ಉನ್ನತ ವ್ಯಾಸಂಗಕ್ಕಾಗಿ ಸಂಗ್ರಹಿಸಿಟ್ಟಿದ್ದ ಹಣ ಕೊಟ್ಟ ಯುವತಿ

Public TV
2 Min Read

– 15 ಲಕ್ಷ ಪಡೆದು ವಂಚಿಸಿದ ಪ್ರಿಯಕರನಿಗೆ ಚಪ್ಪಲಿ ಏಟು

ಚಿತ್ರದುರ್ಗ: ಮದುವೆಯಾಗುವುದಾಗಿ ನಂಬಿಸಿ 15 ಲಕ್ಷ ರೂಪಾಯಿ ಪಡೆದು ಕೈಕೊಟ್ಟ ಪ್ರಿಯಕರನಿಗೆ ಯುವತಿ ಚಪ್ಪಲಿಯಿಂದ ಬಾರಿಸಿರುವ ಘಟನೆ ಚಿತ್ರದುರ್ಗದ ಬಡಾವಣೆ ಠಾಣೆ ಬಳಿ ನಡೆದಿದೆ.

ಉಮೇಶ್ ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದನು. ಈ ಕುರಿತು ಯುವತಿ ಚಿತ್ರದುರ್ಗದ ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದಳು. ಹೀಗಾಗಿ ವಂಚನೆ ಪ್ರಕರಣ ಸಂಬಂಧ ಮಹಿಳಾ ಠಾಣೆಗೆ ವಿಚಾರಣೆಗಾಗಿ ಉಮೇಶ್ ಬಂದಿದ್ದನು. ಇದನ್ನೂ ಓದಿ: ‘ನಿನ್ನ ಮದ್ವೇನೂ ಆಗ್ತೀನಿ, ಬೇರೆ ಲವರ್ಸ್ ಜೊತೆಯೂ ಸುತ್ತಾಡ್ತೀನಿ’ – 15 ಲಕ್ಷ ಪೀಕಿ ಬೆದರಿಸಿದ ಪ್ರೇಮಿ

ವಿಚಾರಣೆ ಮುಗಿಸಿ ಯುವಕ ತೆರಳುತ್ತಿದ್ದ ಇನ್ನೋವಾ ಕಾರನ್ನ ಅಡ್ಡಗಟ್ಟಿ ಯುವತಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ನಂತರ ಆರೋಪಿ ಉಮೇಶನಿಗೆ ಯುವತಿ ಮತ್ತು ಆಕೆಯ ಪೋಷಕರು ಸಖತ್ ಗೂಸಾ ಕೊಟ್ಟಿದ್ದಾರೆ. ಈ ವೇಳೆ ಪೊಲೀಸರು ಅವರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಆದರೂ ಯುವತಿ ಮೋಸ ಮಾಡಿದ್ದಕ್ಕೆ ಪ್ರಿಯಕರನಿಗೆ ಚಪ್ಪಲಿಯಿಂದ ಬಾರಿಸಿದ್ದಾಳೆ.

ಏನಿದು ಪ್ರಕರಣ?
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚೌಳಕೆರೆ ಗ್ರಾಮದ ಉಮೇಶ್ ಪ್ರೀತಿ ಹೆಸರಲ್ಲಿ ವಂಚಿಸಿದ್ದನು. ಕಳೆದ ಮೂರು ವರ್ಷಗಳ ಹಿಂದೆ ಡಿಪ್ಲೋಮಾ ಮಾಡುತ್ತಿದ್ದ ಕೆಳಗೋಟೆಯ ಯುವತಿ ಜೊತೆ ಸ್ನೇಹ ಬೆಳೆಸಿದ್ದನು. ಬಳಿಕ ಮೊಬೈಲ್‍ನಲ್ಲಿ ಮಾತಿನಿಂದಲೇ ಯುವತಿಯ ಮನಸೆಳೆದು ಪ್ರೀತಿ ಎಂಬ ಹಳ್ಳಕ್ಕೆ ಬೀಳಿಸಿದ್ದನು. ನಂತರ ಯುವತಿಯ ಮನೆಯಲ್ಲಿ ನಾಟಕ ಮಾಡಿ ಎರಡು ಕುಟುಂಬದ ನಡುವೆ ಮಾತುಕಥೆ ನಡೆಸಿ ಮದುವೆಗೂ ಒಪ್ಪಿಸಿದ್ದನು. ಹೀಗಾಗಿ ಯುವತಿ ಉಮೇಶ್‍ನನ್ನು ತುಂಬಾ ನಂಬಿದ್ದಳು. ಆದರೆ ಉಮೇಶ್ ಆಕೆಗೆ ಮೋಸ ಮಾಡಿ ಅವಳಿಂದ 15 ಲಕ್ಷ ರೂಪಾಯಿ ಹಣವನ್ನು ಪೀಕಿದ್ದನು. ತನ್ನ ಉನ್ನತ ವ್ಯಾಸಂಗಕ್ಕಾಗಿ ಸಂಗ್ರಹಿಸಿಟ್ಟಿದ್ದ ಹಣವನ್ನು ವಂಚಕನಿಗೆ ಕೊಟ್ಟು ಖಾಲಿ ಕೈ ಆದ ಬಳಿಕ ಯುವತಿಗೆ ವಂಚಿಸಿರೋ ಆಸಾಮಿಯ ಅಸಲಿ ಬಣ್ಣ ಬಯಲಾಗಿದೆ.

ಈಕೆಗಷ್ಟೇ ಅಲ್ಲದೇ ಅನೇಕ ಯುವತಿಯರು ಹಾಗೂ ಮಹಿಳೆಯರೊಂದಿಗೆ ಈತ ಪ್ರೀತಿಯ ನಾಟಕವಾಡಿ ಕೆಲವರೊಂದಿಗೆ ಅಕ್ರಮ ಸಂಬಂಧವನ್ನು ಸಹ ಹೊಂದಿದ್ದನು. ಈ ಸತ್ಯ ಉಮೇಶ್‍ನ ಮೊಬೈಲ್‍ನಿಂದಲೇ ಬಯಲಾಗಿದೆ. ಇದರಿಂದಾಗಿ ಈತನ ಅಸಲಿ ಬಂಡವಾಳ ಅರಿತ ಯುವತಿ ತಾನು ಕೊಟ್ಟ ಲಕ್ಷಾಂತರ ರೂಪಾಯಿ ಹಣವನ್ನು ವಾಪಸ್ ಕೇಳಿದ್ದಾಳೆ. ಆಗ ಇನ್ನುಳಿದ ಪ್ರೇಮಿಗಳಂತೆ ನಿನ್ನ ಜೊತೆಯೂ ಚೆನ್ನಾಗಿರ್ತೆನೆಂದು ದೌರ್ಜನ್ಯವೆಸೆಗಿದ್ದಾನೆ. ಹೀಗಾಗಿ ಮನನೊಂದ ಯುವತಿ ಚಿತ್ರದುರ್ಗದ ಮಹಿಳಾ ಠಾಣೆ ಪೊಲೀಸರ ಮೊರೆ ಹೋಗಿದ್ದಳು.

Share This Article
Leave a Comment

Leave a Reply

Your email address will not be published. Required fields are marked *