ಸಂಕ್ರಾಂತಿ ನಂತರ ಜೆಡಿಎಸ್ ಪಕ್ಷ ಇರುತ್ತಾ?: ಎಂ.ಬಿ.ಪಾಟೀಲ್

By
2 Min Read

ಬೆಂಗಳೂರು: ಉಪ ಚುನಾವಣೆಯಲ್ಲಿ ಕುಮಾರಸ್ವಾಮಿಗೆ (H.D Kumaraswamy) ಹಿನ್ನಡೆಯಾಗಿದೆ. ಅವರು ಹಾಗೂ ಜೆಡಿಎಸ್ (JDS) ಅಸ್ತಿತ್ವದ ‌ಪ್ರಶ್ನೆ ಎದ್ದಿದೆ. ಇದರಿಂದ ಹತಾಶರಾಗಿ ಅವರು ಮಾತನಾಡುತ್ತಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್  (M.P Patil) ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಈ ವೇಳೆ 60% ಸರ್ಕಾರ ಎಂಬ ಹೆಚ್‌ಡಿಕೆ ಹೇಳಿಕೆಗೆ ತಿರುಗೇಟು ನೀಡಿದರು. ಅವರು ಸಾಕ್ಷಿ ನೀಡಿ ಮಾತನಾಡಲಿ. ಸುಮ್ಮನೆ ಹಿಟ್ ಆ್ಯಂಡ್ ರನ್ ಮಾಡುವುದು ಬೇಡ. ಸಂಕ್ರಾಂತಿ ನಂತರ ಕಾಂಗ್ರೆಸ್ ಸರ್ಕಾರ ಹೋಗುತ್ತದೆ ಎಂದಿದ್ದಾರೆ. ಸಂಕ್ರಾಂತಿ ಬಳಿಕ ಜೆಡಿಎಸ್ ಪಕ್ಷ ಇರುತ್ತಾ ನೋಡಿ. ಅವರ ಪಕ್ಷದಲ್ಲಿ ಶಾಸಕರು‌ ಇರಲ್ಲ‌ ಎಂದು ಭವಿಷ್ಯ ನುಡಿದಿದ್ದಾರೆ.

ಸರ್ಕಾರದ ವಿರುದ್ಧ ಯಾವ ಗುತ್ತಿಗೆದಾರರು ಅಸಮಧಾನಗೊಂಡಿದ್ದಾರೆ ಅದನ್ನು ನಿರ್ದಿಷ್ಟವಾಗಿ ಹೇಳಲಿ. ನಾವು ತನಿಖೆ ಮಾಡಿಸುತ್ತೇವೆ. ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ಇಂತಹ ಅವ್ಯವಹಾರ ಆಗಿದೆ ಎಂದು ಮಾಹಿತಿ ಕೊಡಲಿ. ಬಿಜೆಪಿ ಸರ್ಕಾರ ಇದ್ದಾಗ ಕೆಂಪಣ್ಣ ದೂರು ಕೊಟ್ಟಿದ್ದರು. ಅದರ ಮೇಲೆ ಆರೋಪ ಮಾಡಲಾಗಿತ್ತು. ಈಗ ಸುಮ್ಮನೆ ಆರೋಪ ಮಾಡುವುದು ಬೇಡ ಎಂದಿದ್ದಾರೆ.

ಸಚಿನ್ ಪಾಂಚಳ್ ಗುತ್ತಿಗೆದಾರ ಹೌದೋ ಅಲ್ವೋ ಎನ್ನುವ ಜಿಜ್ಞಾಸೆ ಇದೆ. ಕುಮಾರಸ್ವಾಮಿ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಪಾಪ ನಿಖಿಲ್ ಕುಮಾರಸ್ವಾಮಿ ಇನ್ನೂ ಯುವಕ. ಅವರ ಮೇಲೆ ನಮಗೆ ಸಹಾನುಭೂತಿ ಇದೆ ಎಂದು ಹೇಳಿದ್ದಾರೆ.

ಗ್ಯಾರಂಟಿಗಳಿಂದ ಅಭಿವೃದ್ಧಿ ‌ಕುಂಠಿತ ಎಂಬ ಕಾಂಗ್ರೆಸ್ ಶಾಸಕ ಹಿಟ್ನಾಳ್ ಹೇಳಿಕೆ ವಿಚಾರವಾಗಿ, ಶಾಸಕರಿಂದ ಅಭಿವೃದ್ಧಿಗೆ ಅನುದಾನ ಬೇಡಿಕೆ ಇದೆ. ಈಗಾಗಲೇ ಸಿಎಂ ಅನುದಾನ ಕೊಡ್ತೇವೆ ಎಂದು ಲೋಕೋಪಯೋಗಿ ಇಲಾಖೆಯಿಂದ 15 ಕೋಟಿ ರೂ. ಕೊಡುತ್ತಿದ್ದಾರೆ. ಪ್ರತಿ ಶಾಸಕರ ಕ್ಷೇತ್ರಕ್ಕೆ ಹಣ ಕೊಡ್ತಾ ಇದ್ದೇವೆ. ನೀರಾವರಿ, ಶಾಲೆ, ರಸ್ತೆ ಸೇರಿದಂತೆ ಅಭಿವೃದ್ಧಿಗೆ ಹಣ ಬೇಕು. ಹೊಸದಾಗಿ ಬಂದ ಶಾಸಕರಿಗೆ ಒತ್ತಡ ಇರುತ್ತೆ. ಅದಕ್ಕಾಗಿ ಅನುದಾನ ಕೇಳುತ್ತಾರೆ. ನಾವು ಈಗಾಗಲೇ ಹಳೆಯ ಶಾಸಕರಿದ್ದೇವೆ. ನಾವು ಕೆಲಸ ಮಾಡಿರುತ್ತೇವೆ ನಮಗೆ ಒತ್ತಡ ಕಡಿಮೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ಸರ್ಕಾರವೇ ಅನುದಾನ ಕೊರತೆಗೆ ಕಾರಣ. ಬೇಕಾಬಿಟ್ಟಿ ಹಣ ಖರ್ಚು ಮಾಡಿ, ಜಾತ್ರೆ ಮಾಡಿ ಹೋಗಿದ್ದಾರೆ. ಸಿಎಂ ಎಲ್ಲವನ್ನೂ ಸರಿ ಮಾಡುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿ ಸರಿ ಹೋಗಲು ಒಂದು ವರ್ಷ ಬೇಕು ಅಂದಿದ್ರು. ಈಗ ಎಲ್ಲವೂ ಸರಿ ಹೋಗುತ್ತಿದೆ.

ಜಾತಿ ಗಣತಿ ಕ್ಯಾಬಿನೆಟ್‌ಗೆ ಬಂದರೆ ಚರ್ಚೆ ‌ಮಾಡುತ್ತೇವೆ. ಅದರ ಒಳಗೆ ಏನಿದೆ ಎಂಬುದು ಗೊತ್ತಿಲ್ಲ. ವರದಿ ನೋಡಿ ಮಾತನಾಡುತ್ತೇನೆ ಸುಮ್ಮನೆ ವಿರೋಧ ಮಾಡಲು ನಾನು ಮೂರ್ಖನಲ್ಲ ಎಂದಿದ್ದಾರೆ.

Share This Article