EC ಮೊಬೈಲ್‌ ಸಂಖ್ಯೆ, ಐಪಿ ವಿಳಾಸ ನೀಡಿದ್ರೂ ಕರ್ನಾಟಕದ ಸಿಐಡಿ ಏನು ಮಾಡುತ್ತಿದೆ: ಅನುರಾಗ್‌ ಠಾಕೂರ್‌ ಪ್ರಶ್ನೆ

Public TV
3 Min Read

– ಆಳಂದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿದ್ದ ರಾಹುಲ್‌
– ಕಾಂಗ್ರೆಸ್‌ನಿಂದ ಸಂವಿಧಾನಿಕ ಸಂಸ್ಥೆಯನ್ನು ದುರ್ಬಲಗೊಳಿಸುವ ಯತ್ನ

ನವದೆಹಲಿ: ಚುನಾವಣಾ ಆಯೋಗವು (Election Commission) ಈಗಾಗಲೇ ಮೊಬೈಲ್ ಸಂಖ್ಯೆ ಮತ್ತು ಐಪಿ ವಿಳಾಸವನ್ನು ನೀಡಿದ್ದರೂ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದ (Karnataka) ಸಿಐಡಿ (CID) ಇಲ್ಲಿಯವರೆಗೆ ಏನು ಮಾಡಿದೆ ಎಂದು ಬಿಜೆಪಿ ಸಂಸದ, ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಅನುರಾಗ್‌ ಠಾಕೂರ್‌ (Anurag Thakur) ಪ್ರಶ್ನೆ ಮಾಡಿದ್ದಾರೆ.

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತದಾರರ ಮತಗಳನ್ನು ಡಿಲೀಟ್‌ ಮಾಡುವ ಪ್ರಯತ್ನ ನಡೆದಿತ್ತು ಎಂಬ ರಾಹುಲ್‌ ಗಾಂಧಿ ಆರೋಪದ ಬೆನ್ನಲ್ಲೇ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

2023 ರಲ್ಲಿ ಆಳಂದ ವಿಧಾನಸಭಾ ಕ್ಷೇತ್ರದಿಂದ ಹೆಸರುಗಳನ್ನು ತೆಗೆದುಹಾಕಲು ವಿಫಲ ಪ್ರಯತ್ನಗಳು ನಡೆದಿದ್ದವು. ಈ ಸಂಬಂಧ ಚುನಾವಣಾ ಆಯೋಗವೇ ಎಫ್‌ಐಆರ್ ದಾಖಲಿಸುವಂತೆ ನಿರ್ದೇಶಿಸಿತ್ತು. ಚುನಾವಣಾ ಆಯೋಗವು ಈಗಾಗಲೇ ಮೊಬೈಲ್ ಸಂಖ್ಯೆ ಮತ್ತು ಐಪಿ ವಿಳಾಸವನ್ನು ಒದಗಿಸಿದೆ. ದಾಖಲೆಗಳ ಪ್ರಕಾರ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಹಾಗಾದರೆ ಮತಗಳನ್ನು ಕದಿಯುವ ಮೂಲಕ ಕಾಂಗ್ರೆಸ್ ಗೆದ್ದಿದೆಯೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಹುಲ್‌ ಆರೋಪಿಸಿದಂತೆ ಆನ್‌ಲೈನಿನಲ್ಲಿ ಮತ ಅಳಿಸಲು ಸಾಧ್ಯವಿಲ್ಲ: ಚುನಾವಣಾ ಆಯೋಗ

ಟೂಲ್‌ಕಿಟ್‌ಗಳಿಂದ ಸಹಾಯ ಪಡೆಯುವ ಮೂಲಕ ರಾಹುಲ್‌ ಗಾಂಧಿ ನಮ್ಮ ಸಾಂವಿಧಾನಿಕ ಸಂಸ್ಥೆಗಳನ್ನು ನಿರಂತರವಾಗಿ ಪ್ರಶ್ನಿಸುತ್ತಾರೆ ಮತ್ತು ದುರ್ಬಲಗೊಳಿಸುತ್ತಾರೆ. ಭಾರತದ ಚುನಾವಣಾ ಆಯೋಗವು ಪಕ್ಷಪಾತವಿಲ್ಲದೆ ಕಾರ್ಯನಿರ್ವಹಿಸುತ್ತಿರುವಾಗ, ರಾಹುಲ್ ಗಾಂಧಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಜನರನ್ನು ದಾರಿ ತಪ್ಪಿಸುವ ಮತ್ತು ಬಾಂಗ್ಲಾದೇಶ ಮತ್ತು ನೇಪಾಳದಂತಹ ಪರಿಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ಸಾಫ್ಟ್‌ವೇರ್‌ ಬಳಸಿ ಆಳಂದದಲ್ಲಿ 6018 ಮತದಾರರು ಡಿಲೀಟ್: ರಾಹುಲ್‌ ಗಾಂಧಿ ಬಾಂಬ್‌

ಕೋಲಾರದ ಮಾಲೂರಿನಲ್ಲಿ ಕಾಂಗ್ರೆಸ್‌ ಗೆಲುವನ್ನು ಹೈಕೋರ್ಟ್‌ ಅಸಿಂಧು ಎಂದು ಹೇಳಿದೆ. ಮತಗಳ್ಳತನದ ಆರೋಪ ಮಾಡುತ್ತಿರುವ ರಾಹುಲ್‌ ಗಾಂಧಿ ಈ ವಿಚಾರದ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

 

ರಾಹುಲ್ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದ ಅವರು ಅವರ ನೇತೃತ್ವದಲ್ಲಿ ಕಾಂಗ್ರೆಸ್ 90 ಚುನಾವಣೆಗಳಲ್ಲಿ ಸೋತಿದ್ದು, ಈಗ ಅವರು ಆಧಾರರಹಿತ ಮತ್ತು ತಪ್ಪು ಆರೋಪಗಳನ್ನು ಮಾಡುತ್ತಿದ್ದಾರೆ. ಇಂದಿನ ಪತ್ರಿಕಾಗೋಷ್ಠಿಯಲ್ಲಿ ಗಾಂಧಿ ‘ಹೈಡ್ರೋಜನ್ ಬಾಂಬ್’ ಹಾಕಬೇಕಿತ್ತು. ಆದರೆ ಅವರು ಪಟಾಕಿಗಳೊಂದಿಗೆ ಮಾತ್ರ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಸುಮಾರು 90 ಚುನಾವಣೆಗಳಲ್ಲಿ ಸೋತಿದೆ. ಅವರ ಹತಾಶೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆರೋಪಗಳ ರಾಜಕೀಯವನ್ನು ಅವರು ತಮ್ಮ ಆಭರಣವನ್ನಾಗಿ ಮಾಡಿಕೊಂಡಿದ್ದಾರೆ. ತಪ್ಪು ಮತ್ತು ಆಧಾರರಹಿತ ಆರೋಪಗಳನ್ನು ಮಾಡುವುದು ಅಭ್ಯಾಸವಾಗಿದೆ. ಕೊನೆಗೆ ಕ್ಷಮೆಯಾಚಿಸುವುದು ಮತ್ತು ನ್ಯಾಯಾಲಯಗಳಿಂದ ಟೀಕೆಗೆ ಒಳಗಾಗುವುದು ರಾಹುಲ್ ಗಾಂಧಿಯವರ ದಿನಚರಿಯಾಗಿದೆ ಎಂದು ಟೀಕಿಸಿದರು.

Share This Article