ಲವ್ವರ್‌ಗೆ ತಾಯಿ, ದೊಡ್ಡಮ್ಮನ ಖಾಸಗಿ ಫೋಟೋ ರವಾನೆ – ತನಿಖೆ ವೇಳೆ ಪ್ರಿಯಕರನ ಮಾಸ್ಟರ್ ಪ್ಲ್ಯಾನ್‌ ಬಯಲು

3 Min Read

ಬೆಂಗಳೂರು: ಮಗಳೇ ತಾಯಿ ಹಾಗೂ ದೊಡ್ಡಮ್ಮನ ಖಾಸಗಿ ಫೋಟೋ ತೆಗೆದು ಲವ್ವರ್‌ಗೆ ಕಳುಹಿಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ಪ್ರಿಯಕರನ ಮಾಸ್ಟರ್ ಪ್ಲ್ಯಾನ್‌ ಬಯಲಾಗಿದೆ.

ಬೆಂಗಳೂರಿನ (Bengaluru) ಬ್ಯಾಟರಾಯನಪುರದಲ್ಲಿ (Byatarayanapura) ತಾಯಿಯೇ ತನ್ನ ಮಗಳು ಹಾಗೂ ಆಕೆಯ ಪ್ರಿಯಕರನ ವಿರುದ್ಧ ದೂರು ನೀಡಿದ್ದರು. ತಮ್ಮ ಹಾಗೂ ತಮ್ಮ ಅಕ್ಕನ ಖಾಸಗಿ ಫೋಟೋಗಳನ್ನು ಮಗಳು ಆಕೆಯ ಪ್ರಿಯಕರನಿಗೆ ಕಳಿಸಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಿದ್ದರು. ದೂರು ನೀಡುತ್ತಿದ್ದಂತೆ ಪೊಲೀಸರು 23 ವರ್ಷದ ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಖಾಸಗಿ ಫೋಟೋ ತೆಗೆದಿದ್ಯಾಕೆ ಎಂಬುವುದು ಬಯಲಾಗಿದೆ. ಕುಟುಂಬಸ್ಥರು ಮದುವೆಗೆ ಒಪ್ಪದಿದ್ದರೆ ಈ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುವಂತೆ ಯುವತಿಗೆ ತಿಳಿಸಿದ್ದಾಗಿ ಪ್ರಿಯಕರ ಸತ್ಯ ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ: ಲವ್ವರ್‌ಗೆ ತಾಯಿ, ದೊಡ್ಡಮ್ಮನ ಖಾಸಗಿ ಫೋಟೋ ರವಾನೆ – ಪುತ್ರಿಯ ಫೋನ್‌ ನೋಡಿ ಶಾಕ್‌

ಯುವತಿ ಓರ್ವ ಯುವಕನನ್ನು ಪ್ರೀತಿಸುತ್ತಿದ್ದಳು. ಮದುವೆಯೂ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಈ ವಿಚಾರ ತಿಳಿದ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಬೇಸರಗೊಂಡ ಯುವತಿ ಪ್ರಿಯಕರನ ಜೊತೆಗೆ ಚರ್ಚಿದ್ದಳು. ಈ ವೇಳೆ ಖಾಸಗಿ ಫೋಟೋ ತೆಗೆದು ಇಟ್ಕೋ, ಮದುವೆಗೆ ಒಪ್ಪದೇ ಇದ್ದಾಗ ಅದನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡೋಣ ಎಂದು ತಿಳಿಸಿದ್ದ ಎಂದು ತಿಳಿದುಬಂದಿದೆ.

ನಡೆದಿದ್ದೇನು?
ಕಳೆದ 25 ವರ್ಷಗಳಿಂದ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಕುಟುಂಬ ನೆಲೆಸಿದ್ದು ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಹಿರಿಯ ಮಗಳು ಬಿಬಿಎ ಓದಿದ್ದು ನಿರುದ್ಯೋಗಿಯಾಗಿದ್ದಾಳೆ. ಕಿರಿಯ ಮಗಳು ತನ್ನ ಅಧ್ಯಯನ ಮಾಡುತ್ತಿದ್ದು ತಂದೆ ಅಡುಗೆ ಕೆಲಸ ಮಾಡುತ್ತಿದ್ದಾರೆ. ಒಂದು ವರ್ಷದ ಹಿಂದೆ ಹಿರಿಯ ಮಗಳು ಶೈಕ್ಷಣಿಕ ಮತ್ತು ವೃತ್ತಿಯ ಉದ್ದೇಶಕ್ಕಾಗಿ ಸ್ಮಾರ್ಟ್ಫೋನ್‌ಬೇಕೆಂದು ತಂದೆಯ ಬಳಿ ಕೇಳಿಕೊಂಡಿದ್ದಾಳೆ. ತಂದೆ ಮಗಳ ಕೋರಿಕೆಯಂತೆ ಸ್ಮಾರ್ಟ್ಫೋನ್ ತೆಗೆಸಿಕೊಟ್ಟಿದ್ದರು.

ಒಂದೂವರೆ ತಿಂಗಳ ಹಿಂದೆ ಮನೆ ಕೆಲಸ ಮಾಡುತ್ತಿದ್ದಾಗ ತಾಯಿ ಮಗಳಿದ್ದ ಕೋಣೆಯನ್ನು ಪ್ರವೇಶ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಗಳು ವಿಡಿಯೋ ಕರೆಯಲ್ಲಿ ಯುವಕನ ಜೊತೆಗೆ ಮಾತನಾಡುತ್ತಿದ್ದಳು. ತಾಯಿ ಪ್ರವೇಶಿಸುತ್ತಿದ್ದಂತೆ ಮಗಳು ಕರೆಯನ್ನು ದಿಢೀರ್ ಕಟ್ ಮಾಡಿದ್ದಾಳೆ. ಮಗಳು ಕರೆಯನ್ನು ಕಡಿತ ಮಾಡಿದ ಬಳಿಕ ತಾಯಿಗೆ ಅನುಮಾನ ಬರಲು ಆರಂಭವಾಗಿದೆ. ನೀನು ಫೋನಿನಲ್ಲಿ ಮಾತನಾಡಿದ್ದು ಯಾರ ಜೊತೆ ಎಂಬ ತಾಯಿಯ ಪ್ರಶ್ನೆಗೆ ಮಗಳು ಸರಿಯಾಗಿ ಉತ್ತರ ನೀಡಲಿಲ್ಲ. ಈ ವಿಚಾರ ಕೇಳಿದ್ದಕ್ಕೆ ರೇಗಾಡುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರು ಆಪ್ತ ಸಂಬಂಧಿಕರ ಮೂಲಕ ಸತ್ಯ ಹೊರತೆಗೆಯುವ ಪ್ರಯತ್ನ ಮಾಡಿದ್ದಾರೆ.ಇದನ್ನೂ ಓದಿ: ಎರಡು ಮಕ್ಕಳ ತಂದೆ ಜೊತೆಗೆ ಯುವತಿ ಲವ್; ಮರ್ಯಾದೆಗೆ ಅಂಜಿ ಮಗಳೊಂದಿಗೆ ತಾಯಿ ನೇಣಿಗೆ ಶರಣು

ಪೋಷಕರು ಇತರ ಸಂಬಂಧಿಕರಿಗೆ ಮಾಹಿತಿ ನೀಡಿ ಪುತ್ರಿಗೆ ಸಲಹೆ ನೀಡಲು ಕೇಳಿಕೊಂಡಿದ್ದಾರೆ. ಸಂಬಂಧಿಕರು ಆಕೆಯ ಜೊತೆ ಮಾತನಾಡಿದಾಗಲೂ ಆಕೆ ಯುವಕನ ಬಗ್ಗೆ ಹೇಳಲು ನಿರಾಕರಿಸಿದ್ದಾಳೆ. ಅಷ್ಟೇ ಅಲ್ಲದೇ ಫೋನ್ ಪಾಸ್‌ವರ್ಡ್ ನೀಡಲು ಸಾಧ್ಯವಿಲ್ಲ ಎಂದಿದ್ದಾಳೆ. ಹಲವು ಗಂಟೆಯ ಮನವೊಲಿಕೆ ಮಾಡಿದ ನಂತರ ಆಕೆಯ ಫೋನ್ ಪಾಸ್‌ವರ್ಡ್ ಪಡೆಯಲು ಯಶಸ್ವಿಯಾಗಿದ್ದಾರೆ.

ಪಾಸ್‌ವರ್ಡ್ ಹಾಕಿ ಫೋನಿನ ಫೋಟೋ ಗ್ಯಾಲರಿ ನೋಡುವಾಗ ಪೋಷಕರು, ಸಂಬಂಧಿಕರು ಶಾಕ್ ಆಗಿದ್ದಾರೆ. ತಾಯಿ ಮಲಗಿದ್ದಾಗ ತೆಗೆದ ಖಾಸಗಿ ಫೋಟೋ, ತಾಯಿಯ ಹಿರಿಯ ಸಹೋದರಿ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಅವರ ನಗ್ನ ಫೋಟೋಗಳು, ವಿಡಿಯೋಗಳು ಮೊಬೈಲಿನಲ್ಲಿ ಇರುವುದನ್ನು ನೋಡಿದ್ದಾರೆ. ಅಷ್ಟೇ ಅಲ್ಲದೇ ಆ ಫೋಟೋಗಳನ್ನು ಆಕೆ ಪ್ರಿಯಕರನಿಗೆ ಕಳುಹಿಸಿದ್ದನ್ನು ನೋಡಿ ಹೌಹಾರಿದ್ದಾರೆ.

ಗೆಳೆಯ ವರುಣ್ ಜೊತೆಗಿನ ಚಾಟ್‌ನಲ್ಲಿ ಯುವತಿಯೇ ತನ್ನ ತಾಯಿ ಹಾಗೂ ದೊಡ್ಡಮ್ಮನ ಖಾಸಗಿ ಫೋಟೋಗಳನ್ನು ಆತನಿಗೆ ಕಳುಹಿಸಿದ್ದಳು. ಚಾಟ್ ಪರಿಶೀಲನೆ ಮಾಡುವಾಗ ಕುಟುಂಬದವರ ಖಾಸಗಿ ಚಿತ್ರಗಳನ್ನು ಕಳುಹಿಸುವಂತೆ ವರುಣ್ ಮೆಸೇಜ್ ಮಾಡಿರುವುದು ಗಮನಕ್ಕೆ ಬಂದಿದೆ. ಚಾಟ್ ನೋಡಿ ಆತಂಕಕ್ಕೆ ಒಳಗಾದ ಕುಟುಂಬ ಯುವತಿಗೆ ವರುಣ್ ಜೊತೆ ಮಾತನಾಡದಂತೆ ಸೂಚಿಸಿದ್ದಾರೆ. ಪೋಷಕರು ಎಚ್ಚರಿಕೆ ನೀಡಿದ್ದರೂ ಪುತ್ರಿ ವರುಣ್ ವಿಚಾರದಲ್ಲಿ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದಳು. ಒಂದು ವಾರದ ಹಿಂದೆ ಪುತ್ರಿ ನಾನು ಮದುವೆಯಾದರೆ ವರುಣ್‌ನನ್ನೇ ಆಗುತ್ತೇನೆ ಎಂದು ಪೋಷಕರಿಗೆ ಹೇಳಿ ಮನೆಯನ್ನೇ ತೊರೆದಿದ್ದಾಳೆ.

ವರುಣ್ ಯಾರು? ಏನು ಮಾಡುತ್ತಿದ್ದಾನೆ? ಎಲ್ಲಿ ನೆಲೆಸಿದ್ದಾನೆ ಎಂಬ ಮಾಹಿತಿ ಇಲ್ಲದ ಕಾರಣ ಪುತ್ರಿಯ ಸುರಕ್ಷತೆಗಾಗಿ ಪೋಷಕರು ಈಗ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಪೋಷಕರ ಆರೋಪಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ವರುಣ್ ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸ್ಪ್ರೇ ಸಿಂಪಡಿಸಿ ಮಾಂಗಲ್ಯ ಸರ ಕಸಿದು ಕಳ್ಳರು ಪರಾರಿ – ಮಹಿಳೆ ಸಾವು

Share This Article