ಪ್ರೀತಿಸಿ ಮದ್ವೆ- ರಕ್ಷಣೆ ಕೋರಿ ಪೊಲೀಸರ ಮೊರೆ

Public TV
2 Min Read

ಹಾಸನ: ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಯುವ ಜೋಡಿಯೊಂದು ತಮಗೆ ಪ್ರಾಣ ಬೆದರಿಕೆ ಇರುವುದಾಗಿ ಮೊಬೈಲ್‍ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ವೈರಲ್ ವಿಡಿಯೋದಲ್ಲಿ ಮಾತನಾಡಿರುವ ಯುವತಿ, ತಾನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಲ್ಕೆರೆ ಗ್ರಾಮದವಳು ಎಂದು ತಿಳಿಸಿದರೆ, ಯುವತಿಯನ್ನು ಮದುವೆ ಆಗಿರುವ ಹುಡುಗ ತನ್ನದು ಹೊಳೇನರಸೀಪುರ ತಾಲೂಕಿನ ಸಬ್ಬನಹಳ್ಳಿ ಗ್ರಾಮದವನು ಎಂದು ಹೇಳಿಕೊಂಡಿದ್ದಾನೆ.

ವಿಡಿಯೋದಲ್ಲಿ ಮಾತನಾಡಿರುವ ಯುವತಿ ನಮಗೆ ನಮ್ಮ ತಂದೆಯ ಮನೆಯಿಂದ ಜೀವ ಬೆದರಿಕೆ ಇದೆ. ನಾನು ಸ್ವಇಚ್ಚೆಯಿಂದಲೇ ಮದುವೆಯಾಗಿದ್ದು ಪ್ರೀತಿಸಿದ ಹುಡುಗನ ಜೊತೆ ಇರಲು ಇಷ್ಟಪಟ್ಟಿದ್ದೇನೆ. ಹೀಗಾಗಿ ಎಸ್‍ಪಿಯವರು ತಮಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ದೂರಿನಲ್ಲಿ ಏನಿದೆ?
ನನಗೆ ಈಗ 19 ವರ್ಷ ವಯಸ್ಸು. ಪಿಯುಸಿ ಮುಗಿಸಿ ಡಿ ಫಾರ್ಮಸಿ ಶಿಕ್ಷಣವನ್ನು ಚಿಕ್ಕಮಗಳೂರಿನ ರಾಮಕೃಷ್ಣ ಕಾಲೇಜಿನಲ್ಲಿ ಓದುತ್ತಿದ್ದೆ. ಒಂದು ವರ್ಷದಿಂದ 24 ವರ್ಷದ ಮಂಜುನಾಥ್‍ನನ್ನು ಪ್ರೀತಿಸುತ್ತಿದ್ದೇನೆ. ಒಂದು ತಿಂಗಳ ಹಿಂದೆ ನಾನು ಮತ್ತು ನನ್ನ ಪತಿ ಮಂಜುನಾಥ್ ಚಿಕ್ಕಮಗಳೂರಿನಲ್ಲಿ ಭೇಟಿಯಾಗಿದ್ದೆವು. ಈ ವಿಚಾರ ನಮ್ಮ ಮನೆಯವರಿಗೆ ಗೊತ್ತಾಗಿ ನಮ್ಮ ತಂದೆ ಹಾಸನ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ನನ್ನ ಪತಿ ಮೇಲೆ ಬಲವಂತವಾಗಿ ದೂರು ಕೊಡಿಸಿದ್ದರು. ಇದರಿಂದ ನೊಂದ ನನ್ನ ಪತಿ ಫೆ. 18ರಂದು ವಿಷ ಕುಡಿದಿರುವುದಾಗಿ ನನ್ನ ಮೊಬೈಲಿಗೆ ಮೆಸೇಜ್ ಮಾಡಿದ್ದರು.

ಈ ವಿಷಯ ನನ್ನ ತಂದೆಗೆ ಹೇಳಿ ಮಂಜುನಾಥ್‍ನನ್ನು ನೋಡಿಕೊಂಡು ಬರುತ್ತೇನೆ ಎಂದು ಹೇಳಿದೆ. ಆದರೆ ಅವರು ಅವನು ಬದುಕಿದರೇನು ಸತ್ತರೇನು ಹೋಗಬೇಡ ಎಂದರು. ನಾನು ಮನಸ್ಸು ತಡೆಯಲಾಗದೆ ಹಾಸನದ ಸರ್ಕಾರಿ ಆಸ್ಪತ್ರೆಗೆ ಬಂದು ಮಂಜುನಾಥ್‍ನನ್ನು ಭೇಟಿ ಮಾಡಿದೆ. ಈ ವೇಳೆ ನಾನು ಮಂಜುನಾಥ್‍ಗೆ ನಾವು ಮದುವೆ ಮಾಡಿಕೊಳ್ಳೋಣ. ನಾನು ಮನೆಗೆ ಹೋದರೆ ನಮ್ಮಿಬ್ಬರನ್ನು ಅಪ್ಪ ಹಾಗೂ ಅವರ ಕಡೆಯವರು ಉಳಿಸುವುದಿಲ್ಲ ಎಂದು ಅದೇ ದಿನ ಆದಿಚುಂಚನಗಿರಿ ಬೆಟ್ಟದ ತಪ್ಪಲಿನಲ್ಲಿ ಮದುವೆ ಮಾಡಿಕೊಂಡ್ವಿ.

ನನ್ನ ತಂದೆಯ ಕೈಗೆ ಸಿಕ್ಕರೆ ಅವರು ನನ್ನ ಹಾಗೂ ನನ್ನ ಪತಿಯನ್ನು ದೂರ ಮಾಡಿ ಕೊಲೆ ಮಾಡುವ ಸಂಭವವಿದೆ. ಇಬ್ಬರ ಪ್ರಾಣಕ್ಕೆ ಅಪಾಯವಿದೆ. ಆದ್ದರಿಂದ ನಾನು ಪ್ರಾಪ್ತ ವಯಸ್ಸಿನವಳಾಗಿದ್ದು, ನನ್ನ ಪತಿಯೂ ಪ್ರಾಪ್ತ ವಯಸ್ಸಿನವನಾಗಿದ್ದು, ಸಂಸಾರ ಮಾಡಲು ಒಪ್ಪಿಗೆ ಇದೆ. ಹಾಗಾಗಿ ನಮ್ಮ ಅಪ್ಪನ ಕುಟುಂಬಸ್ಥರು ಯಾರು ತೊಂದರೆ ಕೊಡದಂತೆ ಅವರಿಗೆ ತಿಳುವಳಿಕೆ ಹೇಳಿ ಎಂದು ದೂರಿನಲ್ಲಿ ಯುವತಿ ಉಲ್ಲೇಖಿಸಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *