ಅಪ್ರಾಪ್ತೆಯೊಂದಿಗೆ ಪ್ರೇಮ ವೈಫಲ್ಯ ಶಂಕೆ – ʻಮಿಸ್ ಯು ಚಿನ್ನʼ ಅಂತ ಪೋಸ್ಟ್‌ ಮಾಡಿ ಯುವಕ ನೇಣಿಗೆ ಶರಣು

Public TV
2 Min Read

– ಹುಡುಗಿ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ
– ಬೇರೊಬ್ಬನನ್ನ ಲವ್‌ ಮಾಡುತ್ತಾ, ಚಿರುತ್‌ನನ್ನ ಅವಾಯ್ಡ್‌ ಮಾಡ್ತಿದ್ದಳಂತೆ ಹುಡುಗಿ

ಚಿಕ್ಕಬಳ್ಳಾಪುರ: ಆತನಿಗೆ ಇನ್ನೂ 18 ವರ್ಷ ವಯಸ್ಸು. ಆದ್ರೆ ಹದಿಹರೆಯದ ವಯಸ್ಸಲ್ಲೇ ಪ್ರೀತಿ ಪ್ರೇಮ ಅಂತ ಅಪ್ರಾಪ್ತೆ ಜೊತೆ ಪ್ರಣಯದಾಟವೂ ಆಡಿದ್ದ. ಇದ್ದಕ್ಕಿದ್ದಂತೆ ಅದೇನಾಯ್ತೋ ಏನೋ ಕೊನೆಗೆ ಆಕೆಯ ವೇಲ್‌ನಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಬಾಲಕುಂಟಹಳ್ಳಿ ಗ್ರಾಮದ ಬಳಿ ನಡೆದಿದೆ.

ಬಾಲಕುಂಟಹಳ್ಳಿ ಗ್ರಾಮದ 18 ವರ್ಷದ ಯುವಕ ಚಿರುತ್ ಕುಮಾರ್ ಆತ್ಮಹತ್ಯೆ (Suicide) ಮಾಡಿಕೊಂಡವ. ಅಂದಹಾಗೆ ಸಾಯುವ ಮುನ್ನ ʻಮಿಸ್ ಯು ಚಿನ್ನʼ ಅಂತ ಆಕೆಯೊಂದಿಗಿನ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಆಕೆಯ ವೇಲ್‌ನಿಂದಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

SSLCನಲ್ಲಿ ಒಂದಲ್ಲ ಎರಡಲ್ಲ ಅಂತ ಮೂರು ಬಾರಿ ಫೇಲ್ ಆಗಿದ್ದ ಚಿರುತ್ ಊರಲ್ಲೇ ಕೃಷಿ ಕೆಲಸ ಮಾಡಿಕೊಂಡಿದ್ದ. ಆದ್ರೆ ಚಿರುತ್ ಕುಮಾರ್ ಇದ್ದಕ್ಕಿದ್ದಂತೆ ಜಕ್ಕಲಮಡುಗು ಜಲಾಶಯದ ಬಳಿ ಜಮೀನು ಪಕ್ಕದಲ್ಲೇ ಇದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಂದಹಾಗೆ ತಂದೆ ತಾಯಿಗೆ ಒಬ್ಬನೇ ಮಗನಾಗಿದ್ದ ಚಿರುತ್ ಕುಮಾರ್ ಅದ್ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದ ಅನ್ನೋದು ಆರಂಭದಲ್ಲಿ ಸಂಬಂಧಿಕರಿಗೂ ಗೊತ್ತಾಗಿರಲಿಲ್ಲ. ಕೊನಗೆ ಆತನ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳನ್ನ ಜಾಲಾಡಿದಾಗ ಆತ ಸಾಯುವ ಮುನ್ನ ಅಪ್ರಾಪ್ತ ಬಾಲಕಿಯೊಂದಿಗೆ ಇರುವ ಫೋಟೋಗಳನ್ನ ಹಾಕಿಕೊಂಡಿದ್ದಾನೆ. ಇದ್ರಿಂದ ಪ್ರೇಮ ವೈಫಲ್ಯದಿಂದಲೇ ಚಿರುತ್ ಕುಮಾರ್ ಸೂಸೈಡ್ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಈ ಹಿಂದೆಯೂ ಎರಡು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಸಾಯುವುದಾಗಿ ಚಿರುತ್ ಕುಮಾರ್ ಪೋಸ್ಟ್ ಮಾಡಿದ್ದನಂತೆ. ಆಗ ಸ್ನೇಹಿತರೇ ಹೋಗಿ ಅವನಿಗೆ ಬುದ್ದಿ ಮಾತು ಹೇಳಿ ಮನೆಗೆ ಕರೆದುಕೊಂಡು ಬಂದಿದ್ರಂತೆ. ಆದ್ರೆ ಮೂರನೇ ಬಾರಿ ಸೂಸೈಡ್ ಮಾಡಿಕೊಂಡು ಸಾವಿನ ಮನೆ ಸೇರಿಕೊಂಡಿದ್ದಾನೆ.

ಇನ್ನೂ ಅಪ್ರಾಪ್ತ ಬಾಲಕಿ, ಚಿರುತ್‌ನನ್ನ ಬಿಟ್ಟು ಬೇರೆ ಯಾರೋ ಹುಡುಗನನ್ನ ಪ್ರೀತಿ ಮಾಡುತ್ತಿದ್ದಳಂತೆ, ಚಿರುತ್ ಫೋನ್‌ ರಿಸೀವ್ ಮಾಡದೇ ಅವಾಯ್ಡ್‌ ಮಾಡಿದ್ಲಂತೆ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಆಪ್ತ ಸ್ನೇಹಿತರು ಬಳಗದಿಂದ ಮಾಹಿತಿ ಲಭ್ಯವಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

Share This Article