– ಸೊಸೆಯ ಹೆರಿಗೆ ಕಾರಣಕ್ಕೆ ಹುಬ್ಬಳ್ಳಿಯಲ್ಲಿರುವ ಅಧಿಕಾರಿ, ದಾಖಲೆ ಪರಿಶೀಲನೆ ವಿಳಂಬ
ರಾಯಚೂರು: ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯ (RDPR) ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಸಿಂಧನೂರು ಎಇಇ ಬಿ.ವಿಜಯಲಕ್ಷ್ಮಿಗೆ ಸೇರಿದ ಎರಡು ಮನೆ ಸೇರಿ ಐದು ಕಡೆಗಳಲ್ಲಿ ದಾಳಿ ಮಾಡಲಾಗಿದೆ.
ಸಿಂಧನೂರಿನಲ್ಲಿ (Sindhanuru) ಎಇಇ ಆಗಿರುವ ವಿಜಯಲಕ್ಷ್ಮಿ ಮೇಲೆ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ರಾಯಚೂರು, ಕೊಪ್ಪಳ, ಬಳ್ಳಾರಿ ಮೂರು ಜಿಲ್ಲೆಯ ಐದು ತಂಡಗಳಿಂದ ದಾಳಿ ಮಾಡಲಾಗಿದೆ. ರಾಯಚೂರಿನ ಐಡಿಎಸ್‌ಎಂಟಿ ಬಡಾವಣೆಯಲ್ಲಿನ ಮನೆ, ಗಂಗಾಪರಮೇಶ್ವರ ಲೇಔಟ್‌ನಲ್ಲಿನ ಮನೆ, ಯಾದಗಿರಿ, ಜೋಳದಹೆಡಗಿ ಹಾಗೂ ಸಿಂಧನೂರಿನಲ್ಲಿ ಆರ್‌ಡಬ್ಲ್ಯೂಎಸ್ ಕಚೇರಿ ಮೇಲೆ ದಾಳಿ ಮಾಡಲಾಗಿದೆ.ಇದನ್ನೂ ಓದಿ: ಮಕ್ಕಳನ್ನು ಪತ್ನಿ ಜೊತೆ ಬಿಡಲು ಕೋರ್ಟ್ ಆದೇಶ – ವಿಷವುಣಿಸಿ ಮಕ್ಕಳ ಹತ್ಯೆಗೈದು, ತಾಯಿ ಜೊತೆ ಪತಿಯೂ ನೇಣಿಗೆ ಶರಣು
ಒಟ್ಟು 49 ಕಡೆಗಳಲ್ಲಿ ಆಸ್ತಿ ಮಾಡಿರುವ ಎಇಇ ಬಿ.ವಿಜಯಲಕ್ಷ್ಮಿಗೆ ಸೇರಿದ ನಿವೇಶನ, ಮನೆ ,ತೋಟದ ಮನೆ, ಜಮೀನು ದಾಖಲೆ, ಚಿನ್ನಾಭರಣ ಪರಿಶೀಲನೆಯನ್ನ ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದಾರೆ. ಯಾದಗಿರಿಯಲ್ಲಿ ಲೇಔಟ್, ಜೋಳದಹೆಡಗಿಯಲ್ಲಿ ತೋಟದ ಮನೆ, ಚಂದ್ರಬಂಡಾ ರಾಷ್ಟ್ರೀಯ ಹೆದ್ದಾರಿ ಬಳಿ ಜಮೀನು ಸೇರಿದಂತೆ ವಿವಿಧೆಡೆ ಆಸ್ತಿ ಮಾಡಿದ್ದಾರೆ. ಸೊಸೆಯ ಹೆರಿಗೆ ಕಾರಣಕ್ಕೆ ಎಇಇ ವಿಜಯಲಕ್ಷ್ಮಿ ಹುಬ್ಬಳ್ಳಿಗೆ ತೆರಳಿದ್ದು, ದಾಖಲೆಗಳ ಪರಿಶೀಲನೆಗೆ ವಿಳಂಬವಾಗುತ್ತಿದೆ. ರಾಯಚೂರು ಲೋಕಾಯುಕ್ತ ಎಸ್ ಪಿ ಸತೀಶ್ ಚಿಟಗುಬ್ಬಿ ಮಾರ್ಗದರ್ಶನದಲ್ಲಿ ಐದು ಕಡೆ ಅಧಿಕಾರಿಗಳ ದಾಳಿ ಮುಂದುವರೆದಿದೆ.

