ಮದುವೆ ಮಂಟಪದಲ್ಲೇ ಕೈ ಕೊಟ್ಟ ವರ, ಕಾದು ಕಾದು ಸುಸ್ತಾದ ವಧು – ಇದು ಲವ್ ಸೆಕ್ಸ್ ದೋಖಾ ಕಥೆ

Public TV
2 Min Read

ಉಡುಪಿ: ಮದುವೆಯಾಗುವುದಾಗಿ ನಂಬಿಸಿ, ದಿನಾಂಕವನ್ನು ಫಿಕ್ಸ್ ಮಾಡಿ ಎಲ್ಲರೂ ಮಂಟಪಕ್ಕೆ ಬಂದಿದ್ದಾರೆ. ಆದರೆ ಮದುವೆ ಗಂಡೇ ಬರಲಿಲ್ಲ. ಇದರಿಂದ ಮದುವೆ ಮಂಟಪದ ಮುಂದೆ ವಧು ಕಾದು ಕಾದು ಸುಸ್ತಾದ್ರೆ ಅತ್ತ ಕೊನೆಗೂ ವರ ಬರದೆ ಪರಾರಿಯಾಗಿರುವ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ನಡೆದಿದೆ.

ಲಲಿತಾ ಮದುವೆ ಸಭಾಂಗಣ ಮುಂದೆ ಕಾದು ಕಾದು ಸುಸ್ತಾದ ವಧು. ಮಂಜುನಾಥ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿ ಪರಾರಿಯಾದವನು. ಇವರಿಬ್ಬರೂ ಸುಮಾರು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದರು. ರಿಜಿಸ್ಟರ್ ಮದುವೆ ಕೂಡ ಮಾಡಿಕೊಂಡಿದ್ದು, ಈಗ ಕುಟುಂಬಸ್ಥರು ಸೇರಿ ಸಾಂಪ್ರದಾಯಿಕವಾಗಿ ಮದುವೆ ಮಾಡಲು ಮುಂದಾಗಿದ್ದರು. ಆದರೆ ಈ ಸಂದರ್ಭದಲ್ಲಿ ಮಂಜುನಾಥ ಕೈಕೊಟ್ಟು ಪರಾರಿಯಾಗಿದ್ದಾನೆ.

ಲಲಿತಾ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡಿಕೊಂಡಿದ್ದರು. ಅದೇ ಆಸ್ಪತ್ರೆಯ ಕಟ್ಟಡದ ನಿರ್ಮಾಣ ಕೆಲಸಕ್ಕೆ ಮಂಜುನಾಥ ಬಂದಿದ್ದ. ಆಗಿನಿಂದಲೇ ಅವರ ಮಧ್ಯ ಪ್ರೀತಿ ಪ್ರಾರಂಭವಾಗಿತ್ತು. ಲಲಿತಾ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮನೆಯಿಂದಲೇ ಊಟವನ್ನೂ ತಂದು ಕೊಡುತ್ತಿದ್ದ. ಇವರಿಬ್ಬರೂ ದೇವಸ್ಥಾನ, ಪಾರ್ಕ್ ಮುಂತಾದ ಕಡೆಗಳಲ್ಲಿ ಸುತ್ತಾಡಿದ್ದರು. ಕೆಲವು ತಿಂಗಳ ಹಿಂದೆ ಇವರಿಬ್ಬರ ನಡುವೆ ದೈಹಿಕ ಸಂಪರ್ಕವು ಕೂಡ ನಡೆದಿತ್ತು.

ಲಲಿತಾ ಹಾಗೂ ಮಂಜುನಾಥ್ ಒಡನಾಟ ಕುಟುಂಸ್ಥರಿಗೆ ಗೊತ್ತಾದ ನಂತರ ಅವರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿದ್ದು, ಸೆಪ್ಟೆಂಬರ್ 25 ರಂದು ರಿಜಿಸ್ಟರ್ ಮ್ಯಾರೇಜ್ ಮಾಡಿಸಿದ್ದರು. ರಿಜಿಸ್ಟರ್ ಮ್ಯಾರೇಜ್ ಆದ ಎರಡು ದಿನಗಳ ಬಳಿಕ ಮನೆಗೆ ಹೋಗಿ ಮಂಜುನಾಥ ತನ್ನ ಮದುವೆಯಾಗಿರುವ ಬಗ್ಗೆ ಪ್ರಸ್ತಾಪಿಸಿದ್ದ. ಈ ಸಂದರ್ಭದಲ್ಲಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ನಂತರ ಇವರಿಬ್ಬರ ಕುಟುಂಬದವರು ಸೇರಿ ಅಕ್ಟೋಬರ್ 6 ರಂದು ಅಂಪಾರಿನ ಶ್ರೀ ವಾಸುಕಿ ಸುಬ್ರಹ್ಮಣ್ಯ ಮತ್ತು ನಾಗಯಕ್ಷಿ ದೇವಸ್ಥಾನದಲ್ಲಿ ಮದುವೆ ನಿಗದಿಪಡಿಸಿದ್ದರು. ಕುಟುಂಬಸ್ಥರು, ಸ್ನೇಹಿತರು ಹಾಗೂ ಲಲಿತಾ ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಸಿಬ್ಬಂದಿಗಳೆಲ್ಲರೂ ಮದುವೆ ಸಮಾರಂಭಕ್ಕೆ ಆಗಮಿಸಿದ್ದರು.

ಮದುಮಗನೇ ನಾಪತ್ತೆ: ಮದುವೆಗೆ ಎಲ್ಲಾ ತಯಾರಿಯೂ ಆಗಿತ್ತು. ಆದರೆ ಮದುಮಗ ಮಂಜುನಾಥ್ ಮಾತ್ರ ಮದುವೆ ಮಂಟಪಕ್ಕೆ ಬರಲೇ ಇಲ್ಲ. ಮಂಟಪದ ಮುಂದೆ ಕಾದು ಕಾದು ಸುಸ್ತಾದ ಲಲಿತಾ ನಾನು ಕಾನೂನು ರೀತಿಯಲ್ಲಿ ಮದುವೆಯಾಗಿದ್ದೇನೆ. ನನ್ನ ಗಂಡನನ್ನು ಕರೆಸಿ ಎಂದು ಮಂಜುನಾಥನ ಮನೆ ಮುಂದೆ ಧರಣಿ ಕುಳಿತ್ತಿದ್ದಾರೆ. ನನ್ನ ಕುಟುಂಬದವರಿಗೆ ಅನ್ಯಾಯ ಆಗಿದೆ ಎಂದು ಮದುವೆಗೆಂದು ಪ್ರಿಂಟ್ ಮಾಡಿದ ಬ್ಯಾನರ್ ಮತ್ತು ಆಮಂತ್ರಣ ಪತ್ರಿಕೆ ಹಿಡಿದು ನ್ಯಾಯ ಕೊಡಿಸಿ ಎಂದು ಗಂಡನ ಮನೆಯ ಮುಂದೆ ನಿಂತು ಅಂಗಲಾಚಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಈ ಕುರಿತು ಮಾತುಕತೆ ನಡೆಸೋಣ. ಮನೆಯ ಮುಂದೆ ಗಲಾಟೆ ಮಾಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. ಆದರೂ ಲಲಿತಾ ಮತ್ತು ಕುಟುಂಬಸ್ಥರು ಹಠವಿಡಿದು ಅಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಂಜುನಾಥನ ಭಾವ ಚಂದ್ರ ಮತ್ತು ಲಲಿತಾ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ.

ಕುಂದಾಪುರ ಠಾಣೆಯಲ್ಲಿ ಯುವತಿ ತನಗೆ ಮೋಸವಾಗಿದೆ ಎಂದು ದೂರು ನೀಡಿದ್ದಾರೆ. ಅತ್ತ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಮಂಜುನಾಥ ಕಾಣೆಯಾಗಿದ್ದಾನೆ ಎಂಬ ದೂರು ಕೂಡ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *