ಶ್ರೀಕೃಷ್ಣ, ಹನುಮಂತ ಇಬ್ಬರೂ ಶ್ರೇಷ್ಠ ರಾಜತಾಂತ್ರಿಕರು: ಜೈಶಂಕರ್‌

Public TV
3 Min Read

ಪುಣೆ: ಶ್ರೀಕೃಷ್ಣ ಮತ್ತು ಹನುಮಂತ ಇಬ್ಬರೂ ಶ್ರೇಷ್ಠ ರಾಜತಾಂತ್ರಿಕರು ಎಂದು ವಿದೇಶಾಂಗ ಸಚಿವ ಜೈಶಂಕರ್‌ (S Jaishankar) ಬಣ್ಣಿಸಿದ್ದಾರೆ.

ತಮ್ಮ The India Way: Strategies for an Uncertain World ಪುಸ್ತಕದ ಮರಾಠಿ ಅನುವಾದ ʼಭಾರತ್‌ ಮಾರ್ಗ್‌ʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ ಮಹಾಭಾರತ ಮತ್ತು ರಾಮಾಯಣದ ಕಥೆಗಳಲ್ಲಿ ಬರುವ ಸಂದರ್ಭಗಳನ್ನು ವಿವರಿಸಿ ರಾಜತಾಂತ್ರಿಕತೆಯ ಮಹತ್ವವವನ್ನು ವಿವರಿಸಿದರು.

ಶ್ರೀಕೃಷ್ಣ ಮತ್ತು ಹನುಮಂತ (Hanuman) ಜಗತ್ತಿನ ಅತಿದೊಡ್ಡ ರಾಜತಾಂತ್ರಿಕರು. ಹನುಮಂತ ರಾಜತಾಂತ್ರಿಕತೆಯನ್ನು ಮೀರಿ ಹೋಗಿದ್ದನು. ಸೀತೆಯ ಜೊತೆ ಮಾತನಾಡಿದ್ದು ಅಲ್ಲದೇ ಲಂಕೆಗೆ ಬೆಂಕಿ ಹಾಕಿದ್ದ ಎಂದು ಹೇಳಿದರು.

ಶ್ರೀಕೃಷ್ಣನ ಬಗ್ಗೆ ಹೇಳುತ್ತಾ, ಶಿಶುಪಾಲನ 100 ತಪ್ಪುಗಳನ್ನು ನಾನು ಕ್ಷಮಿಸುತ್ತೇನೆ ಎಂದು ಶ್ರೀಕೃಷ್ಣ ವಾಗ್ದಾನ ಮಾಡುತ್ತಾನೆ. ಆದರೆ 100ನೇ ತಪ್ಪು ಮಾಡಿದಾಗ ಶ್ರೀಕೃಷ್ಣ ವಧೆ ಮಾಡುತ್ತಾನೆ. ಇದು ಉತ್ತಮ ನಿರ್ಧಾರ ತೆಗೆದುಕೊಳ್ಳುವವರ ಪ್ರಮುಖ ಗುಣಗಳ ಪ್ರಾಮುಖ್ಯತೆಯನ್ನು ತೋರಿಸುತ್ತದೆ ಎಂದು ವಿವರಿಸಿದರು. ಇದನ್ನೂ ಓದಿ: India-China Border Row: 1962ರಲ್ಲೇ ಚೀನಾ ಭೂಪ್ರದೇಶ ಆಕ್ರಮಿಸಿತ್ತು – ರಾಗಾ ಟೀಕೆಗೆ ಜೈಶಂಕರ್ ತಿರುಗೇಟು

ಜೈಶಂಕರ್ ಅವರು ಕೌರವರು ಮತ್ತು ಪಾಂಡವರ ನಡುವೆ ಮಹಾಭಾರತ ಯುದ್ಧ ನಡೆದ ಕುರುಕ್ಷೇತ್ರವನ್ನು ‘ಬಹುಧ್ರುವ ಭಾರತ’ ಎಂದು ಬಣ್ಣಿಸಿದರು. ಕಾರ್ಯತಂತ್ರದ ವಂಚನೆ ವಿಷಯದ ಬಗ್ಗೆ ಪ್ರಸ್ತಾಪಿಸಿದ ಜೈಶಂಕರ್‌ ಅವರು ಕೃತಕವಾಗಿ ಸೂರ್ಯಾಸ್ತಮಾನ ಸೃಷ್ಟಿಸಿದ ಕೃಷ್ಣನ (Krishna) ಉದಾಹರಣೆಯನ್ನು ನೀಡಿದರು.

ಅರ್ಜುನನ ಮಗ ಅಭಿಮನ್ಯುವನ್ನು ಕೌರವನ ಕಡೆಯ ಅನೇಕ ಯೋಧರು ಮೋಸ ಮಾಡಿ ಹತ್ಯೆ ಮಾಡಿದರು. ತನ್ನ ಮಗನನ್ನು ಹತ್ಯೆ ಮಾಡಿದ ಜಯದ್ರಥನನ್ನು ಮರುದಿನ ಸಂಜೆಯ ಒಳಗಡೆ ಹತ್ಯೆ ಮಾಡುತ್ತೇನೆ ಎಂದು ಅರ್ಜುನ ಶಪಥ ಮಾಡುತ್ತಾನೆ. ಈ ಶಪಥ ಈಡೇರದೇ ಇದ್ದರೆ ನಾನು ಉರಿಯುವ ಬೆಂಕಿಗೆ ಹಾರಿ ಪ್ರಾಣ ಬಿಡುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ. ಈ ವಿಷಯ ತಿಳಿದ ಕೌರವರು ಜಯದ್ರಥನನ್ನು ದಿನಪೂರ್ತಿ ಮರೆ ಮಾಡುತ್ತಾರೆ. ಸೂರ್ಯ ಮುಳುಗಿದ ವಿಚಾರ ತಿಳಿದು ಜಯದ್ರಥ ಕಾಣಿಸಿಕೊಂಡಾಗ ಕೃಷ್ಣ ಅರ್ಜುನನಿಗೆ ಬಾಣ ಹೊಡೆಯುವಂತೆ ಹೇಳುತ್ತಾನೆ. ಅರ್ಜುನ ಬಾಣ ಹೊಡೆದು ಜಯದ್ರಥನನ್ನು ಕೊಲ್ಲುತ್ತಾನೆ. ಕೌರವರಿಗಿಂತ ಉತ್ತಮರು ಈ ಕಾರಣಕ್ಕೆ ಕೃಷ್ಣ ಪಾಂಡವರನ್ನು ಬೆಂಬಲಿಸಿದ ಎಂದು ವಿವರಿಸಿದರು.

ಜೈಶಂಕರ್ ಅವರು ಯುಧಿಷ್ಠಿರನು ಅಶ್ವತ್ಥಾಮನ ಸಾವಿನ ಬಗ್ಗೆ ಸುಳ್ಳು ಹೇಳಿದ ಉದಾಹರಣೆಗಳನ್ನು ನೀಡುವ ಮೂಲಕ “ತಂತ್ರಗಾರಿಕೆಯ ಹೊಂದಾಣಿಕೆʼ ವಿಚಾರದ ಬಗ್ಗೆ ವಿವರಿಸಿದರು.

ದ್ರೋಣಾಚಾರ್ಯರು ಕೌರವರ ಸೇನಾಧಿಪತಿಗಳಾಗಿದ್ದರು. 5 ದಿನಗಳ ಕಾಲ ಉಗ್ರವಾಗಿ ಹೋರಾಡಿದರೂ ಪಾಂಡವರಿಗೆ ಅವರನ್ನು ತಡೆಯಲು ಸಾಧ್ಯವಾಗಿರಲಿಲ್ಲ. ದ್ರೋಣಾಚಾರ್ಯರು ಯುಧಿಷ್ಠರನನ್ನು ಮಾತ್ರ ನಂಬುತ್ತಾರೆಯೇ ಹೊರತು ಬೇರೆ ಯಾರನ್ನೂ ನಂಬುವುದಿಲ್ಲ ಎಂಬುದನ್ನು ತಿಳಿದ ಪಾಂಡವರು ದ್ರೋಣಾಚಾರ್ಯರನ್ನು ಮೋಸಗೊಳಿಸಲು ಗೇಮ್ ಪ್ಲಾನ್ ಮಾಡಿದರು.

ಈ ಸಂದರ್ಭದಲ್ಲಿ, ದ್ರೋಣನ ಏಕೈಕ ದೌರ್ಬಲ್ಯವೆಂದರೆ ಅವನ ಮಗ ಅಶ್ವತ್ಥಾಮ ಎಂದು ಕೃಷ್ಣನಿಗೆ ತಿಳಿದಿತ್ತು. ಹಾಗಾಗಿ ಅಶ್ವತ್ಥಾಮ ಸತ್ತಿದ್ದಾನೆ ಎಂಬ ಸುದ್ದಿಯನ್ನು ಹರಡುವಂತೆ ಯುಧಿಷ್ಠಿರನನ್ನು ಕೇಳುತ್ತಾನೆ. ಯುಧಿಷ್ಠರ ಅಶ್ವತ್ಥಾಮ ಸತ್ತಿದ್ದಾನೆ ಎಂದು ಹೇಳಿದಾಗ ದ್ರೋಣಾಚಾರ್ಯರು ಶಸ್ತ್ರತ್ಯಾಗ ಮಾಡಿದರು ಎಂದು ಕಥೆಯನ್ನು ವಿವರಿಸಿದರು.

ನೆರೆಹೊರೆಯವರನ್ನು ಆಯ್ಕೆ ಮಾಡಲು ಭಾರತದ ಭೌಗೋಳಿಕ ಮಿತಿಗಳ ಬಗ್ಗೆ ಮಾತನಾಡಿದ ಅವರು, ಪಾಂಡವರಿಗೆ ಯಾರು ಸಂಬಂಧಿಗಳು ಸಹಾಯ ಮಾಡಲು ಬರಲಿಲ್ಲ ಎಂದು ಹೇಳಿ ಪಾಕಿಸ್ತಾನದ ಉದಾಹರಣೆ ನೀಡಿದರು.

ಭಯೋತ್ಪಾದನೆಯಿಂದಾಗಿ ಪಾಕಿಸ್ತಾನ ಜಾಗತಿಕ ಸಮುದಾಯದಿಂದ ಹಿನ್ನಡೆಯನ್ನು ಅನುಭವಿಸುತ್ತಿದೆ. ಪಾಕಿಸ್ತಾನವು ಈಗ ಕೆಲವೇ ಮಿತ್ರರಾಷ್ಟ್ರಗಳನ್ನು ಹೊಂದಿದೆ. ಅದರಲ್ಲೂ ಟರ್ಕಿ ಪಾಕಿಸ್ತಾನಕ್ಕೆ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ. ಚೀನಾ ಎಂದಿಗೂ ಅನುದಾನವನ್ನು ನೀಡುವುದಿಲ್ಲ ಆದರೆ ಸಾಲವನ್ನು ಮಾತ್ರ ನೀಡುತ್ತದೆ ಎಂದರು.

ವಿದೇಶಾಂಗ ಸಚಿವರನ್ನಾಗಿ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದ ಅವರು, ವಿದೇಶಾಂಗ ಕಾರ್ಯದರ್ಶಿಯಾಗುವುದು ನನ್ನ ಮಹತ್ವಾಕಾಂಕ್ಷೆಯಾಗಿತ್ತು. ಮಂತ್ರಿಯಾಗುವ ಕನಸು ಕೂಡ ಕಂಡಿರಲಿಲ್ಲ. ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ ಬೇರೆ ಪ್ರಧಾನಿಗಳು ನನ್ನನ್ನು ಮಂತ್ರಿ ಮಾಡಬಹುದು ಎಂಬುದನ್ನು ನಾನು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *