ಹೈದರಾಬಾದ್: ಪ್ರೀತಿಗೆ ಮನೆಯಲ್ಲಿ ಒಪ್ಪದ ಕಾರಣ ಪ್ರೇಮಿಗಳಿಬ್ಬರು ಒಂದೇ ವೇಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಮೂರು ತಿಂಗಳ ನಂತರ ಅವರಿಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ತೆಲಂಗಾಣದ ಮಹಾಬುಬ್‍ನಗರ ಜಿಲ್ಲೆಯಲ್ಲಿ ನಡೆದಿದೆ.
ರವಿ(20) ಮತ್ತು ರಾಧಿಕಾ(19) ನೇಣಿಗೆ ಶರಣಾದ ಜೋಡಿ. ಮೃತ ಪ್ರೇಮಿಗಳು ಪದವಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಭಾನುವಾರ ಜಿಲ್ಲೆಯ ರಾಂಪುರ್ ಗ್ರಾಮದ ಹೊರವಲಯದಲ್ಲಿ ಪತ್ತೆಯಾಗಿವೆ. ಭಾನುವಾರ ರಾತ್ರಿ ಗ್ರಾಮಸ್ಥರು ಮೃತದೇಹವನ್ನು ನೋಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಮೃತ ರವಿ ಕೊಯಿಲಕೊಂಡ ಮಂಡಲದ ರಾಂಪುರ್ ಗ್ರಾಮದವನಾಗಿದ್ದು, ಇಬ್ಬರಿಗೂ ಬಾಲ್ಯದಲ್ಲೇ ಪರಿಚಯವಿತ್ತು. ಆದರೆ ಕೆಲವು ತಿಂಗಳ ಹಿಂದೆ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿ ವಿಚಾರ ಮನೆಯಲ್ಲಿ ಗೊತ್ತಾಗಿದೆ. ಆದರೆ ಪೋಷಕರು ಇವರ ಮದುವೆಗೆ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೇ ಮತ್ತೆ ಇಬ್ಬರು ಮಾತನಾಡಬಾರದು ಎಂದು ಎಚ್ಚರಿಸಿದ್ದಾರೆ. ಇದರಿಂದ ರವಿ ಮತ್ತು ರಾಧಿಕಾ ಇಬ್ಬರು ಮನೆಯವರ ವಿರೋಧವಿದ್ದರೂ ಮಾರ್ಚ್ 23 ರಂದು ಮನೆಯಿಂದ ಓಡಿ ಹೋಗಿದ್ದರು.
ಇತ್ತ ರವಿ ಮತ್ತು ರಾಧಿಕಾ ಪೋಷಕರು ಕೊಯಿಲಕೊಂಡ ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರನ್ನು ದಾಖಲಿಸಿದ್ದರು. ಪೊಲೀಸರು ಕೂಡ ಹುಡುಕಾಟ ಶುರು ಮಾಡಿದ್ದರು. ಆದರೆ ಅವರಿಬ್ಬರ ಸುಳಿವು ಪತ್ತೆಯಾಗಿಲ್ಲ. ಸುಮಾರು ಮೂರು ತಿಂಗಳ ನಂತರ ರಾಂಪುರ್ ಗ್ರಾಮದ ಹೊರವಲಯದಲ್ಲಿ ಭಾನುವಾರ ರಾತ್ರಿ ಇಬ್ಬರ ಮೃತದೇಹವನ್ನು ಗ್ರಾಮಸ್ಥರು ನೋಡಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಇಬ್ಬರ ಕುಟುಂಬದವರಿಗೆ ವಿಚಾರ ತಿಳಿಸಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಕುಟುಂಬದವರು ಬಂದು ಮೃತದೇಹವನ್ನು ನೋಡಿ ರವಿ ಮತ್ತು ರಾಧಿಕಾ ಎಂದು ಗುರುತಿಸಿದ್ದಾರೆ. ಬಳಿಕ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬವರಿಗೆ ಹಸ್ತಾಂತರಿಸಿದ್ದಾರೆ.
ಮನೆಯಿಂದ ಹೋದ ಮಕ್ಕಳು ಮದುವೆಯಾಗಿ ಚೆನ್ನಾಗಿರುತ್ತಾರೆ ಎಂದುಕೊಂಡಿದ್ದೆವು. ಆದರೆ ಇವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ನಾವು ಅಂದುಕೊಂಡಿರಲಿಲ್ಲ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.