ಬೆಂಗಳೂರು: ಶುಕ್ರವಾರ ಶತಮಾನದ ಸುದೀರ್ಘ ಕೇತು ಗ್ರಸ್ಥ ಚಂದ್ರ ಗ್ರಹಣ ಸಂಭವಿಸಲಿದೆ. ಆದ್ದರಿಂದ ದೇವಾಲಯಗಳು ಗ್ರಹಣ ಆರಂಭವಾದ ಸಮಯದಿಂದ ಮುಚ್ಚಲ್ಪಡುತ್ತವೆ.
ಚಾಮುಂಡಿ ಬೆಟ್ಟ: ಶುಕ್ರವಾರ ಬೆಳಗ್ಗೆ ಎಂದಿನಂತೆ 5.30 ಕ್ಕೆ ದೇವಸ್ಥಾನದ ಬಾಗಿಲು ತೆರೆಯುತ್ತದೆ. ರಾತ್ರಿ 9 ಗಂಟೆಗೆ ಗ್ರಹಣದ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಲಾಗುತ್ತದೆ. ಆಷಾಢ ಶುಕ್ರವಾರದಂದು ದೇವಸ್ಥಾನದ ಬಾಗಿಲು ರಾತ್ರಿ 11.30 ರವರೆಗೂ ತೆರೆಯಲಾಗುತ್ತೆ. ಗ್ರಹಣದ ಕಾರಣ 9 ಗಂಟೆಗೆ ಮುಚ್ಚಲಾಗುತ್ತೆ.
ಗ್ರಹಣಕ್ಕೆ ಮುನ್ನಾ ದೇವಸ್ಥಾನದಲ್ಲಿ ಪೂಜೆ ಹಾಗೂ ಜಪ ನಡೆಯುತ್ತದೆ. ಶನಿವಾರ ಬೆಳಗ್ಗೆ ದೇವಸ್ಥಾನದ ಶುದ್ಧಿ ಕಾರ್ಯ ಇರುವ ಕಾರಣ ಬೆಳಗ್ಗೆ 8.30 ಕ್ಕೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಸಾಮಾನ್ಯವಾಗಿ ದೇವಸ್ಥಾನದ ಬಾಗಿಲು ಬೆಳಗ್ಗೆ 7.30 ಕ್ಕೆ ತೆರೆಯುತ್ತಾರೆ. ಶನಿವಾರ ಬೆಳಗ್ಗೆ ದೇವಸ್ಥಾನದಲ್ಲಿ ಅಭಿಷೇಕ ನಡೆಯುತ್ತದೆ.
ನಂಜುಂಡೇಶ್ವರ: ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದ ದರ್ಶನದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಸಾಮಾನ್ಯವಾಗಿ ದೇವಸ್ಥಾನ ರಾತ್ರಿ 9 ಗಂಟೆಗೆ ಮುಚ್ಚುವ ಕಾರಣ ಗ್ರಹಣದ ದಿನವೂ ಅದೇ ವೇಳೆಗೆ ಮುಚ್ಚಲಾಗುತ್ತದೆ. ಪೂಜೆ, ಜಪ ಹಾಗೂ ಅಭಿಷೇಕ ನಡೆಯುತ್ತದೆ.
ಕುಕ್ಕೆ ಸುಬ್ರಹ್ಮಣ್ಯ: ನಾಳೆ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಮಣ್ಯ ಕ್ಷೇತ್ರದಲ್ಲಿ ರಾತ್ರಿ 7 ಗಂಟೆಯ ಬಳಿಕ ದೇವರ ದರ್ಶನಕ್ಕೆ ಅವಕಾಶವಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. ಕುಕ್ಕೆ ಸುಬ್ರಮಣ್ಯ ದೇಗುಲದಲ್ಲಿ ಮಧ್ಯಾಹ್ನದ ಪೂಜೆ ಹಾಗೂ ಇತರ ಸೇವೆಗಳು ಎಂದಿನಂತೆ ನಿಗದಿತ ಸಮಯಕ್ಕೆ ನಡೆಯಲಿದೆ. ರಾತ್ರಿಯ ಮಹಾಪೂಜೆ ಸಂಜೆ 6.30ಕ್ಕೆ ನೆರವೇರಲಿದೆ. ರಾತ್ರಿ 7 ಗಂಟೆಯ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇಲ್ಲ. ಸಂಜೆಯ ಆಶ್ಲೇಷ ಬಲಿ ಸೇವೆ, ರಾತ್ರಿ ಅನ್ನ ಸಂತರ್ಪಣೆ ಇರುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂದಿನಂತೆ ಪೂಜೆ ಸೇವೆಗಳು ನಡೆಯಲಿದೆ. ಅನ್ನ ಸಂತರ್ಪಣೆಯೂ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ ದಕ್ಷಿಣ ಭಾರತದ ಪ್ರಸಿದ್ಧ ದೇವಿ ಕ್ಷೇತ್ರವಾಗಿದೆ. ರಕ್ತ ಚಂದ್ರಗ್ರಹಣ/ಕೇತುಗ್ರಸ್ಥ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ದೇವಸ್ಥಾನ ರಾತ್ರಿಯಿಡೀ ತೆರೆದಿರುತ್ತದೆ. ಅನಾದಿ ಕಾಲದಿಂದಲೂ ಗ್ರಹಣ ಸಂದರ್ಭದಲ್ಲಿ ಕೊಲ್ಲೂರು ದೇವಾಲಯ ತೆರೆದೇ ಇರುತ್ತದೆ. ಭಕ್ತಾಭಿಮಾನಿಗಳಿಗೆ ಜಪ ತಪ ಮಾಡಲು ಅವಕಾಶವಿದೆ. ಮಾಮೂಲಿ ಮಧ್ಯಾಹ್ನ, ರಾತ್ರಿ ಪೂಜೆ ನಡೆಯುತ್ತದೆ. 3.47 ಗ್ರಹಣ ಬಿಟ್ಟ ನಂತರ ದೇವಿಗೆ ವಿಶೇಷ ಮಹಾಪೂಜೆ ಆಗುತ್ತದೆ. ಮಧ್ಯಾಹ್ನ ಊಟ ಇರುತ್ತದೆ. ಸಂಜೆ 6 ರಿಂದ 8 ಗಂಟೆಯವರೆಗೆ ರಾತ್ರಿ ವಿತರಿಸಲಾಗುತ್ತದೆ.
ಉಡುಪಿ ಶ್ರೀ ಕೃಷ್ಣಮಠ: ಗ್ರಹಣವಿದ್ದರೂ ಕೃಷ್ಣಮಠ ತೆರೆದಿರುತ್ತದೆ. ಗ್ರಹಣ ಆರಂಭವಾದ ಕೂಡಲೇ ಗ್ರಹಣ ಶಾಂತಿ ಹೋಮ ಆರಂಭವಾಗುತ್ತದೆ. ಬೆಳಗ್ಗೆ, ಮಧ್ಯಾಹ್ನ ಪೂಜೆ ಇರುತ್ತದೆ. ರಾತ್ರಿ ಪೂಜೆ 7.30 ಕ್ಕೆ ಎಂದಿನಂತೆ ಇರುತ್ತದೆ. ಮಧ್ಯಾಹ್ನ ಊಟ ಇದೆ. ರಾತ್ರಿ ಊಟವಿಲ್ಲ. ಪ್ರವಾಸಿಗರಿಗೆ ಫಲಾಹಾರ ಇದೆ. ಗ್ರಹಣ ಬಿಟ್ಟ ಸಂದರ್ಭದಲ್ಲಿ ಹೋಮಕ್ಕೆ ಪರ್ಯಾಯ ಶ್ರೀಗಳಿಂದ ಪೂರ್ಣಾಹುತಿ ನಡೆಯುತ್ತದೆ. ಶ್ರೀಕೃಷ್ಣನ ಮೂಲ ವಿಗ್ರಹಕ್ಕೆ ಆರತಿ ಮಾಡಲಾಗುತ್ತದೆ. ಕೃಷ್ಣಾರ್ಪಣ ಬಿಡಲಾಗುತ್ತದೆ. ಪರ್ಯಾಯ ಪಲಿಮಾರು ಶ್ರೀ, ಕೆಲವು ಭಕ್ತರು 24 ಗಂಟೆ ಉಪವಾಸ ಮಾಡುತ್ತಾರೆ.
ತುಮಕೂರು ಗೊರವನಹಳ್ಳಿ: ಚಂದ್ರಗ್ರಹಣ ಹಿನ್ನೆಲೆಯಲ್ಲಿ 27 ರಂದು ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಮಧ್ಯಾಹ್ನ 12-30 ಕ್ಕೆ ಮಹಾಪೂಜೆ ನೆರವೇರಿಸಿ ಬಂದ್ ಮಾಡಲಾಗುವುದು. ರಾತ್ರಿ ಪೂಜೆ ನಡೆಯೋದಿಲ್ಲ. ಮಾರನೆಯ ದಿನ ಎಂದಿನಂತೆ ಬೆಳಗ್ಗೆ 6-30 ಗರ್ಭಗುಡಿ ಶುಚಿಗೊಳಿಸಿ ಪೂಜೆ ಕೈಂಕರ್ಯ ಆರಂಭವಾಗಲಿದೆ. ಯಾವುದೇ ರೀತಿಯ ವಿಶೇಷ ಪೂಜೆ ಇಲ್ಲ.
ಬೆಳಗಾವಿ ಸವದತ್ತಿ ಯಲ್ಲಮ್ಮ: ಗ್ರಹಣದ ದಿನವೂ ಎಂದಿನಂತೆ ದೇವಾಯಲ ತೆರೆದಿರುತ್ತದೆ. ಆದರೆ ಸಂಜೆ 6 ಗಂಟೆಯ ಮೇಲೆ ಭಕ್ತರಿಗೆ ಪ್ರಸಾದ ವಿನಿಯೋಗ ಇರುವುದಿಲ್ಲ. ಎಂದಿನಂತೆ ರಾತ್ರಿ 9 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ.
ಬಳ್ಳಾರಿ – ಹಂಪಿ ವಿರುಪಾಕ್ಷೇಶ್ವರ, ಕನಕದುರ್ಗಮ್ಮ ದೇವಸ್ಥಾನ, ಉಜ್ಜನಿ ಮಠ, ಕೊಟ್ಟೂರೇಶ್ವರ
1) ಹಂಪಿ ವಿರೂಪಾಕ್ಷೇಶ್ವರ ದೇವಾಲಯ: ಗ್ರಹಣದ ದಿನ ಗ್ರಹಣ ಆರಂಭಕ್ಕೂ ಮುನ್ನ ಸಂಜೆ 7 ಗಂಟೆಗೆ ಪೂಜೆ ಸಲ್ಲಿಸಿ ಬಾಗಿಲು ಬಂದ್ಮಾಡಲಾಗುತ್ತೆ, ನಂತರ ಮರುದಿನ ನಸುಕಿನ ಜಾವ ಸ್ವಚ್ಚತಾ ಕಾರ್ಯ ನಡೆಯುತ್ತದೆ.
2) ಸಂಡೂರಿನ ಕುಮಾರಸ್ವಾಮಿ ದೇವಸ್ಥಾನ: ಗ್ರಹಣದ ದಿನ ಮುಂಜಾನೆ ಹುಣ್ಣಿಮೆ ಹಿನ್ನೆಲೆಯಲ್ಲಿ ಅಭಿಷೇಕ್ ಇರುತ್ತದೆ. ಸಂಜೆ 4 ಗಂಟೆಗೆ ದರ್ಶನ ಬಂದ್ ಆಗುತ್ತದೆ. ಗ್ರಹಣ ನಡೆಯುವ ವೇಳೆ ಅಭಿಷೇಕ ಇರುತ್ತದೆ. ಗ್ರಹಣದ ನಂತರ ದೇವಾಲಯದ ಸ್ವಚ್ಚತಾ ಕಾರ್ಯ ನಡೆಯುತ್ತದೆ.
3) ಬಳ್ಳಾರಿಯ ಕನಕದುರ್ಗಮ್ಮ ದೇವಾಲಯ: ಗ್ರಹಣದ ದಿನ ವಿಶೇಷ ಆಚರಣೆಗಳು ಎನೂ ಇರಲ್ಲ. ಆದರೆ ಗ್ರಹಣ ಮುಗಿದ ನಂತರ ದೇವಾಲಯದ ಸುತ್ತ ಗೋಮಾತೆ ಪ್ರದಕ್ಷಿಣೆ ಹಾಕಿಸಿ ದೇವಾಲಯದ ಬಾಗಿಲು ಓಪನ್ ಮಾಡಲಾಗುತ್ತದೆ.
4) ಕೊಟ್ಟೂರು ಬಸವೇಶ್ವರ ದೇವಾಲಯ: ಕೊಟ್ಟೂರಿನ ಕೊಟ್ಟೂರು ಬಸವೇಶ್ವರ ದೇವಾಲಯದಲ್ಲಿ ಗ್ರಹಣಕ್ಕೆ ಯಾವುದೇ ಆದ್ಯತೆ ನೀಡಲಾಗುವುದಿಲ್ಲ. ಯಾಕಂದರೆ ಕೊಟ್ಟೂರು ರಥವನ್ನ ಮೂಲಾ ನಕ್ಷತ್ರದಲ್ಲೇ ರಥೋತ್ಸವ ಎಳೆಯಲಾಗುತ್ತದೆ. ಗ್ರಹಣದ ವೇಳೆ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ.