ನವದೆಹಲಿ: ಬಿಜೆಪಿ ರೆಬಲ್ ನಾಯಕರ ವಿರುದ್ಧ ಬಂಡಾಯ ಸಾರಿರುವ ಹೊನ್ನಾಳಿಯ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ (M.P.Renukacharya) ದಾವಣಗೆರೆ ಜಿಲ್ಲಾ ನಾಯಕರೊಂದಿಗೆ ಆಗಮಿಸಿ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ದೂರು ನೀಡಿದ್ದಾರೆ.
ರಾಷ್ಟ್ರೀಯ ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಠಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿಯಾಗಿರುವ ಅವರು ಮಾಜಿ ಸಂಸದರಾದ ಜಿ.ಎಂ ಸಿದ್ದೇಶ್ವರ್, ಪ್ರತಾಪ್ ಸಿಂಹ ಹಾಗೂ ಮಾಜಿ ಶಾಸಕರ ಅರವಿಂದ್ ಲಿಂಬಾವಳಿ ವಿರುದ್ಧ ದೂರು ಸಲ್ಲಿಸಿದ್ದಾರೆ.
ಪಕ್ಷದಲ್ಲಿರುವ ಬಂಡಾಯ ನಾಯಕರು ವರ್ತನೆ ಮಿತಿ ಮೀರಿದೆ. ದಾವಣಗೆರೆಯಲ್ಲಿ ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ್ ಹುಟ್ಟು ನೆಪದಲ್ಲಿ ಬಂದ ಅರವಿಂದ್ ಲಿಂಬಾವಳಿ, ಪ್ರತಾಪ್ ಸಿಂಹ ಪಕ್ಷದ ನಾಯಕತ್ವದ ವಿರುದ್ಧ ಮಾತನಾಡಿದ್ದಾರೆ. ಈ ಇಬ್ಬರು ನಾಯಕರಿಗೆ ದಾವಣಗೆರೆ ಜಿಲ್ಲೆಗೂ ಏನು ಸಂಬಂಧ? ಅನಗತ್ಯ ಗೊಂದಲ ಸೃಷ್ಟಿಸುವುದಲ್ಲದೇ ಪಕ್ಷದ ನಾಯಕರ ವಿರುದ್ಧ ಅವಹೇಳಕಾರಿ ಮಾತುಗಳನ್ನಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅರವಿಂದ್ ಲಿಂಬಾವಳಿ ಪಕ್ಷದ ಕಚೇರಿಯನ್ನು ಕಟ್ಟಿದ್ದು ನಾನೇ, ಪಕ್ಷ ಬಿಟ್ಟು ಹೋದ ಬಿ.ಎಸ್.ಯಡಿಯೂರಪ್ಪ ಅವರು ಮತ್ಯಾಕೆ ಬಂದರೋ ಗೊತ್ತಿಲ್ಲ ಎನ್ನುತ್ತಾರೆ. ಜಿ.ಎಂ ಸಿದ್ದೇಶ್ವರ್ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾಗಲು ಕಾರಣ ನಾನು ಎನ್ನುತ್ತಾರೆ. ಅವರ ಸೋಲಿಗೆ ದಾವಣಗೆರೆ ಜಿಲ್ಲಾ ನಾಯಕರು ಎಂದು ಆರೋಪಿಸಿದ್ದಾರೆ.
ಜಿ.ಎಂ.ಸಿದ್ದೇಶ್ವರ್ ಸೋಲಿಗೆ ನಾವು ಕಾರಣರಲ್ಲ. ಅವರ ಸ್ವಯಂಕೃತ ಅಪರಾಧಗಳಿಂದ ಅವರು ಸೋಲನ್ನಪ್ಪಿದ್ದಾರೆ. ಅದಕ್ಕೆ ನಮ್ಮನ್ನು ಹೋಣೆ ಮಾಡುವುದು ಸರಿಯಲ್ಲ. ಅವರ ಸೋಲಿಗೆ ನಾವು ಹೊಣೆಗಾರರಲ್ಲ, ಹೊರಗಿನ ನಾಯಕರು ಬಂದು ಪಕ್ಷದ ನಾಯಕತ್ವದ ಬಗ್ಗೆ ಮಾತನಾಡುವಾಗ ನಾವು ಸುಮ್ಮನೇ ಇರಲು ಹೇಗೆ ಸಾಧ್ಯ? ಹೀಗಾಗಿ, ಅವರು ವಿರುದ್ಧ ಮಾತನಾಡಿದ್ದೇವೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಎಂ.ಪಿ ರೇಣುಕಾಚಾರ್ಯ ಸೇರಿ ಕೆಲವು ನಾಯಕರಿಗೆ ಉಚ್ಛಾಟನೆ ಭೀತಿ ಎದುರಾಗಿದೆ ಎನ್ನಲಾಗಿದೆ. ಪಕ್ಷದ ಕೆಲವು ನಾಯಕರ ವಿರುದ್ಧ ಮಾತನಾಡಿದ್ದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಳಿಕ ಇನ್ನು ಕೆಲವು ನಾಯಕರನ್ನು ಉಚ್ಛಾಟನೆ ಮಾಡಬಹುದು ಎನ್ನಲಾಗಿದ್ದು, ಈ ನಡುವೆ ರೇಣುಕಾಚಾರ್ಯ ನೇತೃತ್ವದಲ್ಲಿ ದಾವಣಗೆರೆ ನಾಯಕರು ವರಿಷ್ಠರ ಭೇಟಿಯಾಗಿ ಸಮರ್ಥನೆಗೆ ಮುಂದಾಗಿದ್ದಾರೆ.