ಪಕ್ಷ ಬಿಡದೇ ತಟಸ್ಥ- ಶಿವರಾಮ್ ಹೆಬ್ಬಾರ್ ನಡೆಗೆ ಬಿಜೆಪಿ ಅಸಮಾಧಾನ

Public TV
1 Min Read

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಪಾಲಿಗೆ ಯಲ್ಲಾಪುರ ಬಿಜೆಪಿ ಶಾಸಕ ಬಿಸಿ ತುಪ್ಪವಾಗಿದ್ದು, ಪಕ್ಷದ ಪ್ರಚಾರಕ್ಕೂ ಬಾರದೇ ಇತ್ತ ಪಕ್ಷವನ್ನೂ ಬಿಡದ ಹೆಬ್ಬಾರ್ (Shivaram Hebbar) ಸ್ವ-ಪಕ್ಷದ ವಿರುದ್ಧವೇ ತೊಡೆತಟ್ಟಿದ್ದಾರೆ.

ಅಧಿಕಾರಕ್ಕಾಗಿ ಅಂದಿನ ಕಾಂಗ್ರೆಸ್ (Congress) ಸರ್ಕಾರವನ್ನೇ ಬೀಳಿಸಿ ಬಂಡಾಯವೆದ್ದಿದ್ದ ಬಾಂಬೆ ಬಾಯ್ಸ್‍ಗಳಲ್ಲಿ ಯಲ್ಲಾಪುರದ ಶಾಸಕ ಶಿವರಾಮ್ ಹೆಬ್ಬಾರ್ ಕೂಡ ಒಬ್ಬರು. ಬಿಜೆಪಿ ಹೆಸರಿನಲ್ಲಿ ಗೆದ್ದ ಯಲ್ಲಾಪುರ ಶಾಸಕ ಮತ್ತೊಮ್ಮೆ ರೆಬೆಲ್ ಆಗಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ನಾಯಕರ ಜೊತೆ ಕಾಣಿಸ್ತಿಕೊಳ್ತಿದ್ದು, ತಮ್ಮ ಪುತ್ರನನ್ನು ಶೀಘ್ರದಲ್ಲೇ ಕಾಂಗ್ರೆಸ್ ಸೇರಿಸಲು ತೆರೆಮರೆಯಲ್ಲಿ ಕಸರತ್ತು ನಡೆಸ್ತಿದ್ದಾರೆ.

ಇನ್ನು ಬಿಜೆಪಿಯಲ್ಲೇ ಇದ್ದು ಕಾಂಗ್ರೆಸ್ ಪರ ಪ್ರಚಾರಕ್ಕಿಳಿದಿರುವ ಹೆಬ್ಬಾರ್ ನಡೆಗೆ ಪಕ್ಷದಲ್ಲಿ ಅಸಮಾಧಾನ ಹೆಚ್ಚಿಸಿದೆ. ಇದೇ ವಿಚಾರವಾಗಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ಹೆಬ್ಬಾರ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 53 ನಾಮಪತ್ರ ವಾಪಸ್‌; ‘ಲೋಕ’ ಕಣದಲ್ಲಿ 247 ಅಭ್ಯರ್ಥಿಗಳು

ಹೆಬ್ಬಾರ್ ವಿರುದ್ಧ ಬಿಜೆಪಿ ಕ್ರಮಕೈಗೊಂಡಲ್ಲಿ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಗೆ (BJP) ಹಿನ್ನಡೆಯಾಗುವ ಆತಂಕವಿದೆ. ಅವರಾಗಿಯೇ ಪಕ್ಷ ತೊರೆದರೆ ಬಿಜೆಪಿಗೆ ಲಾಭ ಹೆಚ್ಚು. ಹೀಗಾಗಿ ಬಿಜೆಪಿಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಜಿಲ್ಲೆಯಲ್ಲಿ ಬಿಜೆಪಿ ನಾಯಕರಲ್ಲೂ ಅಸಮಾಧಾನಗಳಿದ್ದು, ಒಂದು ವಾರದಲ್ಲೇ ಸರಿ ಮಾಡುತ್ತೇವೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದ್ದಾರೆ.

ಸದ್ಯ ಹೆಬ್ಬಾರ್ ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಳ್ಳುತ್ತಿದ್ದು, ತಾವು ಪಕ್ಷಕ್ಕೆ ಸೇರದೇ ತಮ್ಮ ಪುತ್ರ ವಿವೇಕ್ ಹೆಬ್ಬಾರ್‍ರನ್ನು ಕಾಂಗ್ರೆಸ್ ಗೆ ಸೇರಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಹೆಬ್ಬಾರ್ ನಡೆ ಜಿಲ್ಲಾ ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

 

Share This Article