ಮದ್ವೆಯಾಗಿ ಮಗುವಿದ್ದ ಸಂಬಂಧಿ ಹಿಂದೆ ಬಿದ್ಳು- ಕಾಲುಗಳನ್ನ ಕತ್ತರಿಸಿ, ಸಮಾಧಿ ಮಾಡಿದ ಪ್ರಿಯಕರ

Public TV
2 Min Read

– 1 ತಿಂಗ್ಳ ನಂತ್ರ ನಾಪತ್ತೆಯಾಗಿದ್ದ ಬ್ಯೂಟಿಷಿಯನ್ ಶವ ಪತ್ತೆ

ತಿರುವನಂತಪುರಂ: 42 ವರ್ಷದ ಮಹಿಳೆ ಕಾಣೆಯಾಗಿ ಒಂದು ತಿಂಗಳ ನಂತರ ಪೊಲೀಸರು ಆಕೆಯ ಶವವನ್ನು ಪಾಲಕ್ಕಾಡ್ ಜಿಲ್ಲೆಯಲ್ಲಿ ಪತ್ತೆ ಮಾಡಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.

ಸುಚಿತ್ರಾ ಮೃತ ಮಹಿಳೆ. ಈಕೆಯನ್ನು ಪಾಲಕ್ಕಾಡ್ ಮೂಲದ ಸಂಗೀತ ಶಿಕ್ಷಕ ಪ್ರಶಾಂತ್(34) ಕೊಲೆ ಮಾಡಿದ್ದಾನೆ. ಬುಧವಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಕಾಲುಗಳನ್ನು ಕತ್ತರಿಸಿ ಅರ್ಧ ಸುಟ್ಟು, ಸಮಾಧಿ ಮಾಡಿದ್ದ ಸ್ಥಿತಿಯಲ್ಲಿ ಸುಚಿತ್ರಾ ಮೃತದೇಹ ಪತ್ತೆಯಾಗಿದೆ.

ಏನಿದು ಪ್ರಕರಣ?
ಜಿಲ್ಲೆಯ ಕೊಟ್ಟಿಯಂ ಬಳಿಯ ತ್ರಿಕೋವಿಲ್‍ವಟ್ಟಂ ಮೂಲದ ಸುಚಿತ್ರಾ ಬ್ಯೂಟಿಷಿಯನ್ ಆಗಿದ್ದಳು. ಸುಚಿತ್ರಾಗೆ ಮದುವೆಯಾಗಿ ಪತಿಯಿಂದ ವಿಚ್ಛೇದನ ಪಡೆದುಕೊಂಡು ಪೋಷಕರ ಮನೆಯಲ್ಲಿದ್ದಳು. ಸುಚಿತ್ರಾ ಮಾರ್ಚ್ 18 ರಂದು ಕೊಚ್ಚಿಯಲ್ಲಿ ನಡೆಯುತ್ತಿದ್ದ ತರಬೇತಿ ಅಧಿವೇಶನಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿದ್ದಳು. ಆದರೆ ಮಾರ್ಚ್ 20 ರಿಂದ ಆಕೆಯ ಫೋನ್ ನಾಟ್ ರೀಚೆಬಲ್ ಬಂದಿದೆ. ನಂತರ ಮಾರ್ಚ್ 22 ರಂದು ಸುಚಿತ್ರಾ ಕುಟುಂಬದವರು ಕೊಟ್ಟಿಯಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಸುಚಿತ್ರಾ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಐದು ದಿನಗಳ ಕಾಲ ರಜೆ ತೆಗೆದುಕೊಂಡಿದ್ದು ತಿಳಿದುಬಂದಿದೆ. ನಂತರ ಪೊಲೀಸರು ಸುಚಿತ್ರಾರ ಕಾಲ್ ಡಿಟೈಲ್ಸ್ ಪರಿಶೀಲನೆ ನಡೆಸಿದ್ದಾರೆ. ಆಗ ಮೃತ ಸುಚಿತ್ರಾ ಪಾಲಕ್ಕಾಡ್‍ನ ಸಂಗೀತ ಶಿಕ್ಷಕನಾಗಿದ್ದ ಪ್ರಶಾಂತ್ ಜೊತೆ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಮೃತ ಸುಚಿತ್ರಾ ಮತ್ತು ಪ್ರಶಾಂತ್ ಇಬ್ಬರು ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ.

ಕೊಲ್ಲಂನ ಅಪರಾಧ ವಿಭಾಗದ ಅಧಿಕಾರಿಗಳ ತಂಡ ತನಿಖೆಗಾಗಿ ಪಾಲಕ್ಕಾಡ್‍ಗೆ ಹೋಗಿದೆ. ಅಲ್ಲಿ ಸೈಬರ್ ಸೆಂಟರ್ ಸಹಾಯದಿಂದ ಆತನ ಕಾಲ್ ಟ್ರೇಸ್ ಮಾಡಿ ಪ್ರಶಾಂತ್ ನನ್ನು ವಶಪಡಿಸಿಕೊಂಡು ವಿಚಾರಣೆ ಮಾಡಿದ್ದಾರೆ. ಈ ವೇಳೆ ಪ್ರಶಾಂತ್ ಸುಚಿತ್ರಾಳನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಾರ್ಚ್ 18 ರಂದು ಪ್ರಶಾಂತ್ ತಮ್ಮ ಕುಟುಂಬದವರನ್ನು ಊರಿಗೆ ಕಳುಹಿಸಿದ್ದಾನೆ. ಅದೇ ದಿನ ಸುಚಿತ್ರಾ ಆತನ ಮನೆಗೆ ಹೋಗಿದ್ದಾಳೆ. ಇಬ್ಬರು ಒಟ್ಟಿಗೆ ಇದ್ದಾಗ ಜಗಳವಾಗಿದೆ. ಕೋಪದಲ್ಲಿ ಸುಚಿತ್ರಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಆರೋಪಿ ಪ್ರಶಾಂತ್‍ಗೆ ಈಗಾಗಲೇ ಮದುವೆಯಾಗಿ ಒಂದು ಮಗು ಕೂಡ ಇದೆ. ಮೃತ ಸುಚಿತ್ರಾ ಆರೋಪಿ ಪ್ರಶಾಂತ್ ಪತ್ನಿಯ ದೂರದ ಸಂಬಂಧಿಯಾಗಿದ್ದು, ಮಗುವಿನ ನಾಮಕರಣ ದಿನ ಇಬ್ಬರಿಗೂ ಪರಿಚಯವಾಗಿದೆ. ಅಂದಿನಿಂದ ಇಬ್ಬರೂ ಸ್ನೇಹಿತರಾಗಿದ್ದರು. ದಿನ ಕಳೆದಂತೆ ಸುಚಿತ್ರಾ, ಪ್ರಶಾಂತ್‍ನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಇರಲು ಇಷ್ಟಪಟ್ಟಿದ್ದಳು. ಆದರೆ ಆರೋಪಿ ಪ್ರಶಾಂತ್ ಸಮಾಜದ ಭಯದಿಂದ ಇದಕ್ಕೆ ಒಪ್ಪಲಿಲ್ಲ. ಇದರಿಂದ ಮಧ್ಯೆ ಜಗಳ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ಪ್ರಶಾಂತ್ ಆಕೆಯ ಎರಡು ಕಾಲುಗಳನ್ನು ಕತ್ತರಿಸಿ, ಮೃತದೇಹವನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಡಲು ಪ್ರಯತ್ನಿಸಿದ್ದಾನೆ. ಕೊನೆಗೆ ಸುಡುವುದು ಬೇಡ ಎಂದು ಸಮಾಧಿ ಮಾಡಿದ್ದಾರೆ. ಪಾಲಕ್ಕಾಡ್‍ನ ರಾಮನಾಥಪುರಂ ಬಳಿಯ ಆತನ ಬಾಡಿಗೆ ಮನೆಯ ಆವರಣದಲ್ಲಿ ಸುಚಿತ್ರಾ ಮೃತದೇಹ ಪತ್ತೆಯಾಗಿದೆ. ಸದ್ಯಕ್ಕೆ ಪೊಲೀಸರು ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ಆರೋಪಿ ಪ್ರಶಾಂತ್‍ನನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *