ಮೇಕೆದಾಟು ಯೋಜನೆಗೆ ರಾಜಕೀಯ ಬೇಡ, ಹೆಚ್‌ಡಿಕೆ ಸಹಕಾರ ಕೊಡಲಿ: ಎಂ.ಬಿ.ಪಾಟೀಲ್

Public TV
2 Min Read

ಬೆಂಗಳೂರು: ಮೇಕೆದಾಟು ಅಣೆಕಟ್ಟು ಯೋಜನೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂದು ರಾಜಕೀಯ ಮಾಡಿಕೊಂಡು ಕೂರಬಾರದು. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (H D Kumaraswamy) ಕೂಡ ಇದನ್ನು ಮನಗಂಡು, ರಚನಾತ್ಮಕವಾಗಿ ಕೆಲಸ ಮಾಡಲಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (M B Patil) ಹೇಳಿದ್ದಾರೆ.

ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಬಂದರೆ ಸಂಕಷ್ಟದ ಸಮಯದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಹೀಗೆ ಎರಡು ರಾಜ್ಯಗಳಿಗೂ ಅನುಕೂಲವಾಗಲಿದೆ. ಈ ಸತ್ಯ ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಕಳಪೆ ಹೆಲ್ಮೆಟ್‌ಗೆ ಕೇಂದ್ರ ತಡೆ – BIS ಪ್ರಮಾಣೀಕರಿಸಿದ ISI ಗುರುತಿನ ಹೆಲ್ಮೆಟ್‌ ಕಡ್ಡಾಯ

ಕುಮಾರಸ್ವಾಮಿಯವರು ಮೇಕೆದಾಟು ಯೋಜನೆ (Mekedatu Project) ತಮ್ಮ ಕುಟುಂಬದಿಂದ ಮಾತ್ರ ಸಾಧ್ಯ ಎಂದಿದ್ದಾರೆ. ಇದು ಸರಿಯಲ್ಲ. ಈ ಯೋಜನೆ ಜಾರಿಯಿಂದ ಸಂಕಷ್ಟದ ಸಮಯದಲ್ಲಿ ನೀರು ಸಿಗುತ್ತದೆ ಎನ್ನುವುದು ತಮಿಳುನಾಡಿನ ರಾಜಕೀಯ ಪಕ್ಷಗಳಿಗೂ ಗೊತ್ತು. ಆದರೆ ಅವರು ಸಹ ರಾಜಕೀಯಕ್ಕಾಗಿ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಇಂತಹ ಧೋರಣೆಗಳನ್ನು ಎಲ್ಲರೂ ಬಿಟ್ಟರೆ ಜನರಿಗೆ ಒಳ್ಳೆಯದಾಗುತ್ತದೆ ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಖಚಿತ: ಮತ್ತೆ ಭವಿಷ್ಯ ನುಡಿದ ಆರ್.ಅಶೋಕ್

ಹಿಂದೆ ಕಾವೇರಿ ವಿವಾದವು ಸುಪ್ರೀಂಕೋರ್ಟ್ ಮುಂದೆ ಬಂದಾಗ ನಾನು ನೀರಾವರಿ ಸಚಿವನಾಗಿದ್ದೆ. ನಮ್ಮ ಪ್ರಯತ್ನದಿಂದ ರಾಜ್ಯಕ್ಕೆ 14 ಟಿಎಂಸಿ ಅಡಿ ನೀರು ಹೆಚ್ಚು ಸಿಕ್ಕಿತ್ತು. ಜೊತೆಗೆ, ಬೆಂಗಳೂರಿಗೂ ಕುಡಿಯುವ ನೀರು ಪೂರೈಸಲು ಕಾವೇರಿ ನೀರನ್ನು ಬಳಸಿಕೊಳ್ಳಲು ಅವಕಾಶ ಸಿಕ್ಕಿತ್ತು. ನಮ್ಮ ರಾಜಧಾನಿಯ ಮೂರನೇ ಎರಡರಷ್ಟು ಭಾಗ ಕಾವೇರಿ ಕೊಳ್ಳದಿಂದ ಹೊರಗಿದೆ ಎಂದು ತಮಿಳುನಾಡಿನವರು ತಕರಾರು ತೆಗೆದಿದ್ದರು. ಆಗ ನಾವು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಚೆನ್ನೈನ ಕುಡಿಯುವ ನೀರಿನ ಅಗತ್ಯಕ್ಕೆ ಕೃಷ್ಣಾ ಕೊಳ್ಳದಲ್ಲಿನ ತಮ್ಮ ಪಾಲಿನ ತಲಾ 5 ಟಿಎಂಸಿಯಂತೆ ಸೇರಿ ಒಟ್ಟು 15 ಟಿಎಂಸಿ ನೀರನ್ನು ಬಿಟ್ಟುಕೊಟ್ಟಿದ್ದನ್ನು ನೆನಪಿಸಬೇಕಾಯಿತು. ಈ ವಿಚಾರದಲ್ಲಿ ನಮ್ಮ ಪರ ವಕೀಲ ಎಫ್.ಎಸ್ ನಾರಿಮನ್ ಪರಿಣಾಮಕಾರಿಯಾಗಿ ವಾದ ಮಂಡಿಸಿದ್ದರು ಎಂದು ವಿವರಿಸಿದ್ದಾರೆ.

Share This Article