ಕರಾವಳಿ ಭಾಗದ ಪ್ರತಿಭೆ ಹಾಗೂ ಬಿಗ್‌ಬಾಸ್ ಖ್ಯಾತಿಯ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ (Roopesh Shetty) ನಟಿಸಿ, ನಿರ್ದೇಶನ ಮಾಡಿರುವ ತುಳು ಹಾಗೂ ಕನ್ನಡದ `ಜೈ’ ಸಿನಿಮಾದ (Jai Cinema) ಲವ್ ಎಂಬ ಹಾಡು ಇತ್ತೀಚೆಗೆ ರಿಲೀಸ್ ಆಗಿದೆ. ಇದು ಪ್ಯೂರ್ ಲವ್ ಸಾಂಗ್ ಆಗಿರೋದ್ರಿಂದ ನಿಜವಾದ ಪ್ರೇಮಿಗಳು ಹಾಡನ್ನ ಬಿಡುಗಡೆ ಮಾಡಿದ್ದಾರೆ. ಗುರುಕಿರಣ್ ದಂಪತಿ, ನಿರಂಜನ್ ದೇಶಪಾಂಡೆ ದಂಪತಿ, ವಿನಯ್ ಗೌಡ ದಂಪತಿ, ರೂಪೇಶ್ ರಾಜಣ್ಣ ದಂಪತಿ, ಆರ್ಯವರ್ಧನ್ ಗುರೂಜಿ ದಂಪತಿಯಿಂದ ಹಾಡು ರಿಲೀಸ್ ಆಗಿದೆ.
ಲವ್ ಯೂ ಅನ್ನೋ ಹಾಡನ್ನ ಫೈನಲ್ ಮಾಡುವುದಕ್ಕೇನೆ ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. 5 ವರ್ಷನ್ ಕೇಳಿದ ಮೇಲೂ 6ನೇ ವರ್ಷನ್ ಫೈನಲ್ ಮಾಡಲಾಗಿತ್ತು. ಮತ್ತೆ ಮತ್ತೆ ಕೇಳಬೇಕು ಎನ್ನುವಂತ ಫೀಲ್ ಬರಬೇಕು ಎಂಬ ಕಾರಣಕ್ಕೆ ಹಾಡಿನ ಮೇಲೆ ಶ್ರಮ ಹಾಕಲಾಗಿದೆ. ಇಷ್ಟು ಅದ್ಭುತವಾದ ಸಾಹಿತ್ಯಕ್ಕೆ ಧ್ವನಿಯೂ ಅಷ್ಟೇ ಚೆನ್ನಾಗಿ ಕೂಡಿದಾಗ ಹಾಡು ಮತ್ತಷ್ಟು ಖುಷಿ ಕೊಡುತ್ತದೆ. ಹೀಗಾಗಿ ಹಾಡುವವರ ಹುಡುಕಾಟ ನಡೆಯುತ್ತಿದ್ದಾಗ ರಜತ್ ಹೆಗ್ಡೆ ವಾಯ್ಸ್ ಕಿವಿಗೆ ಬಿದ್ದಿತ್ತು. ಇವರ ಧ್ವನಿ ಪಕ್ಕಾ ಮ್ಯಾಚ್ ಆಗಿತ್ತು. ಹೀಗಾಗಿ ರಜತ್ ಹೆಗ್ಡೆ ಲವ್ ಯೂ ಹಾಡನ್ನ ಹಾಡಿದ್ದಾರೆ.
ಈ ಹಾಡಿಗೆ ತುಳು ಭಾಷೆಯಲ್ಲಿ ರೂಪೇಶ್ ಶೆಟ್ಟಿ ಅವರೇ ಸಾಹಿತ್ಯ ಬರೆದಿದ್ದು, ಕನ್ನಡಕ್ಕೆ ಕೀರ್ತನ್ ಬಂಡಾರಿ ಅವರು ಸಾಹಿತ್ಯ ಬರೆದಿದ್ದಾರೆ. ಹಾಗಂತ ತರ್ಜುಮೆ ಮಾಡಿಲ್ಲ, ಹಾಡಿನ ವಿಚಾರಧಾರೆಯನ್ನು ರೆಫರೆನ್ಸ್ ಇಟ್ಟುಕೊಂಡು, ಆ ಭಾವನೆ, ಆ ಮೀನಿಂಗ್ ಎಲ್ಲವನ್ನು ಅಚ್ಚುಕಟ್ಟಾಗಿ ಕಟ್ಟುಕೊಟ್ಟಿದ್ದಾರೆ. ಈ ಚಿತ್ರದಲ್ಲಿ ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ನಟಿ ಅದ್ವಿತಿ ಶೆಟ್ಟಿ ತೆರೆಹಂಚಿಕೊಂಡಿದ್ದಾರೆ.
ಈ ಸಿನಿಮಾ ಅದ್ವಿತಿಗೆ ಮೊದಲ ತುಳು ಸಿನಿಮಾವಾಗಿದ್ದು, ಅವರ ಮಾತೃಭಾಷೆ ತುಳು ಆಗಿದೆ ಎಂದಿದ್ದಾರೆ. ಈ ಸಿನಿಮಾದಲ್ಲಿ ಜರ್ನಲಿಸ್ಟ್ ಪಾತ್ರದಲ್ಲಿ ನಟಿ ಅದ್ವಿತಿ ಶೆಟ್ಟಿ ನಟಿಸಿದ್ದಾರಂತೆ. ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಚಿತ್ರಕ್ಕೆ ಬಂಡವಾಳ ಹೂಡಿದ್ದು, ದೀಕ್ಷಿತ್ ಸಹ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾದ ವಿಶೇಷ ಪಾತ್ರದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟಿಸಿರೋದು ಈ ಚಿತ್ರದ ಮತ್ತೊಂದು ವಿಶೇಷ.