ಬಿಜೆಪಿ ಭದ್ರಕೋಟೆಯಲ್ಲಿ ನಮೋ ರೋಡ್‌ ಶೋ- ಮೋದಿ ಕಂಡು ಕುಡ್ಲದ ಜನತೆ ಫುಲ್‌ ಖುಷ್‌

Public TV
1 Min Read

ಮಂಗಳೂರು: ಮೈಸೂರಿನ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಬಿಜೆಪಿ ಭದ್ರಕೋಟೆ ಮಂಗಳೂರಿಗೆ ಆಗಮಿಸಿದ್ದಾರೆ. ದೇಶದ ಪ್ರಧಾನಿಯನ್ನು ಕಂಡ ಕಡಲನಗರಿ ಮಂಗಳೂರಿನ ಜನ ಫುಲ್‌ ಖುಷಿಯಾಗಿದ್ದಾರೆ.

ನಾರಾಯಣ ಗುರು ಸರ್ಕಲ್ ಗೆ ಆಗಮಿಸಿದ ಮೋದಿಯವರು ಚಪ್ಪಲಿ ಕಳಚಿಟ್ಟು ಸರ್ಕಲ್ ಹತ್ತಿ ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಲ್ಲದೇ ಸರ್ಕಲ್ ಮೇಲೆ ನಿಂತು ಅಭಿಮಾನಿಗಳಿಗೆ ಕೈ ಬೀಸಿದರು. ಬಳಿಕ ತೆರೆದ ವಾಹನದಲ್ಲಿ ರೋಡ್‌ ಶೋ ಆರಂಭಿಸಿದರು.

ರೋಡ್‌ ಶೋ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ನೆರೆದಿತ್ತು. ಮೋದಿ ಸಂಚರಿಸುತ್ತಿದ್ದಾಗ ರಸ್ತೆಯ ಎರಡೂ ಬದಿಯಿಂದಲೂ ಪುಷ್ಪವೃಷ್ಟಿಗೈಯಲಾಯಿತು. ಪ್ರಧಾನಿಯವರು ಜನರತ್ತ ಕೈ ಬೀಸಿ ನಗು ಬೀರಿದರು. ಮೋದಿ ಮುಖವಾಡ ಧರಿಸಿ ಅಭಿಮಾನಿಗಳು ಘೋಷಣೆ ಕೂಗಿದರು. ಅಭಿಮಾನಿಗಳ ಪ್ರೀತಿ ಕಂಡು ಪುಳಕಿತರಾದ ನರೇಂದ್ರ ಮೋದಿ, ಕಾರ್ಯಕರ್ತರತ್ತ ಹೂ ಎಸೆದು ಖುಷಿ ವ್ಯಕ್ತಪಡಿಸಿದರು. ಜೊತೆಗೆ ಕಮಲದ ಚಿಹ್ನೆ ತೋರಿಸಿ ಕಾರ್ಯಕರ್ತರಿಗೆ ಹುರುಪು ತುಂಬಿದರು.

ಲಾಲ್ ಬಾಗ್ ನಲ್ಲಿ ಹುಲಿವೇಷ ಕುಣಿತ ವೀಕ್ಷಿಸಿದರು. ಜೊತೆಗೆ ಕಲಾವಿದರಿಗೆ ನಮೋ ವಿಶ್ ಮಾಡಿದರು. ರಸ್ತೆಯುದ್ಧಕ್ಕೂ ಹುಲಿವೇಷ, ಯಕ್ಷಗಾನ, ಕಂಬಳ, ಭರತನಾಟ್ಯ ಹೀಗೆ ತುಳು ಸಂಸ್ಕೃತಿಗಳ ಅನಾವರಣವಾಯಿತು. ಇದನ್ನೂ ಓದಿ: ಮಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ- ನಮೋ ನೋಡಲು ಜನಸಾಗರ

ಪ್ರಧಾನಿಯವರಿಗೆ ಎರಡು ಕ್ಷೇತ್ರಗಳ ಅಭ್ಯರ್ಥಿಗಳು ಸಾಥ್‌ ನೀಡಿದರು. ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಜೇಶ್ ಚೌಟ ಹಾಗೂ ಉಡುಪಿ- ಚಿಕ್ಕಮಗಳೂರು ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಯವರು ಪ್ರಧಾನಿಗೆ ಜೊತೆಯಾದರು. ನವಭಾರತ್‌ ಸರ್ಕಲ್‌ನಿಂದ ಹಂಪನಕಟ್ಟೆವರೆಗೂ ತೆರಳಿ ಅಲ್ಲಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಮೋದಿ ಹೊರಟರು.

ಈ ಹಿಂದೆ ವಿಧಾನಸಭಾ ಚುನಾವಣೆಯ ಪ್ರಚಾರದ ಸಭೆಗಾಗಿ ಪ್ರಧಾನಿಯವರು ಮಂಗಳೂರಿಗೆ ಆಗಮಿಸಿದ್ದರು. ಆದರೆ ಈ ವೇಳೆ ರೋಡ್‌ ಶೋ ಹಮ್ಮಿಕೊಂಡಿರಲಿಲ್ಲ. ಆದರೂ ಮೋದಿ ನೋಡಲು ಬಂದ ಜನಸ್ತೋಮ ಕಂಡು ಪ್ರಧಾನಿಯವರು ದಿಗ್ಭ್ರಮೆಗೊಂಡಿದ್ದರು.

Share This Article