ಮದ್ವೆಯಾದ ಅಣ್ಣ, ತಂಗಿ-ರೊಚ್ಚಿಗೆದ್ದ ಮಾವನಿಂದ ಅಳಿಯನ ಕೊಲೆ

Public TV
2 Min Read

-ಕತ್ತು ಕೊಯ್ದು, ಶವಕ್ಕೆ ಕಲ್ಲುಕಟ್ಟಿ ನದಿಗೆ ಎಸೆದ್ರು
-ಅಳಿಯನ ಕೊಲೆಗೆ 5 ಲಕ್ಷ ರೂ. ಸುಪಾರಿ

ಹಾಸನ: ಹೊಳೇನರಸೀಪುರ ಬಳಿಯ ಹೇಮಾವತಿ ನದಿಯಲ್ಲಿ ಶವ ಸಿಕ್ಕ ಪ್ರಕರಣವನ್ನು ಹಾಸನ ಪೊಲೀಸರು ಬೇಧಿಸಿದ್ದು, ಆರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಾವ ದೇವರಾಜು ಅಳಿಯನಾದ ಮಂಜು ಕೊಲೆಗೆ 5 ಲಕ್ಷ ರೂ.ಗೆ ಸುಪಾರಿ ನೀಡಿದ್ದನು. ಸುಪಾರಿ ಪಡೆದ ಹಂತಕರು ಆತನ ಕತ್ತು ಕೊಯ್ದು, ಶವಕ್ಕೆ ಕಲ್ಲು ಕಟ್ಟೆ ಹೇಮಾವತಿ ನದಿಗೆ ಎಸೆದಿದ್ದರು. ಪ್ರಕರಣ ಕೈಗೆತ್ತಿಕೊಂಡಿದ್ದ ಹಾಸನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಮ್ ನಿವಾಸ್ ಸೆಪೆತ್ ನೇತೃತ್ವದ ತಂಡ ದೇವರಾಜು, ಯೋಗೇಶ್, ಮಂಜು, ಚಲುವ, ನಂದನ್ ಮತ್ತು ಸಂಜಯ್ ಎಂಬ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂರು ತಿಂಗಳ ಹಿಂದೆ ಮಂಜು ವರಸೆಯಲ್ಲಿ ತಂಗಿಯಾಗಿತ್ತಿದ್ದ ದೇವರಾಜು ಮಗಳನ್ನು ಮದುವೆ ಆಗಿದ್ದನು. ಅಣ್ಣ-ತಂಗಿ ಮದುವೆಯಾದರು ಎಂದು ಕೋಪಗೊಂಡಿದ್ದ ದೇವರಾಜು ಕೊಲೆಗೆ ಸುಪಾರಿ ನೀಡಿದ್ದನು.

ಮಂಡ್ಯ ಜಿಲ್ಲೆಯ ಸಿದ್ಧಯ್ಯನಕೊಪ್ಪಲು ನಿವಾಸಿಯಾಗಿದ್ದ ಮಂಜು ಮತ್ತು ಅರ್ಚನರಾಣಿ ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದರು. ವಿಷಯ ತಿಳಿದ ಪೋಷಕರು ಅರ್ಚನಾಳಿಗೆ ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು. ಇದರಿಂದ ಬೇಸತ್ತ ಜೋಡಿ ಪಲಾಯನಗೊಂಡಿತ್ತು.

ಸೆಪ್ಟಂಬರ್ 16 ರಂದು ಮಂಜು ಮತ್ತು ಅರ್ಚನಾರಾಣಿ ಮನೆಯವರ ವಿರೋಧದ ನಡುವೆ ಓಡಿಹೋಗಿ ಶಿವಮೊಗ್ಗದ ಶಿಕಾರಿಪುರದಲ್ಲಿ ಮದುವೆ ಮಾಡಿಕೊಂಡಿದ್ದರು. ಮದುವೆ ಬಳಿಕ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ವಾಸವಾಗಿದ್ದರು. ಇದರಿಂದ ಕೋಪಗೊಂಡ ಅರ್ಚನ ಕುಟುಬಂದವರು ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ಸಂಬಂಧ ಕಡಿದುಕೊಂಡಿದ್ದರು. ಆದರೂ ಅರ್ಚನ ತಂದೆ ಮಗಳ ಪತಿಯ ಕೊಲೆಗೆ ಮಂಡ್ಯದಲ್ಲಿ ಜಿಮ್ ನಡೆಸುತ್ತಿರುವ ತಮ್ಮನ ಮಗ ಸಂಜು ಮೂಲಕ ಸುಪಾರಿ ನೀಡಿದ್ದನು. ಸಂಜು ಹಾಗೂ ಆತನ ಸಹಚರ ಯೋಗೇಶ್ ನವೆಂಬರ್ 9ರಂದು ಮಂಜುನನ್ನು ಕೊಲೆಗೈದಿದ್ದರು.

ಏನಿದು ಪ್ರಕರಣ:
ನವೆಂಬರ್ 9ರಂದು ಸಂಜೆ ಹಾಲು ತರೋದಾಗಿ ಹೇಳಿ ಹೋದ ಮಂಜು ನಾಪತ್ತೆಯಾಗಿದ್ದ. ಬಳಿಕ ಪತಿ ಕಾಣೆಯಾಗಿದ್ದಾರೆ ಎಂದು ಪತ್ನಿ ಅರ್ಚನ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನವೆಂಬರ್ 15ರಂದು ಹೊಳೆನರಸೀಪುರದ ನದಿಯಲ್ಲಿ ಶವವೊಂದು ಪತ್ತೆಯಾಗಿದೆ ಎಂದು ಹಾಸನ ಪೊಲೀಸರು ಮಂಡ್ಯ ಪೋಲಿಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಪೊಲೀಸರು ಅರ್ಚನರನ್ನು ಸ್ಥಳಕ್ಕೆ ಕರೆದುಕೊಂಡು ಹೋದಾಗ ಎರಡು ಕೈಗಳಲ್ಲಿದ್ದ ಟ್ಯಾಟೂನಿಂದ ಇದು ಮಂಜು ಶವ ಎಂದು ಅರ್ಚನಾ ಗುರುತಿಸಿದ್ದರು.

ಮಂಜು ಕುತ್ತಿಗೆ ಕುಯ್ದು ಕೊಲೆ ಮಾಡಿ ದೇಹಕ್ಕೆ ಹಗ್ಗ ಬಿಗಿದು ನೀರಿಗೆ ಎಸೆಯಲಾಗಿತ್ತು. ಜೊತೆಗೆ ಮಂಜು ದೇಹ ತೇಲದಂತೆ ಕಲ್ಲು ಕಟ್ಟಿ ನದಿಗೆ ಎಸೆದಿದ್ದಾರೆ. ಈ ವಿಚಾರವಾಗಿ ಅರ್ಚನಾ ಕುಟುಂಬಸ್ಥರ ಮೇಲೆ ಮೃತ ಮಂಜು ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *