– ರಾಜ್ಯ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯಿಂದಲೇ ಲೋಪದೋಷ ಪತ್ತೆ; ವರದಿ ಸಲ್ಲಿಕೆ
– ಕನಿಷ್ಠ 25 ವರ್ಷಕ್ಕೆ ಯೋಜನೆ ರೂಪಿಸಬೇಕು, 10 ವರ್ಷಕ್ಕಲ್ಲ ಅಂತ ಎಚ್ಚರಿಕೆ
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರ ಕನಸಿನ ಕೂಸು ಟನಲ್ ರಸ್ತೆ ಡಿಪಿಆರ್ನಲ್ಲಿ ಲೋಪದೋಷ ಕಂಡುಬಂದಿದೆ. ಹೀಗಾಗಿ ಆರಂಭದಲ್ಲೇ ಯೋಜನೆಗೆ ವಿಘ್ನ ಎದುರಾಯ್ತಾ? ಅನ್ನೋ ಪ್ರಶ್ನೆಯೂ ಎದ್ದಿದೆ.
ಹೌದು. ಟನಲ್ ಡಿಪಿಆರ್ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರವೇ ನಗರಾಭಿವೃದ್ಧಿ ಇಲಾಖೆಯ ಐವರ ತಜ್ಞರ ಸಮಿತಿ ರಚನೆ ಮಾಡಿತ್ತು. ಈಗ ಆ ಸಮಿತಿಯೇ ಡಿಪಿಆರ್ನಲ್ಲಿ ಇರುವ ಲೋಪದೋಷಗಳನ್ನ ಪತ್ತೆಹಚ್ಚಿದೆ.
ತರಾತುರಿಯಲ್ಲಿ ಡಿಪಿಆರ್ ತಯಾರಿಕೆ ಮಾಡಿದ್ದಾರೆ ಎಂದು ಹೇಳಿರುವ ಸಮಿತಿ ಟನಲ್ ದೊಡ್ಡ ಯೋಜನೆ ಕೇವಲ 4 ಕಡೆ ಮಾತ್ರ ಮಣ್ಣಿನ ಪರೀಕ್ಷೆ ಇದು ಸಾಕಾಗಲ್ಲ ಎಂದು ತಿಳಿಸಿದೆ. ಹೆಬ್ಬಾಳ – ಸಿಲ್ಕ್ ಬೋರ್ಡ್ಗೆ ರೆಡ್ಲೈನ್ ಮೆಟ್ರೋ ಮಾರ್ಗ ಬರಬೇಕಾದ್ರೆ ಟನಲ್ ಏಕೆ? ಲಾಲ್ ಬಾಗ್ ಬಳಿ ಮೆಟ್ರೋ ಮಾರ್ಗ ಬರಬೇಕಾದ್ರೆ ಟನಲ್ ಯಾಕೆ ಅಂತಲೂ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ? ಹೀಗಾಗಿ ರಾಜ್ಯ ಸರ್ಕಾರದ ಮುಂದಿನ ನಡೆ ಏನು ಅನ್ನೋದನ್ನ ಕಾದುನೋಡಬೇಕಿದೆ.
ಟನಲ್ ಡಿಪಿಆರ್ನಲ್ಲಿ ಲೋಪದೋಷ – ತಜ್ಞರ ವರದಿಯಲ್ಲೇನಿದೆ?
* ಟನಲ್ ದೊಡ್ಡ ಯೋಜನೆ, 4 ಕಡೆ ಮಾತ್ರ ಮಣ್ಣಿನ ಪರೀಕ್ಷೆ ಸಾಕಾಗಲ್ಲ
* ಹೆಬ್ಬಾಳ-ಸಿಲ್ಕ್ ಬೋರ್ಡ್ಗೆ ರೆಡ್ಲೈನ್ ಮೆಟ್ರೋ ಇದ್ರೆ ಟನಲ್ ಏಕೆ..?
* ಲಾಲ್ಬಾಗ್ ಬಳಿ ಮೆಟ್ರೋ ಮಾರ್ಗ ಬರಬೇಕಾದ್ರೆ ಟನಲ್ ಯಾಕೆ..?
* ಪೀಕ್ ಅವರ್ ಟ್ರಾಫಿಕ್ ಗಣನೆಗೆ ತೆಗೆದುಕೊಂಡಿಲ್ಲ
* ಕನಿಷ್ಠ 25 ವರ್ಷಕ್ಕೆ ಯೋಜನೆ ರೂಪಿಸಬೇಕು, 10 ವರ್ಷಕ್ಕಲ್ಲ
* ಪಾದಚಾರಿ, ಒಳಚರಂಡಿ, ನೈಸರ್ಗಿಕ ವಿಪತ್ತು ನಿರ್ವಹಣೆ ಬಗ್ಗೆ ಉಲ್ಲೇಖ
* ಬಿಎಂಟಿಸಿ, ಮೆಟ್ರೋ, ಉಪನಗರ ರೈಲುಗಳಿಗೆ ಅನಾನುಕೂಲದ ಮಾಹಿತಿ ಇಲ್ಲ
* ಸುರಂಗ ರಸ್ತೆ, ಪರಿಸರ ಕಾಳಜಿ, ಸಾರಿಗೆ ವ್ಯವಸ್ಥೆ ನಿರ್ವಹಣೆ ಉಲ್ಲೇಖಿಸಿಲ್ಲ
* ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಜಿಬಿಎಯಿಂದ ಡಿಪಿಆರ್
* ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ಪರಿಶೀಲನೆ ನಡೆಸಿಲ್ಲ.
ಏನಿದು ಯೋಜನೆ?
ಹೆಬ್ಬಾಳದಿಂದ-ಸಿಲ್ಕ್ ಬೋರ್ಡ್ ವರೆಗೆ 18 ಸಾವಿರ ಕೋಟಿ ರೂ. ವೆಚ್ಚದಲ್ಲಿ 19 ಕಿಮೀ ಉದ್ದದ ಸುರಂಗ ಮಾರ್ಗ ನಿರ್ಮಿಸುವ ಯೋಜನೆ ಇದಾಗಿದೆ. ಇದಕ್ಕಾಗಿ ಡಿಪಿಆರ್ ಕೂಡ ರಚನೆ ಮಾಡಲಾಗಿದೆ. ಸುರಂಗ ಮಾರ್ಗದಿಂದ ಲಾಲ್ಬಾಗ್ಗೂ ಹಾನಿಯಾಗುವ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಸಾರ್ವಜನಿಕರ ವಿರೋಧ, ಡಿಪಿಆರ್ ಲೋಪದೋಷಗಳನ್ನ ಗಮನದಲ್ಲಿಟ್ಟುಕೊಂಡು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ ತಜ್ಞರ ಸಮಿತಿ