– ಪ್ರಿಯತಮೆ ಸಾವು, ಯುವಕ ಗಂಭೀರ
ಹುಬ್ಬಳ್ಳಿ: ಯುವಕನೊಬ್ಬ ತನ್ನ ಅಪ್ರಾಪ್ತ ಪ್ರೇಯಸಿಗೆ ವಿಷ ಕುಡಿಸಿ ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಲಗೆಪ್ಪ ಸುಳ್ಳದ ತಾನು ಪ್ರೀತಿಸಿದ್ದ ಅಪ್ರಾಪ್ತ ಬಾಲಕಿಗೆ ಹೊಲದಲ್ಲಿ ವಿಷ ಕುಡಿಸಿ, ಬಳಿಕ ತಾನೂ ವಿಷ ಕುಡಿದು ಇಬ್ಬರು ಬೈಕಿನಲ್ಲಿ ಕಿಮ್ಸ್ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಇಂದು ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಏನಿದು ಪ್ರಕರಣ?
ಹುಲಗೆಪ್ಪ ಸುಮಾರು ದಿನಗಳಿಂದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದನು. ಈ ವಿಷಯ ಹುಡುಗಿಯ ಮನೆಯಲ್ಲಿ ತಿಳಿದಿದೆ. ಆಗ ಹುಡುಗಿಯ ಮನೆಯಲ್ಲಿ ಬೇರೆಯವರೊಂದಿಗೆ ಮದುವೆ ಮಾಡಲು ನಿರ್ಧರಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಇಬ್ಬರೂ ವಿಷ ಸೇವಿಸಿ ನಂತರ ಬೈಕ್ ಮೂಲಕ ಕಿಮ್ಸ್ ಆಸ್ಪತ್ರೆಗೆ ಬಂದು ದಾಖಲಾಗಿದ್ದರು.
ವಿಷಯ ತಿಳಿಯುತ್ತಿದ್ದಂತೆ ಕಿಮ್ಸ್ ಆಸ್ಪತ್ರೆಗೆ ಆಗಮಿಸಿದ ಬಾಲಕಿಯ ಪೋಷಕರು, ಯುವಕನ ವಿರುದ್ಧ ದೂರು ನೀಡಿದ್ದಾರೆ. ಈ ಘಟನೆ ಧಾರವಾಡದ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿ ಯುವಕನಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯುವಕನ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ನಂತರ ತನಿಖೆ ನಡೆಸಿ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.