ಟಿಕೆಟ್‍ಗಾಗಿ ಬಿಜೆಪಿಯಲ್ಲಿ ಆಂತರಿಕ ಕಲಹ- ಶೋಭಾ ವಿರುದ್ಧ ಸ್ವಪಕ್ಷಿಯರೇ ಸಮರ

Public TV
2 Min Read

– ಟಿಕೆಟ್ ತಪ್ಪಿಸಲು ಸಿಟಿ ರವಿ ಯತ್ನ

ಚಿಕ್ಕಮಗಳೂರು: ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಚಾರ್ಮ್ ಬೆಳೆಸಿಕೊಳ್ತಿರೋ ಶೋಭಾ ಕರಂದ್ಲಾಜೆಯ ರಾಜಕೀಯ ಭವಿಷ್ಯವನ್ನ ಬಿಜೆಪಿಗರೇ ಮುಗಿಸೋಕೆ ಸ್ಕೆಚ್ ಹಾಕಿರುವಂತಿದೆ. ಬಿಎಸ್‍ವೈ ಬೆಂಬಗಲಿಗರೆಂದು ಗುರುತಿಸಿಕೊಳ್ಳದ ಸಿ.ಟಿ.ರವಿ, ರಘುಪತಿ ಭಟ್ ಹಾಗೂ ಸುನಿಲ್ ಕುಮಾರ್ ಆಂತರಿಕವಾಗಿ ಜಯಪ್ರಕಾಶ್ ಹೆಗ್ಡೆ ಬೆನ್ನಿಗೆ ನಿಂತಿದ್ದಾರೆ. ಕಾಫಿನಾಡ ಬಿಜೆಪಿ ಮುಖಂಡರು, ನಗರಸಭೆ ಹಾಗೂ ಜಿಪಂ ಸದಸ್ಯರನ್ನ ಮುಂದೆ ಬಿಟ್ಟು ಸಿ.ಟಿ ರವಿ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋಕೆ ಸ್ಕೆಚ್ ಹಾಕಿದ್ದಾರಾ ಎಂಬ ಅನುಮಾನ ದಟ್ಟವಾಗಿದೆ.

ಬಿಜೆಪಿ ಎಂಪಿ ಮತ್ತು ಶಾಸಕರ ನಡುವೆಯೇ ಲೋಕಸಮರದ ಟಿಕೆಟ್‍ಗಾಗಿ ಆಂತರಿಕ ಕಲಹ ಏರ್ಪಟ್ಟಂತಿದೆ. ಗೋ ಬ್ಯಾಕ್ ಶೋಭಕ್ಕ ಚಳವಳಿ ಸುದ್ದಿ ಇನ್ನೂ ಹಸಿಯಾಗಿರುವಾಗಲೇ ಲೋಕಸಮರದಲ್ಲಿ ಶೋಭಾ ಹೆಸರನ್ನು ತೆರೆಮರೆಗೆ ಸರಿಸಲು ಸ್ವಪಕ್ಷೀಯರೇ ಯತ್ನಿಸುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ರಾಜ್ಯ ಮತು ರಾಷ್ಟ್ರ ರಾಜಕಾರಣದಲ್ಲೂ ಸಕ್ರಿಯರಾಗಿರುವ ಸಂಸದೆ ಶೋಭಾ ಕರಂದ್ಲಾಜೆಗೆ ಈ ಬಾರಿ ಎಂಪಿ ಟಿಕೆಟ್ ತಪ್ಪಿಸಲು ಒಳಗೊಳಗೆ ಹುನ್ನಾರ ನಡೆಸುತ್ತಿದ್ದಾರೆ ಎಂಬುದಾಗಿ ಮೂಲಗಳಿಂದ ಮಾಹಿತಿ ಲಭಿಸಿದೆ.

ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿ ಅತ್ಯಾಪ್ತರೇ ಶೋಭರಿಗೆ ಟಿಕೆಟ್ ಬೇಡ ಎನ್ನುತ್ತಿದ್ದಾರೆ. ಇದರ ಹಿಂದೆ ಸಿ.ಟಿ ರವಿಯೇ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದು ರಾಜ್ಯ, ಜಿಲ್ಲೆಯ ನಾಯಕತ್ವದ ಸ್ಥಾನವನ್ನು ಗಟ್ಟಿ ಮಾಡಿಕೊಂಡು ಶೋಭಾ ರಾಜಕೀಯ ಜೀವನವನ್ನು ಮುಗಿಸೋಕೆ ಪ್ಲಾನ್ ಮಾಡ್ತಿದ್ದಾರಾ ಎಂಬ ಅನುಮಾನ ಮೂಡಿದೆ ಎಂದು ಬಿಜೆಪಿ ನಗರಸಭೆ ಸದಸ್ಯ ರಾಜಶೇಖರ್ ತಿಳಿಸಿದ್ದಾರೆ.

ಶೋಭಾ ರಾಷ್ಟ್ರ ಮತ್ತು ರಾಜ್ಯ ನಾಯಕಿ ಆದರೆ ಅವರನ್ನು ಭೇಟಿಯೇ ಮಾಡೋಕಾಗಲ್ಲ. ಸಂಸದರ ಕಚೇರಿಯಲ್ಲೂ ಸಿಗಲ್ಲ. ಸಿಕ್ಕರೂ ಮಾತಾಡಿಸಲ್ಲ. ಒಂದೂ ಸಭೆ ನಡೆಸಿಲ್ಲ. ಹೀಗಾಗಿ ಶೋಭಾರಿಗೆ ಟಿಕೆಟ್ ಬೇಡವೆಂದು ಕಾಫಿನಾಡಿನ ಜನ ಹೇಳುತ್ತಿದ್ದಾರೆ. ಜೊತೆಗೆ ಸ್ಥಳೀಯರಿಗೆ ಟಿಕೆಟ್ ಕೊಡಿ ಅಂತ ಜಯಪ್ರಕಾಶ್ ಹೆಗ್ಡೆ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಈ ಮಧ್ಯೆ ಆರ್.ಎಸ್.ಎಸ್ ಮುಖಂಡ ನಾಗೇಶ್ ಅಂಗೀರಸ ಶೋಭಾ ಡಮ್ಮಿ ಕ್ಯಾಂಡಿಡೇಟ್ ಎಂದು ವ್ಯಂಗ್ಯವಾಡಿದ್ದಾರೆ.

ಇತ್ತ ಶೋಭಾಗೆ ಟಿಕೆಟ್ ಕೊಡಿಸಲು ಬಿಎಸ್‍ವೈ ಕಸರತ್ತು ನಡೆಸುತ್ತಿದ್ದರೆ, ಅತ್ತ ಬಿಎಸ್‍ವೈ ಬೆಂಬಲಿರೆಂದು ಗುರುತಿಸಿಕೊಳ್ಳದ ಸಿ.ಟಿ ರವಿ, ಸುನಿಲ್ ಕುಮಾರ್ ಹಾಗೂ ರಘುಪತಿ ಭಟ್ ಒಳಗೊಳಗೆ ಜಯಪ್ರಕಾಶ್ ಹೆಗ್ಡೆ ಬೆನ್ನಿಗೆ ನಿಂತಿದ್ದಾರೆ. ಒಂದು ವೇಳೆ ಶೋಭಾಗೆ ಟಿಕೆಟ್ ತಪ್ಪಿದ್ರೆ ಬಿಎಸ್‍ವೈ ಬೆಂಬಲಿಗ ಶಾಸಕರಾದ ಮೂಡಿಗೆರೆ ಕುಮಾರಸ್ವಾಮಿ, ತರೀಕೆರೆ ಸುರೇಶ್, ಕಡೂರಿನ ಬೆಳ್ಳಿ ಪ್ರಕಾಶ್ ಏನ್ ಮಾಡ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *