಾ? ಕನ್ನಡಿಗರ ಹೆಮ್ಮೆಯ ಪ್ರತೀಕ ಸಾಬೂನು ಕಾರ್ಖಾನೆಯನ್ನು 40 ಪರ್ಸೆಂಟ್ ಕಮಿಷನ್ ಸೋಪಿನಿಂದ ಭರ್ಜರಿಯಾಗಿ ತೊಳೆಯುತ್ತಿರುವ ಬಿಜೆಪಿ ಪಕ್ಷದ ಶಾಸಕರ ಬೆನ್ನು ತಟ್ಟುವಿರೋ ಅಥವಾ ಪಕ್ಷದಿಂದ ಹೊರಗಟ್ಟುವಿರೋ?

ಶಾಸಕರ ಪುತ್ರರತ್ನ ಪಸಂದಾಗಿರಿಸಿದ್ದ ಕಂತೆಗಳು ಯಾರ ಹುಂಡಿಗೆ? ಶಾಸಕರ ಮನೆಯಲ್ಲೇ 6 ಕೋಟಿ ಸಿಕ್ಕರೆ, ಇನ್ನು 40 ಪರ್ಸೆಂಟ್ ಚರಂಡಿಯಲ್ಲಿ ತೆವಳುತಿರುವ ಸಚಿವರ ಮನೆಗಳಲ್ಲಿ ಇನ್ನೆಷ್ಟು ಸಿಗಬಹುದು? ರಾಮರಾಜ್ಯ ಮಾಡುತ್ತೇವೆಂದು ಹೇಳಿ ಕರ್ನಾಟಕವನ್ನು `ಕಮಿಷನ್ ರಾಜ್ಯ’ ಮಾಡಿದ್ದೀರಿ. ಹೌದಲ್ಲವೇ ಅಮಿತ್ ಶಾ ಅವರೇ?

ಮೈಸೂರಿನಲ್ಲಿ ನಿನ್ನೆ ನಾನು ಹೇಳಿದ್ದೆ. ಈ ರೀತಿ ಪರ್ಸೆಂಟ್ ವ್ಯವಹಾರ ಮುಂದುವರಿದರೆ ಮುಂದೆ 10 ಪರಪ್ಪನ ಅಗ್ರಹಾರ ಜೈಲುಗಳಾನ್ನಾದರೂ ಕಟ್ಟಿಸಬೇಕಾಗುತ್ತದೆ ಎಂದು. ಕಳೆದ ಮೂರೂವರೆ ವರ್ಷದಿಂದ ಕಮಿಷನ್ ಕೊಚ್ಚೆಯಲ್ಲಿ ಉರುಳಾಡಿದ್ದ ಬಿಜೆಪಿ ಸರ್ಕಾರ, ಈಗ ನೋಟಿನ ಕಂತೆಗಳೊಂದಿಗೆ ಆ ಅಸಹ್ಯದ ಪರಾಕಾಷ್ಠೆಯನ್ನು ದರ್ಶನ ಮಾಡಿಸಿದೆ.

ಕಾಂಗ್ರೆಸ್ (Congress) 20 ಪರ್ಸೆಂಟ್, ಬಿಜೆಪಿ 40 ಪರ್ಸೆಂಟ್. ಕರ್ನಾಟಕವನ್ನು `ಕಮಿಷನ್ ರಾಜ್ಯ’ ಮಾಡಿದ ಪಾಪ ಈ ರಾಷ್ಟ್ರೀಯ ಪಕ್ಷಗಳದ್ದು, ಇಂಥ ಪಾಪದ ದುಡ್ಡಿನಿಂದಲೇ ಚುನಾವಣೆ ನಡೆಸುವ ಕಮಿಷನ್’ಗೇಡಿ ಪಕ್ಷಗಳ ಅಸಲಿ ಮುಖವನ್ನು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ ಕರ್ನಾಟಕಕ್ಕೆ `ಕಮಿಷನ್ ರಾಜ್ಯ’ ಎಂಬ ಹಣೆಪಟ್ಟಿ ಶಾಶ್ವತವಾಗುವ ಅಪಾಯವಿದೆ.

ಇಂಥ ಪ್ರಕರಣಗಳೆಲ್ಲ ಕೊನೆಗೆ ಏನಾದವು ಎನ್ನುವುದು ಜನರಿಗೆ ಚೆನ್ನಾಗಿ ಗೊತ್ತು. ಸಾಂವಿಧಾನಿಕ ಸಂಸ್ಥೆಗಳನ್ನು ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅವು ತನಿಖೆ ನಡೆಸುತ್ತಿರುವ ಪ್ರಕರಣಗಳು ಯಾವ ರೀತಿ ಹಳ್ಳ ಹಿಡಿದು ಹೋಗಿವೆ ಎನ್ನುವುದು ಈಗಾಗಲೇ ಜಗಜ್ಜಾಹೀರಾಗಿರುವ ಸತ್ಯ.

ಜನತಾ ನ್ಯಾಯಾಲಯದಲ್ಲೇ ಇಂಥ ನಿರ್ಲಜ್ಜ ಪ್ರಕರಣಗಳಿಗೆ ಮುಕ್ತಿ ಕಾಣಿಸಬೇಕು. ಜನರದ್ದೇ ಅಂತಿಮ ತೀರ್ಪು ಹಾಗೂ ಜನರೇ ಪ್ರಜಾಪ್ರಭುತ್ವ ಉಳಿಸಬೇಕು ಎನ್ನುವುದು ನನ್ನ ಅಭಿಪ್ರಾಯ. 2023ಕ್ಕೆ ಆರೂವರೆ ಕೋಟಿ ಕನ್ನಡಿಗರು ನೀಡುವ ಜನಾದೇಶ ಈ ದಿಕ್ಕಿನಲ್ಲೇ ಇರುತ್ತದೆ ಎಂಬ ವಿಶ್ವಾಸ ನನ್ನದು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *