ಸಾಯಲು ಬಂದ್ವಿ, ಈಗ ತಾನೇ ಮದ್ವೆಯಾಗಿದೆ ಬದುಕಬೇಕೆಂಬ ಆಸೆ ಇದೆ: ಯುವ ಪ್ರೇಮಿಗಳ ಸೆಲ್ಫಿ ವಿಡಿಯೋ

Public TV
2 Min Read

ಹುಬ್ಬಳ್ಳಿ: ಹುಡುಗ ಮತ್ತು ಹುಡುಗಿಯ ಮನೆಯವರ ವಿರೋಧದ ನಡುವೆ ಮನೆಯಿಂದ ಓಡಿಬಂದು ಸೋಮವಾರ ಮದುವೆಯಾಗಿದ್ದ ಯುವ ಪ್ರೇಮಿಗಳು ರಕ್ಷಣೆಗಾಗಿ ವಿಡಿಯೋ ಮೂಲಕ ಮೊರೆಯಿಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ರಶ್ಮಿ ಹೂಗಾರ ಮತ್ತು ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಮಂಜುನಾಥ ಗುರವ್ ಕಳೆದೊಂದು ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ಪ್ರೀತಿಯ ವಿಚಾರ ಮನೆಯವರಿಗೆ ತಿಳಿದಿದೆ. ಆದರೆ ಹುಡುಗಿ ಮನೆಯವರು ಇವರ ಪ್ರೀತಿಗೆ ಅಡ್ಡಿಯಾಗಿದ್ದರಿಂದ ನಿನ್ನೆ ಹುಬ್ಬಳ್ಳಿಯ ಬೂದನಗುಡ್ಡದ ದೇವಾಲಯದಲ್ಲಿ ಓಡಿ ಹೋಗಿ ಮದುವೆಯಾಗಿದ್ದರು.

ನಮಗೆ ಹುಡುಗಿ ಮನೆಯವರಿಂದ ಬೆದರಿಕೆ ಬರುತ್ತಿದ್ದು, ಆತ್ಮಹತ್ಯೆಗೆ ಮುಂದಾಗಿದ್ದೆವು. ಆದರೆ ಸಾಯಲು ಮನಸ್ಸಿಲ್ಲ ನಮಗೆ ರಕ್ಷಣೆ ನೀಡಿ ಎಂದು ನವಜೋಡಿ ಸೆಲ್ಫಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

ವಿಡಿಯೋ:
“ಇಲ್ಲಿಗೆ ನಾವು ಸಾಯಲು ಬಂದಿದ್ದೇವು. ಆದರೆ ಈಗ ತಾನೆ ಮದುವೆಯಾಗಿದ್ದೇವೆ, ಸಾಯಲು ಇಷ್ಟವಿಲ್ಲ. ಲವ್ ಮಾಡಬೇಕು, ಜೀವನ ಮಾಡಬೇಕು ಎಂದು ತುಂಬಾ ಆಸೆ ಇದೆ. ಆದರೆ ಬಲವಂತವಾಗಿ ನಮ್ಮಿಬ್ಬರಿಗೂ ಬೇರೆ ಮದುವೆ ಮಾಡಬೇಕು ಎಂದು ಮನೆಯಲ್ಲಿ ಪ್ಲಾನ್ ಮಾಡಿದ್ದರು. ಅದು ನಮಗೆ ಇಷ್ಟವಿರಲಿಲ್ಲ. ಹೀಗಾಗಿ ಓಡಿ ಬಂದು ಮದುವೆಯಾಗಿದ್ದೇವೆ. ಆದರೆ ಈ ಮದುವೆಗೆ ತುಂಬಾ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ನಮ್ಮ ಜೀವನದಲ್ಲಿ ಸಾವು ಬಂದರೆ ಇದಕ್ಕೆ ಕಾರಣ ಈಕೆ ಕುಟುಂಬದವರು ಎಂದು ಮಂಜುನಾಥ್ ಹೇಳಿದ್ದಾನೆ.

ಹುಡುಗನಿಗೂ ಹೆಚ್ಚು ಕಡಿಮೆ ಆದರೆ ಅಮ್ಮ-ಅಪ್ಪನೇ ಕಾರಣರಾಗಿರುತ್ತಾರೆ. ಈಗಾಗಲೇ ನಾನು ಒಮ್ಮೆ ಆತ್ಮಹತ್ಯೆಗೆ ಪ್ರಯತ್ನ ಮಾಡಿದೆ. ನನ್ನ ಲವ್ ಬಗ್ಗೆ ಮನೆಯಲ್ಲಿ ಗೊತ್ತಿದ್ದರು ಕೂಡ ನಮ್ಮ ಮಾವನ ಮಗನಿಗೆ ಮದುವೆ ಮಾಡಲು ಪ್ರಯತ್ನ ಮಾಡಿದ್ದರು. ನನಗೆ ಇಷ್ಟವಿರಲಿಲ್ಲ, ಹೀಗಾಗಿ ಮನೆಯಿಂದ ಓಡಿ ಬಂದು ಇವರನ್ನು ಮದುವೆಯಾಗಿದ್ದೀನಿ ಎಂದು ಹುಡುಗಿ ಹೇಳಿದ್ದಾಳೆ.

ಸ್ನೇಹಿತರೆ ನಮ್ಮ ಮದುವೆಗೆ ನೀವೆಲ್ಲರೂ ಬೆಂಬಲ ನೀಡಿ ವಿಶ್ ಮಾಡಿ. ನಮಗೆ ಆತ್ಮಹತ್ಯೆ ಮಾಡಿಕೊಳ್ಳಲು ಇಷ್ಟವಿಲ್ಲ. ನಾವು ಚೆನ್ನಾಗಿ ಬದುಕಬೇಕು. ಹೀಗಾಗಿ ನೀವು ಈ ವಿಡಿಯೋವನ್ನು ಶೇರ್ ಮಾಡಿ ಎಂದು ಹುಡುಗ ಹೇಳಿಕೊಂಡಿದ್ದಾನೆ.

ಈ ಬಗ್ಗೆ ವಿಷಯ ಗೊತ್ತಾಗುತ್ತಿದ್ದಂತೆ ಸೋಮವಾರ ಹುಡುಗಿ ಕಡೆಯವರು ನವಜೋಡಿಯನ್ನು ಕಿಡ್ನಾಪ್ ಮಾಡಿದ್ದಾರೆ. ಪ್ರೇಮಿಗಳ ಜೊತೆಗೆ ಹುಡುಗನ ತಾಯಿ ಮಹಾದೇವಿ ಹಾಗೂ ಸಹೋದರ ಸಂಜೀವ್ ಇವರಿಬ್ಬರನ್ನು ಸಹ ಕಿಡ್ನಾಪ್ ಮಾಡಲಾಗಿದೆ ಎಂದು ಹುಡುಗನ ಕಡೆಯವರು ಆರೋಪಿಸುತ್ತಿದ್ದಾರೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿ ವಿಡಿಯೋ ಶರವೇಗದಲ್ಲಿ ಹರಿದಾಡುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *