ಲವ್ ಮಾಕ್‍ಟೇಲ್-2 ಮೂಲಕ ಮತ್ತೆ ಕಿಕ್ಕೇರಿಸಲಿದ್ದಾರೆ ಡಾರ್ಲಿಂಗ್ ಕೃಷ್ಣ

Public TV
2 Min Read

ಬೆಂಗಳೂರು: ಡಾರ್ಲಿಂಗ್ ಕೃಷ್ಣ ಅವರು ಬೇರೆ ನಿರ್ದೇಶಕರು ನಿರ್ಮಾಪಕರ ಬಳಿ ಕೆಲಸ ಮಾಡುವುದಕ್ಕಿಂತ ತಮ್ಮದೇಯಾದ ಸಿನಿಮಾ ಮಾಡುವಲ್ಲಿ ನಿರತರಾಗಿದ್ದಾರಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಇತ್ತೀಚೆಗಷ್ಟೇ ತಮಗೆ ಮೂರ್ನಾಲ್ಕು ಕಥೆಗಳು ಹೊಳೆದಿವೆ ಯಾವುದನ್ನು ಸಿನಿಮಾ ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಹೇಳಿದ್ದರು. ಇದೀಗ ಇದ್ದಕ್ಕಿದ್ದಂತೆ ಮತ್ತೊಂದು ಅಚ್ಚರಿಯ ಸುದ್ದಿಯನ್ನು ಹರಿಬಿಟ್ಟಿದ್ದಾರೆ.

ಈಗಾಗಲೇ ಎರಡ್ಮೂರು ಕಥೆಗಳಿರುವ ಕುರಿತು ಈ ಹಿಂದೆ ಹೇಳಿಕೊಂಡಿದ್ದ ಡಾರ್ಲಿಂಗ್ ಕೃಷ್ಣ ಇದೀಗ ಮತ್ತೊಂದು ಹೊಸ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಕೇವಲ ಬಿಚ್ಚಿಟ್ಟಿರುವುದು ಮಾತ್ರವಲ್ಲ ಈ ನಿಟ್ಟಿನಲ್ಲಿ ಈಗಾಗಲೇ ಸ್ಕ್ರಿಪ್ಟ್ ಬರೆಯುವುದರಲ್ಲಿ ನಿರತಾಗಿದ್ದಾರೆ. ಲವ್ ಮಾಕ್‍ಟೇಲ್ ಸಿನಿಮಾ ಥೀಯೇಟರ್‍ನಲ್ಲಿ 45 ದಿನಗಳ ಕಾಲ ಪ್ರದರ್ಶನ ಕಂಡರೆ, ಆ್ಯಪ್ ಆಧಾರಿತ ಜಾಲತಾಣಗಳಲ್ಲಿ ಇನ್ನೂ ಕಿಕ್ಕೇರಿಸುತ್ತಿದೆ.

ಅಮೇಜಾನ್ ಪ್ರೈಮ್‍ನಂತಹ ಜಾಲತಣಗಳಲ್ಲಿ ಸಿನಿಮಾ ನೋಡುತ್ತಿರುವ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅಲ್ಲದೆ ಸಿನಿಮಾ ನೋಡಿದ ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿ, ಸಿನಿಮಾ ಸೂಪರ್ ಆಗಿದೆ ನನಗೆ ಥೀಯೇಟರ್‍ನಲ್ಲಿ ನೋಡಲು ಸಾಧ್ಯವಾಗಲಿಲ್ಲ ಆ್ಯಪ್‍ನಲ್ಲಿ ನೋಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ 200 ರೂ.ಹಣವನ್ನು ಸಹ ನಿರ್ಮಾಪಕ ಡಾರ್ಲಿಂಗ್ ಕೃಷ್ಣಾ ಅವರ ಖಾತೆಗೆ ಹಾಕಿದ್ದಾರೆ. ಅಭಿಮಾನಿಯ ಪ್ರೀತಿ ಕಂಡ ಡಾರ್ಲಿಂಗ್ ಕೃಷ್ಣ ಫಿದಾ ಆಗಿದ್ದಾರೆ.

ಸಿನಿಮಾ ನೋಡಿದ ಅಭಿಮಾನಿಗಳು ಲವ್ ಮಾಕ್‍ಟೇಲ್ ಮತ್ತಿನಲ್ಲಿದ್ದು, ಡಾರ್ಲಿಂಗ್ ಕೃಷ್ಣ ಸಹ ಅದೇ ಗುಂಗಿನಲ್ಲಿದ್ದಾರೆ. ಹೀಗಾಗಿ ಅವರ ಹೊಸ ಪ್ರಾಜೆಕ್ಟ್ ಹೆಸರು ಲವ್ ಮಾಕ್ಟೇಲ್-2 ಎಂದು ತಿಳಿದು ಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶೀರ್ಷಿಕೆಯ ನೋಂದಣಿಯನ್ನೂ ಮಾಡಿಸಿದ್ದಾರೆ. ಅದಕ್ಕೆ ‘ಲವ್ ಮಾಕ್‍ಟೇಲ್-2’ ಎಂದು ಹೆಸರಿಟ್ಟಿದ್ದಾರೆ ಎನ್ನಲಾಗಿದೆ. ‘ಲವ್ ಮಾಕ್‍ಟೇಲ್’ ಚಿತ್ರದ ಯಶಸ್ಸಿಗೆ ಕಾರಣಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಅವರು, ಅದೇ ಸಿನಿಮಾದ ಕಥೆಯನ್ನು ಮುಂದುವರಿಸಲು ಯೋಚಿಸಿದ್ದಾರಂತೆ. ಮೊದಲ ಸಿನಿಮಾವನ್ನು ಪಯಣದ ರೂಪದಲ್ಲಿ ಅವರು ತೋರಿಸಿದ್ದರು. ಅದೇ ಜರ್ನಿಯನ್ನು ಅವರು ಮುಂದುವರಿಸಲು ನಿರ್ಧರಿಸಿದ್ದಾರಂತೆ.

ಚಿತ್ರದ ಅಂತ್ಯದಲ್ಲಿ ನಿಧಿಮಾ ನೆನಪಲ್ಲಿಯೇ ಇರುವುದಾಗಿ ‘ಆದಿ’ ಹೇಳುತ್ತಾನೆ. ಆತನ ಜೊತೆಗೆ ಪ್ರಯಾಣದಲ್ಲಿ ಜತೆಗೂಡಿ ಕಥೆ ಕೇಳಿದ ಯುವತಿಗೂ ಆತನ ಮೇಲೆ ಪ್ರೀತಿ ಮೂಡಿರುತ್ತದೆ. ಈ ಪ್ರೇಮ ಕಥನದ ಪಯಣ ಮತ್ತೆ ಮುಂದುವರಿಯಲಿದೆ. ಕಥೆಯನ್ನು ಮತ್ತೊಂದು ಮಗ್ಗುಲಲ್ಲಿ ಕೊಂಡೊಯ್ಯಲು ಕೃಷ್ಣ ಅವರಿಗೆ ಐಡಿಯಾ ಸಿಕ್ಕಿದೆಯಂತೆ. ಹೀಗಾಗಿ ಲವ್ ಮಾಕ್‍ಟೇಲ್-2 ಮೂಲಕ ಕೃಷ್ಣ ಮತ್ತಷ್ಟು ಪ್ರೇಮ ಕಥನಗಳನ್ನು ಬಿಚ್ಚಡಲಿದ್ದಾರೆಯೇ ಕಾದು ನೋಡಬೇಕಿದೆ.

ಈ ಸಿನಿಮಾ ಯಾವಾಗ ಶುರುವಾಗಲಿದೆ, ಯಾರು ನಿರ್ಮಿಸಲಿದ್ದಾರೆ ಎನ್ನುವುದು ಖಚಿತವಾಗಿಲ್ಲ. ಸದ್ಯಕ್ಕೆ ಕೃಷ್ಣ ಕಥೆ ಹೆಣೆಯುವುದರಲ್ಲಿ ಮಗ್ನರಾಗಿದ್ದಾರಂತೆ. ಚಿತ್ರ ನಿರ್ಮಿಸಲು ಬೇರೆ ನಿರ್ಮಾಪಕರು ಮುಂದೆ ಬಂದು, ಕೃಷ್ಣ ನಿರ್ದೇಶನ ಮಾಡುವ ಸಾಧ್ಯತೆಯೂ ಇದೆ. ಕಥೆ ಸಿದ್ಧವಾದ ಕೂಡಲೇ ಚಿತ್ರೀಕರಣ ಆರಂಭಿಸಲು ಅವರು ಯೋಚಿಸಿದ್ದಾರೆ ಎನ್ನಲಾಗಿದೆ.

ಆದರೆ ಬೇಸರದ ಸಂಗತಿ ಎಂದರೆ ಪ್ರೇಕ್ಷಕರಿಗೆ ಅಪ್ಯಾಯಮಾನವಾಗಿರುವ ನಿಧಿಮಾ ಪಾತ್ರ ಇಲ್ಲದಿರುವುದು. ಈ ಸಿನಿಮಾದ ಮೂಲ ಕೇಂದ್ರ ಬಿಂದುವೇ ನಿಧಿಮಾ ಪಾತ್ರ ಸಿನಿಮಾ ನೋಡಿದ ಯುವಕರು ನಿಧಿಮಾಳತಹ ಪತ್ನಿ ಸಿಗಬೇಕು ಎಂದು ಕನಸು ಕಾಣುತ್ತಿದ್ದಾರೆ. ಅಷ್ಟರಮಟ್ಟಿಗೆ ಈ ಪಾತ್ರ ಹುಚ್ಚು ಹಿಡಿಸಿದೆ. ಆದರೆ ನಿಧಿಮಾ ತೀರಿ ಹೋಗಿದ್ದರಿಂದ ಈ ಪಾತ್ರ ಸಹ ಮುಗಿದಿದೆ. ಹೀಗಾಗಿ ಪಾರ್ಟ್-2 ನಲ್ಲಿ ಯಾವ ರೀತಿಯ ಇಂಟರೆಸ್ಟಿಂಗ್ ಪಾತ್ರವನ್ನು ಡಾರ್ಲಿಂಗ್ ಕೃಷ್ಣ ಸೃಷ್ಟಿಸಲಿದ್ದಾರೆ. ಮಿಲನಾ ನಾಗರಾಜ್ ಮುಂದಿನ ಭಾಗದಲ್ಲಿ ನಟಿಸುತ್ತಾರಾ, ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ, ಅಥವಾ ಮುಂದಿನ ಭಾಗದಲ್ಲಿ ಅವರು ಇರುವುದಿಲ್ಲವಾ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಇದಕ್ಕೆ ಡಾರ್ಲಿಂಗ್ ಕೃಷ್ಣ ಅವರೇ ಉತ್ತರಿಸಬೇಕಿದೆ.

 

Share This Article
Leave a Comment

Leave a Reply

Your email address will not be published. Required fields are marked *