ಜಾತಿ, ಧರ್ಮ, ದೇಶ ಗಡಿ ದಾಟಿದ ಪ್ರೇಮ ಕಥೆ

Public TV
2 Min Read

ಭೋಪಾಲ್: ಪ್ರೀತಿಗೆ ಜಾತಿ, ಧರ್ಮಗಳು ಮಾತ್ರವಲ್ಲ ದೇಶದ ಗಡಿಗಳೂ ಅಡ್ಡಿಯಾಗುವುದಿಲ್ಲ ಎಂಬುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೋಂದು ಜೋಡಿ ಸಾಬೀತು ಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಈ ಜೋಡಿ ದಾಂಪತ್ಯ ಜೀವನಕ್ಕೆ  ಕಾಲಿಟ್ಟಿದ್ದಾರೆ.

ಮಧ್ಯಪ್ರದೇಶ ಗ್ವಾಲಿಯರ್ ನಗರದ 26 ವರ್ಷದ ಅವಿನಾಶ್‌ಗೆ ಸೋಶಿಯಲ್ ಮೀಡಿಯಾ ಮೂಲಕವಾಗಿ ಮೊರಾಕೊ ದೇಶದ 24 ವರ್ಷದ ಫದ್ವಾ ಲೈಮಾಲಿ ಪರಿಚಯವಾಗಿತ್ತು. ಇವರಿಬ್ಬರ ಸ್ನೇಹ, ಪ್ರೀತಿಯಾಗಿ ಬದಲಾಗಿದೆ.  ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರು ಮದುವೆಯಾಗಲು ಬಯಸಿದ್ದರು. ಆದರೆ  ಮದುವೆ ಸ್ಟೋರಿ ಸಿನಿಮಾ ಕಥೆಯನ್ನು ಮೀರಿಸುವಂತಿದೆ.

ನಡೆದಿದ್ದೇನು: ಪ್ರೇಯಸಿಗಾಗಿ ಅವಿನಾಶ್ ಮೊರಾಕೊಗೆ ತೆರಳಿದ ಅಲ್ಲಿ ಆಕೆಯ ತಂದೆ ಅಲಿ ಲೈಮಾಲಿ ಅವರೊಂದಿಗೆ ತಮ್ಮ ಪ್ರೀತಿಯ ಬಗ್ಗೆ ತಿಳಿಸಿ ವಿವಾಹಕ್ಕೆ ಅನುಮತಿ ಕೋರಿದ. ಫದ್ವಾ ತಂದೆ ಇದಕ್ಕೆ ಬಿಲ್ ಕುಲ್ ಒಪ್ಪಲಿಲ್ಲ. ಕೊನೆಗೂ ಪುತ್ರಿ ಫದ್ವಾ ಒತ್ತಾಯದಿಂದ ಆತ ಒಪ್ಪಿಕೊಂಡಿದ್ದಾರೆ. ಅಲಿ ಲೈಮಾಲಿ ಅವರ ಮದುವೆಗೆ ಒಂದು ಷರತ್ತು ವಿಧಿಸಿದರು. ಅವಿನಾಶ್ ಇಸ್ಲಾಂಗೆ ಮತಾಂತರಗೊಂಡು ಮುಸಲ್ಮಾನನಾಗಬೇಕು, ಮದುವೆಯಾಗಿ, ಮೊರಾಕೊದಲ್ಲಿ ಉಳಿಯಬೇಕು ಎಂದು ಷರತ್ತು ಹಾಕಿದರು.

ಫದ್ವಾ ತಂದೆ ವಿಧಿಸಿದ್ದ ಷರತ್ತುಗಳಿಗೆ ಅವಿನಾಶ್ ಒಪ್ಪಲಿಲ್ಲ. ಮೇಲಾಗಿ ಫದ್ವಾ ಅವಿನಾಶ್ ಜೊತೆ ಭಾರತಕ್ಕೆ ತೆರಳುವುದಾಗಿ ಹೇಳಿದ್ದಳು. ಮಗಳ ಸಂತೋಷಕ್ಕಾಗಿ ತಂದೆ ಕೊನೆಗೂ ಒಪ್ಪಿದ್ದಾರೆ. ಮೊರಾಕೊ ಒಂದು ಮುಸ್ಲಿಂ ದೇಶ. ಅಲ್ಲಿನ ಜನಸಂಖ್ಯೆಯ ಶೇ 99 ಜನರು ಮುಸ್ಲಿಮರು, ಫದ್ವಾ ವಿವಾಹಕ್ಕೆ ಸರ್ಕಾರದ ಅನುಮತಿ ಪಡೆಯಲು ಬಹಳ ಸಮಯ ಹಿಡಿಯಿತು. ಎಲ್ಲಾ ಅಡೆ ತಡೆ ದಾಟಿ ಭಾರತ ತಲುಪಬೇಕೆಂದು ಬಯಸಿದ ಫದ್ವಾಗೆ ಕೊರೊನಾ ಅಡಚಣೆಯಾಯಿತು. ಕೊರೊನಾ ಪ್ರಕರಣಗಳು ಕಡಿಮೆಯಾಗುವವರೆಗೂ ಕಾದ ಅವಿನಾಶ್ -ಫದ್ವಾ ಜೋಡಿ ಇತ್ತೀಚೆಗೆ ಭಾರತಕ್ಕೆ ಆಗಮಿಸಿ ವಿವಾಹ ಮಾಡಿಕೊಳ್ಳಲು ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ಕೋವಿನ್ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಕೇಂದ್ರ

ಸರ್ಕಾರದ ಅನುಮತಿ ಪಡೆದು ಬುಧವಾರ ಇಬ್ಬರೂ ಒಂದಾಗಿದ್ದಾರೆ. ಮದುವೆಯ ನಂತರ ಅವಿನಾಶ್ ಮಾತನಾಡಿ, ತನ್ನ ಪತ್ನಿ ಫದ್ವಾ ಮತಾಂತರಗೊಳ್ಳುವಂತೆ ತಾವು ಎಂದಿಗೂ ಒತ್ತಾಯಿಸುವುದಿಲ್ಲ ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಈ ಜೋಡಿ ಕೊನೆಗೂ ತಮ್ಮ ಆಸೆಯಂತೆ ನವಜೀವನಕ್ಕೆ ಕಾಲಿಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *