ಎಲ್‍ಪಿಜಿ ಟ್ಯಾಂಕರ್‌ನಿಂದ ಅನಿಲ ಸೋರಿಕೆ – ಸಕಲೇಶಪುರದಲ್ಲಿ ಭಯದ ವಾತಾವರಣ

Public TV
1 Min Read

ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಎಲ್‍ಪಿಜಿ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗಿ ಸಕಲೇಶಪುರದಲ್ಲಿ ಅತಂಕ ಮನೆಮಾಡಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಚಲಿಸುತ್ತಿದ್ದಾಗ ಮಧ್ಯಾಹ್ನ 12 ಗಂಟೆಯ ವೇಳೆಗೆ ಪಟ್ಟಣದ ಚೆಸ್ಕಾಂ ಕಚೇರಿ ಬಳಿ ಟ್ಯಾಂಕರಿನ ಮುಖ್ಯ ವಾಲ್ವ್ ನ ಬೋಲ್ಟ್ ತುಂಡಾದ ಪರಿಣಾಮ ಭಾರಿ ಪ್ರಮಾಣದ ಅನಿಲ ಸೋರಿಕೆ ಉಂಟಾಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ತಂಡ ಸತತವಾಗಿ ನೀರನ್ನು ಹಾಯಿಸಿ ಟ್ಯಾಂಕರ್ ಸ್ಫೋಟಗೊಳ್ಳದಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಸಮೀಪದ ಪದವಿ ಪೂರ್ವ ಕಾಲೇಜು, ಬಾಲಕಿಯರ ಕಾಲೇಜುಗಳಿಗೆ ರಜೆಯಿತ್ತು, ತೋಟಗಾರಿಕೆ, ಕೃಷಿ ಇಲಾಖೆ, ಬಾಲಕಿಯರ ವಸತಿ ನಿಲಯ, ಸೆಸ್ಕ್, ನಾಡಕಚೇರಿ, ಉರ್ದು ಶಾಲೆ ಎಲ್ಲವನ್ನೂ ಬಂದ್ ಮಾಡಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಲಾಗಿತ್ತು. ಅಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತ ಇರುವ ಬಡಾವಣೆಯಲ್ಲಿ ಒಲೆ ಹೊತ್ತಿಸದಂತೆ ಮನವಿ ಮಾಡಲಾಗಿದೆ.

ಪಟ್ಟಣದ ಕುಶಾಲನಗರ, ಚಂಪಕನಗರ, ಮಲ್ಲಿಕಾರ್ಜುನ ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮನೆಗಳಲ್ಲಿ ಒಲೆ ಹಚ್ಚದಂತೆ, ಗ್ಯಾಸ್ ಉರಿಸದಂತೆ, ಲೈಟ್ ಸ್ವಿಚ್ ಹಾಕದಂತೆ, ಬೆಂಕಿ ಕಿಡಿ ಬಳಸದಂತೆ ಪೊಲೀಸರು ಧ್ವನಿವರ್ಧಕದ ಮೂಲಕ ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ. ಜೊತೆಗೆ ಸಕಲೇಶಪುರ ಬಸ್ ನಿಲ್ದಾಣ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ.

ಮೊಬೈಲ್ ಫೋನ್ ಬಳಸದಂತೆಯೂ ಸಹ ಎಲ್ಲರನ್ನೂ ಎಚ್ಚರಿಸುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಿಸುವ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ತಾತ್ಕಾಲಿಕವಾಗಿ ಸಂಚಾರವನ್ನು ಕೂಡ ತಡೆಹಿಡಿಯಲಾಗಿದೆ. ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಯಿಸಿಕೊಳ್ಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *