ಪ್ರೇಯಸಿಯ ಬರ್ತ್‌ಡೇ ಕೇಕ್ ಕತ್ತರಿಸಿ ಬಳಿಕ ಕತ್ತನ್ನೂ ಕೊಯ್ದ ಪಾಗಲ್ ಪ್ರೇಮಿ

Public TV
1 Min Read

ಬೆಂಗಳೂರು: ಪ್ರೇಯಸಿಯ ಹುಟ್ಟುಹಬ್ಬವನ್ನು (Birthday) ಕೇಕ್ ಕತ್ತರಿಸುವ ಮೂಲಕ ಅದ್ದೂರಿಯಾಗಿ ಆಚರಿಸಿದ ಬಳಿಕ ಪಾಗಲ್ ಪ್ರಿಯಕರ (Lover) ಆಕೆಯ ಕತ್ತನ್ನು ಕೊಯ್ದು ಹತ್ಯೆ (Murder) ನಡೆಸಿರುವ ವಿಚಿತ್ರ ಘಟನೆ ಬೆಂಗಳೂರಿನ (Bengaluru) ಲಗ್ಗೆರೆಯಲ್ಲಿ ನಡೆದಿದೆ.

ನವ್ಯ (25) ಕೊಲೆಯಾದ ಯುವತಿಯಾಗಿದ್ದು, ಆಕೆಯ ಪ್ರಿಯಕರ ಪ್ರಶಾಂತ್ ಹತ್ಯೆ ಮಾಡಿದ್ದಾನೆ. ಯುವತಿ ಬೇರೊಬ್ಬನ ಜೊತೆ ಚಾಟ್ ಮಾಡುತ್ತಿದ್ದಳು ಎಂಬ ಅನುಮಾನದ ಹಿನ್ನೆಲೆ ಪ್ರಶಾಂತ್ ಕೃತ್ಯ ಎಸಗಿದ್ದಾನೆ.

ನವ್ಯ ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಳು. ನವ್ಯ ಹಾಗೂ ಪ್ರಶಾಂತ್ ಇಬ್ಬರು ಕನಕಪುರ ಮೂಲದವರಾಗಿದ್ದು, ದೂರದ ಸಂಬಂಧಿಗಳಾಗಿದ್ದರು. ಮಾತ್ರವಲ್ಲದೇ ಇಬ್ಬರೂ ಕಳೆದ 6 ವರ್ಷಗಳಿಂದ ಪ್ರೀತಿಸುತ್ತಿದ್ದರು.

ಕಳೆದ ಮಂಗಳವಾರ ನವ್ಯ ಹುಟ್ಟುಹಬ್ಬ ಇತ್ತು. ಅಂದು ಆಕೆ ಬ್ಯುಸಿ ಇದ್ದ ಕಾರಣ ಪ್ರಶಾಂತ್ ಶುಕ್ರವಾರ ಹುಟ್ಟುಹಬ್ಬವನ್ನು ಆಚರಿಸಲು ಯೋಜಿಸಿದ್ದ. ಅದರಂತೆಯೇ ಶುಕ್ರವಾರ ರಾತ್ರಿ ಬರ್ತ್‌ಡೇ ಸೆಲೆಬ್ರೇಷನ್ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದ. ಇದನ್ನೂ ಓದಿ: ಜಪಾನ್ ಪ್ರಧಾನಿ ಭಾಷಣದ ವೇಳೆ ಸ್ಫೋಟ

ಪ್ರೇಯಸಿಯ ಹುಟ್ಟುಹಬ್ಬದ ಕೇಕ್ ಕತ್ತರಿಸಿದ ಬಳಿಕ ಪ್ರಶಾಂತ್ ಆಕೆಯ ಕತ್ತನ್ನು ಕೊಯ್ದು ಹತ್ಯೆ ಮಾಡಿದ್ದಾನೆ. ಘಟನೆ ಬಗ್ಗೆ ತಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಮೃತ ಯುವತಿಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್‌ ಚಿಂಚನಸೂರ್‌ ಕಾರು ಅಪಘಾತ – ಮಾಜಿ ಸಚಿವ ಆಸ್ಪತ್ರೆಗೆ ದಾಖಲು

Share This Article