ತಾಲಿಬಾನ್‍ಗಳ ಪ್ರೇರಣೆ, ನಗರ ನಕ್ಸಲಿಯರ ಸಹಾಯದಿಂದ ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಪಡಿಸಿದೆ: ಸಿಟಿ ರವಿ

Public TV
2 Min Read

– ಚುನಾವಣೆ ನಂತ್ರ ಜನರೇ ರಾಹುಲ್ ಗಾಂಧಿಗೆ ಕಡ್ಡಾಯ ರಜೆ ಕೊಡುತ್ತಾರೆ

ಮೈಸೂರು: ಲೋಕಸಭಾ ಚುನಾವಣೆಯ (Loksabha Elections 2024) ಬಳಿಕ ದೇಶದ ಜನರೇ ರಾಹುಲ್ ಗಾಂಧಿಗೆ ಕಡ್ಡಾಯ ರಜೆ ಕೊಡುತ್ತಾರೆ. ತಾಲಿಬಾನ್ ಗಳ ಪ್ರೇರಣೆ ಹಾಗೂ ನಗರ ನಕ್ಸಲಿಯರ ಸಹಾಯದಿಂದ ಕಾಂಗ್ರೆಸ್ ತನ್ನ ಪ್ರಣಾಳಿಕೆ ಸಿದ್ಧಪಡಿಸಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ (CT Ravi) ಹೇಳಿಕೆ ಕೊಟ್ಟಿದ್ದಾರೆ.

ಮೈಸೂರಿನಲ್ಲಿ (Mysuru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಕ್ಕೆ ಅತೀ ಹೆಚ್ಚು ಅನುದಾನ, ತೆರಿಗೆ ಪಾಲು ಕೊಟ್ಟಿರುವುದು ಮೋದಿ ಸರ್ಕಾರ. ಚರ್ಚೆ ಬೇಕಾದರೆ ಕಾಂಗ್ರೆಸ್ ನಡೆಸಲಿ. ನಾವು ಕಾಂಗ್ರೆಸ್‍ನ ದೃಷ್ಟಿದೋಷ ನಿವಾರಿಸುತ್ತೇವೆ. ಕಾಂಗ್ರೆಸ್ ಗೆ ವಿಭಜನೆ ರೋಗ ಆವರಿಸಿದೆ. ದೇಶ ವಿಭಜಿಸುವ ರೋಗ ಕಾಂಗ್ರೆಸ್‍ಗೆ ಬಹು ಹಿಂದಿನಿಂದ ಇದೆ, ಈಗಲೂ ಇದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಇವಿಎಂನಲ್ಲೇ ಚುನಾವಣೆ, ಸ್ಲಿಪ್‌ ಮತದಾರನ ಕೈಗೆ ಸಿಗಬೇಕು : ಕಾಂಗ್ರೆಸ್‌ ಪ್ರಣಾಳಿಕೆ

ಕಾಂಗ್ರೆಸ್‍ಗೆ ಸವಾಲು: ಕಾಂಗ್ರೆಸ್ ಈ ಚುನಾವಣೆಯಲ್ಲಿ ಡಬಲ್ ಡಿಜಿಟ್ ಕೂಡ ದಾಟಲ್ಲ. ಹೀಗಾಗಿ ಇವರ ವಿಭಜನೆಯ ಯೋಚನೆ ಪ್ರಣಾಳಿಕೆಯಲ್ಲಿಯೇ ಸತ್ತು ಹೋಗುತ್ತದೆ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ನಡೆದ ಹಗರಣಗಳಿಗೆ ಕಾರಣರು ಯಾರು? ಮೋದಿ ರಾಜ್ಯಕ್ಕೆ ಕೊಟ್ಟ ತೆರಿಗೆ ಹಣ, ಅನುದಾನ ಎಷ್ಟು? ಮನಮೋಹನ್ ಸಿಂಗ್ ಸರ್ಕಾರ ರಾಜ್ಯಕ್ಕೆ ಕೊಟ್ಟಿದ್ದು ಎಷ್ಟು ಚರ್ಚೆಗೆ ಬನ್ನಿ. ನಾವು ಸಿದ್ಧ ಎಂದು ಸಿಟಿ ರವಿ ಸವಾಲೆಸೆದರು.

ಸಿಎಂ ವಿರುದ್ಧ ಕಿಡಿ: ಮೈಸೂರು ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ಕೊಟ್ಟಿದ್ದೇವೆ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಅವರು, ಯಾರನ್ನೋ ಕರೆದುಕೊಂಡು ಬಂದು ಇವನು ಒಕ್ಕಲಿಗ ಅಂದರೆ ಹೇಗೆ? ಸಂಸ್ಕಾರ ಇಲ್ಲದವರನ್ನು ಒಕ್ಕಲಿಗರು ನಾಯಕ ಅಂತಾ ಒಪ್ಪಿಕೊಳ್ಳಲ್ಲ. ಕಾಂಗ್ರೆಸ್ ನವರೇ ನಿಮ್ಮ ಅಭ್ಯರ್ಥಿ ಲಕ್ಷ್ಮಣ್ ಅವರನ್ನು ಲೂಸ್ ಟಾಕರ್ ಅಂತಾ ಹೇಳುತ್ತಿದ್ದಾರೆ. ನಿಮಗೆ ಗತಿ ಇಲ್ಲದೇ ನಾಲ್ಕು ಚುನಾವಣೆ ಸೋತವರನ್ನು ಮೈಸೂರು ಅಭ್ಯರ್ಥಿ ಮಾಡಿದ್ದೀರಿ. ಮಂತ್ರಿಗಳು ಬರಗೆಟ್ಟವರ ಥರ ಯಾವುದನ್ನು ಬಿಡದೆ ಎಲ್ಲದಕ್ಕೂ ಬಾಯಿ ಹಾಕುತ್ತಾ ಇರೋದು ಈ ಚುನಾವಣೆಯಲ್ಲಿ ಚರ್ಚೆ ಆಗುತ್ತೆ ಎಂದು ಸಿಟಿ ರವಿ ಹೇಳಿದರು.

Share This Article