ನನ್ನ ಆತ್ಮೀಯ ಸ್ನೇಹಿತ ಮೋದಿ ಜೊತೆ ಮಾತನಾಡಲು ಎದುರು ನೋಡುತ್ತಿದ್ದೇನೆ: ಟ್ರಂಪ್‌

Public TV
3 Min Read

– ಟ್ರಂಪ್‌ ಜೊತೆ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ: ಮೋದಿ

ವಾಷಿಂಗ್ಟನ್‌/ನವದೆಹಲಿ: ಭಾರತದ ಮೇಲೆ ಸುಂಕ ಸಮರ ಆರಂಭಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ವಾರದಲ್ಲಿ ಎರಡನೇ ಬಾರಿ ಪ್ರಧಾನಿ ನರೇಂದ್ರ ಮೋದಿ (Narendra Modi) ನನ್ನ ಉತ್ತಮ ಸ್ನೇಹಿತ ಎಂದು ಹೇಳಿದ್ದಾರೆ.

ತನ್ನ ಟ್ರೂಥ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಟ್ರಂಪ್‌, ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರ ಅಡೆತಡೆಗಳನ್ನು ನಿವಾರಿಸಲು ಭಾರತ (India) ಮತ್ತು ಅಮೆರಿಕ (USA) ಮಾತುಕತೆಗಳನ್ನು ಮುಂದುವರಿಸುತ್ತಿವೆ ಎಂದು ಪ್ರಕಟಿಸಲು ಸಂತೋಷವಾಗುತ್ತಿದೆ. ಮುಂಬರುವ ವಾರಗಳಲ್ಲಿ ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಟ್ರಂಪ್‌ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮೋದಿ, ಭಾರತ ಮತ್ತು ಅಮೆರಿಕ ಆಪ್ತ ಸ್ನೇಹಿತರು ಮತ್ತು ಪಾಲುದಾರರಾಗಿದ್ದೇವೆ. ಶ್ರೀಘ್ರವೇ ನಮ್ಮ ತಂಡ ಭಾರತ-ಅಮೆರಿಕ ವ್ಯಾಪಾರ ಮಾತುಕತೆಯನ್ನು ಪೂರ್ಣಗೊಳಿಸಬಹುದು ಎಂವ ವಿಶ್ವಾಸವಿದೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಲು ನಾನು ಸಹ ಎದುರು ನೋಡುತ್ತಿದ್ದೇನೆ. ಎರಡು ದೇಶದ ಜನರಿಗಾಗಿ ಉಜ್ವಲ, ಹೆಚ್ಚು ಸಮೃದ್ಧ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಮೂರು ದೇಶಗಳ ನಾಯಕರು ಒಟ್ಟಿಗೆ ಕಾಣಿಸಿಕೊಂಡ ಕೆಲವು ದಿನಗಳ ನಂತರ, ಡೊನಾಲ್ಡ್ ಟ್ರಂಪ್ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಕುಸಿದಿದೆ ಎಂದು ಹೇಳಿದ್ದರು. ನಾವು ಭಾರತ (India) ಮತ್ತು ರಷ್ಯಾವನ್ನು (Russia) ಚೀನಾಗೆ (China) ಬಿಟ್ಟು ಕೊಟ್ಟಿದ್ದೇವೆ. ಎರಡು ದೇಶಗಳ ಭವಿಷ್ಯ ಉಜ್ವಲವಾಗಿರಲಿ ಎಂದು ವ್ಯಂಗ್ಯವಾಗಿ ಹಾರೈಸಿದರು.

ಚೀನಾದ ಕ್ಸಿ ಜಿನ್‌ಪಿಂಗ್ ಆಯೋಜಿಸಿದ್ದ ಶೃಂಗಸಭೆಯಲ್ಲಿ ಮೂವರು ನಾಯಕರ ಭೇಟಿ ವಿಶ್ವಕ್ಕೆ ಒಂದು ಸಂದೇಶವನ್ನು ಕಳುಹಿಸಿತ್ತು. ಟ್ರಂಪ್‌ ಸುಂಕ ಸಮರದ ವಿರುದ್ಧ ಹೋರಾಡಲು ಮೂವರು ನಾಯಕರು ಒಂದಾಗಿದ್ದಾರೆ ಎಂದು ಬಣ್ಣಿಸಲಾಗುತ್ತಿದೆ. ಇದನ್ನೂ ಓದಿ:  ಇದನ್ನೂ ಓದಿ: PublicTV Explainer: ಮತ್ತೊಮ್ಮೆ ಇಂಡೋ-ಚೀನಾ ಭಾಯಿ ಭಾಯಿ- ಭಾರತಕ್ಕೆ ಚೀನಾ ಯಾಕೆ ಬೇಕು?

ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೋದಿ ಭಾಗವಹಿಸುವುದಿಲ್ಲ. ವಿದೇಶಾಂಗ ಸಚಿವ ಜೈಶಂಕರ್‌ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನಲ್ಲೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕೇಂದ್ರ ಕಚೇರಿ ಇರುವ ಕಾರಣ ಸಾಧಾರಣವಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಗಣ್ಯರು ಅಮೆರಿಕದ ಅಧ್ಯಕ್ಷರನ್ನು ಭೇಟಿಯಾಗುತ್ತಾರೆ. ಆದರೆ ಈ ಬಾರಿ ತೆರಳದ ಕಾರಣ ಟ್ರಂಪ್‌ ಮತ್ತು ಮೋದಿ ಎಲ್ಲಿ ಮಾತನಾಡುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

ಭಾರತ ಮತ್ತು ಅಮೆರಿಕದ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಸುಧಾರಣೆಯಾಗುವ ಹಂತಕ್ಕೆ ತಲುಪಿತ್ತು. ಸುಧಾರಣೆಯಾಗುತ್ತಿರುವ ಸಂಬಂಧವನ್ನು ಟ್ರಂಪ್‌ ಹಾಳು ಮಾಡಿದ್ದಾರೆ. ರಷ್ಯಾ, ಚೀನಾದ ಜೊತೆ ಭಾರತ ಸೇರಿದರೆ ಮುಂಬರುವ ದಿನಗಳಲ್ಲಿ ಅಮೆರಿಕಕ್ಕೆ ಕಷ್ಟವಾಗಬಹುದು. ಪ್ರಸ್ತುತ ಈಗ ವಿಶ್ವದ ಬಹುತೇಕ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶಗಳು ಅಮೆರಿಕವನ್ನು ಎದುರುಹಾಕಿಕೊಂಡಿದೆ. ಭಾರರತ ವಿಶ್ವದ ದೊಡ್ಡ ಗ್ರಾಹಕ ಮಾರುಕಟ್ಟೆ ದೇಶ. ಭಾರತವನ್ನು ಎದುರು ಹಾಕಿಕೊಂಡರೆ ನಮಗೆ ಕಷ್ಟವಾಗಲಿದೆ ಎಂದು ಅಮೆರಿಕ ಸರ್ಕಾರದ ಮಾಜಿ ಅಧಿಕಾರಿಗಳು ಆತಂಕವನ್ನು ಹೊರಹಾಕಿದ್ದರು.

Share This Article