2012ರಲ್ಲಿ ತಮಿಳುನಾಡಿನಲ್ಲಿ ಕಳುವಾಗಿದ್ದ 500 ವರ್ಷ ಹಳೆಯ ಹನುಮಾನ್ ವಿಗ್ರಹ ಭಾರತಕ್ಕೆ ವಾಪಸ್

By
2 Min Read

ಚೆನ್ನೈ: ದಶಕದ ಹಿಂದೆ ತಮಿಳುನಾಡಿನ ಅರಿಯಾಲೂರಿನಿಂದ ಕದ್ದು ವಿದೇಶಕ್ಕೆ ಸಾಗಿಸಲಾಗಿದ್ದ ಹನುಮಂತನ ವಿಗ್ರಹವನ್ನು ಶೀಘ್ರದಲ್ಲೇ ಭಾರತಕ್ಕೆ ವಾಪಸ್ ತರಲಾಗುವುದು ಎಂದು ಕೇಂದ್ರ ಸಂಸ್ಕøತಿ ಸಚಿವ ಜಿ.ಕಿಶನ್ ರೆಡ್ಡಿ ಬುಧವಾರ ಹೇಳಿದ್ದಾರೆ.

ವಿಜಯನಗರ ಸಾಮ್ರಾಜ್ಯ ಕಾಲದ 14-15ನೇ ಶತಮಾನದ ಹನುಮಂತನ ವಿಗ್ರಹವನ್ನು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಖಾಸಗಿ ಖರೀದಿದಾರರೊಬ್ಬರ ಸ್ವಾಧೀನದಲ್ಲಿ ಇದ್ದಿದ್ದನ್ನು ಪತ್ತೆ ಹಚ್ಚಲಾಗಿದೆ.

ಈ ಬಗ್ಗೆ ನಿನ್ನೆ ಕೇಂದ್ರ ಸಚಿವ ರೆಡ್ಡಿ ಅವರು ಮಾತನಾಡಿ, ತಮಿಳುನಾಡಿನ ದೇವಸ್ಥಾನದಿಂದ ಕಳುವಾಗಿದ್ದ 500 ವರ್ಷ ಹಳೇ ಆಂಜನೇಯನ ವಿಗ್ರಹವನ್ನು ಭಾರತಕ್ಕೆ ವಾಪಸ್ ತರಲಾಗುವುದು. ಈಗಾಗಲೇ ಯುಎಸ್ ಹೋಮ್ ಲ್ಯಾಂಡ್ ಸೆಕ್ಯೂರಿಟಿ, ಈ ವಿಗ್ರಹವನ್ನು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಹಸ್ತಾಂತರ ಮಾಡಿದೆ ಎಂದು ತಿಳಿಸಿದ್ದಾರೆ.

ಅಂದಹಾಗೇ, ಈ ಆಂಜನೇಯನ ವಿಗ್ರಹವನ್ನು ಅರಿಯಲೂರಿನ ವೆಲ್ಲೂರು ಗ್ರಾಮದ ವರದರಾಜ ಪೆರುಮಾಳ್ ದೇಗುಲದಿಂದ ಶ್ರೀದೇವಿ ಮತ್ತು ಭೂದೇವಿ ವಿಗ್ರಹಗಳೊಂದಿಗೆ 2012ರ ಏಪ್ರಿಲ್ 9ರಂದು ಕಳುವು ಮಾಡಲಾಗಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಹರ್ಷನ ಹತ್ಯೆ- ಡೀಟೈಲ್ಸ್ ಎಲ್ಲ ಹೇಳೋಕೆ ಆಗಲ್ಲ: ಆರಗ ಜ್ಞಾನೇಂದ್ರ

2014ರಲ್ಲಿ ಕ್ರಿಸ್ಟಿ ಹರಾಜು ಕಂಪನಿ ಈ ವಿಗ್ರಹವನ್ನು ಹರಾಜಿಗೆ ಇಟ್ಟಿತ್ತು. 37,500 ಡಾಲರ್ ಕೊಟ್ಟು ಖಾಸಗಿ ವ್ಯಕ್ತಿಯೊಬ್ಬರು ಖರೀದಿ ಮಾಡಿದ್ದರು. ಆದರೆ ಇತ್ತ ಭಾರತದಲ್ಲಿ ಕಳ್ಳತನವಾದ ವಿಗ್ರಹಗಳ ಬಗ್ಗೆ ತನಿಖೆಯೂ ನಡೆಯುತ್ತಿತ್ತು.

ತಮಿಳುನಾಡಿನ ಪೊಲೀಸರ ತಂಡ ಈ ಪ್ರಕರಣದ ವಿಚಾರವಾಗಿ ಯುಎಸ್ ಹೋಮ್ ಲ್ಯಾಂಡ್ ಸೆಕ್ಯೂರಿಟಿಯನ್ನು ಸಂಪರ್ಕಿಸಿತ್ತು ಅಂತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಆಸ್ಟ್ರೇಲಿಯಾದಲ್ಲಿ ಹರಾಜು ಕಂಪನಿಯವರಿಗಾಗಲಿ, ಅದನ್ನು ಖರೀದಿಸಿದ ವ್ಯಕ್ತಿಗಾಗಲಿ ಇದು ಕದ್ದ ವಿಗ್ರಹ ಎಂಬ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಹೇಳಲಾಗಿದೆ. ಇದನ್ನೂ ಓದಿ: ಅಗ್ನಿ ಅವಘಡ – ಕಟ್ಟಡದಿಂದ ಹಾರಿ ಜೀವ ಉಳಿಸಿಕೊಂಡ ತಾಯಿ, ಮಗಳು

ಇತ್ತೀಚಿನ ವರ್ಷಗಳಲ್ಲಿ ಹೀಗೆ ಹಲವು ವಿಗ್ರಹಗಳನ್ನು ಭಾರತಕ್ಕೆ ವಾಪಸ್ ತರಲಾಗಿದೆ. ಹಿಂದೆಲ್ಲ ಕಳುವಾಗಿ ವಿದೇಶಕ್ಕೆ ಸಾಗಿಸಲಾಗಿದ್ದ ದೇವರ ಮೂರ್ತಿಗಳು ಒಂದೊಂದೇ ದೇಶಕ್ಕೆ ವಾಪಸ್ ಬರುತ್ತಿವೆ.

ಎರಡು ದಶಕಗಳ ಹಿಂದೆ ಬಿಹಾರದ ಕುಂಡಲ್‍ಪುರ ದೇವಸ್ಥಾನದಿಂದ ಕಳುವಾದ ಅವಲೋಕಿತೇಶ್ವರ ಪದ್ಮಪಾಣಿ (ಬುದ್ಧ) ವಿಗ್ರಹ ಇಟಲಿಯಲ್ಲಿ ಪತ್ತೆಯಾಗಿದೆ. ಮಿಲನ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಅದನ್ನು ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಭಾರತಕ್ಕೆ ಬರಲಿದೆ. ಈ ವಿಗ್ರಹ 8-12ನೇ ಶತಮಾನದ್ದು, 2000ನೇ ಇಸವಿಯಲ್ಲಿ ಕಳುವಾಗಿತ್ತು. ವಾರಾಣಸಿಯ ದೇವಸ್ಥಾನವೊಂದರಿಂದ 100 ವರ್ಷಗಳ ಹಿಂದೆ ಕಳುವಾಗಿದ್ದ, 18ನೇ ಶತಮಾನದ ದೇವಿ ಅನ್ನಪೂರ್ಣಾ ವಿಗ್ರಹವನ್ನು 2021ರ ಅಕ್ಟೋಬರ್‍ನಲ್ಲಿ ಕೆನಡಾದ ಒಟ್ಟಾವಾದಿಂದ ವಾಪಸ್ ತರಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *