ಚುನಾವಣೆ ಹೊತ್ತಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ರೇಡ್

Public TV
2 Min Read

ಬೀದರ್: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ (Lokayukta) ಸೋಮವಾರ ಮುಂಜಾನೆ ಶಾಕ್ ನೀಡಿದೆ. ವಿವಿಧ ಜಿಲ್ಲೆಗಳ ಹಲವು ಇಲಾಖೆಯ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದೆ.

ಬೀದರ್ ಜಿಲ್ಲೆಯಾದ್ಯಂತ 6 ಕಡೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಮುಡಬಿ ಉಪ ತಹಶೀಲ್ದಾರ್ ವಿಜಯಕುಮಾರ್ ಸ್ವಾಮಿಯವರ ಆನಂದ್ ನಗರ ಹಾಗೂ ಬಸವಕಲ್ಯಾಣ ಪಟ್ಟಣದಲ್ಲಿರುವ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೇ ಅವರು ಕಾರ್ಯನಿರ್ವಹಿಸುವ ಮುಡುಬಿಯ ಕಚೇರಿ ಹಾಗೂ ಬಸವಕಲ್ಯಾಣ ಪಟ್ಟಣದ ಹೊಂದಿರುವ ಗ್ಯಾರೇಜ್ ಮೇಲೂ ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿ ಮನೆ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ

ಸಣ್ಣ ನೀರಾವರಿ ಇಲಾಖೆ ಕಾರ್ಯ ನಿರ್ವಾಹಕ ಇಂಜಿನಿಯರ್ ಸುರೇಶ್ ಮೇದಾ ಅವರ ಗುರುನಗರದ ನಿವಾಸ ಹಾಗೂ ನೌಬಾದ್‍ನಲ್ಲಿರುವ ಕಚೇರಿ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ಎ.ಆರ್ ಕರ್ನೂಲ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎನ್.ಎಂ ಓಲೇಕಾರ್ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ದಾಳಿ ನಡೆದಿದೆ.

ಬಳ್ಳಾರಿ: ಜೆಸ್ಕಾಂ ಎಇಇ ಮನೆ ಮೇಲೆ ಬೆಂಗಳೂರು ಮತ್ತು ಬಳ್ಳಾರಿ ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ. ಬಳ್ಳಾರಿಯ (Ballari) ಎಇಇ ಕಾರ್ಯನಿರ್ವಹಿಸುವ ಹುಸೇನ್ ಸಾಬ್ ಅವರ ಬುಡಾ ಕಾಂಪ್ಲೆಕ್ಸ್‌ನಲ್ಲಿರುವ ಕಚೇರಿ ಹಾಗೂ ರಾಘವೇಂದ್ರ ಕಾಲೋನಿಯಲ್ಲಿರುವ ಮನೆ ಮತ್ತು ಶಿಡಿಗಿನಮೊಳದಲ್ಲಿರುವ ಮನೆಯ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಸೇರಿದಂತೆ ವಿವಿಧೆಡೆ ಅಕ್ರಮ ಆಸ್ತಿ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಚಿತ್ರದುರ್ಗ: ಬಿಬಿಎಂಪಿ (BBMP) ಜೆಇಇಟಿ ಹನುಮಂತರಾಯ ಅವರ ಚಿತ್ರದುರ್ಗದ (Chitradurga) ಬೋಚಾಪುರದ ಫಾರಂ ಹೌಸ್ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ವಾಸುದೇವ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದೆ.

ದಾವಣಗೆರೆ: ನಿವೃತ್ತ ಡಿಸಿಎಫ್ ನಾಗರಾಜ್ ಹಾಗೂ ಹೊಳಲ್ಕೆರೆ ತಹಶೀಲ್ದಾರ್ ನಾಗರಾಜ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿಸಿಎಫ್ ಅವರ ಶಿವಮೊಗ್ಗ (Shivamogga) ಮನೆ ಹಾಗೂ ತಹಶೀಲ್ದಾರ್ ಅವರ ಶಿಕಾರಿಪುರದ ಮನೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ಡಿಸಿಎಫ್ ಅವರ ದಾವಣಗೆರೆ ಬಳಿಯ ತೋಟದ ಮನೆಯ ಮೇಲೂ ದಾಳಿ ನಡೆದಿದೆ. ದಾವಣಗೆರೆ (Davanagere) ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ನೇತೃತ್ವದಲ್ಲಿ ಇಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳಿಂದ ಏಳು ಕಡೆ ದಾಳಿ ನಡೆದಿದ್ದು ಪರಿಶೀಲನೆ ನಡೆಸಲಾಗುತ್ತಿದೆ.

ಕೋಲಾರ: ಬಂಗಾರಪೇಟೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಎನ್.ವೆಂಕಟೇಶಪ್ಪ ಅವರ ಮನೆ ಮೇಲೆ ಲೋಕಾ ದಾಳಿ ನಡೆದಿದೆ. ನಗರದಲ್ಲಿ ಮೂರು ಕಡೆ ಹಾಗೂ ಮುಳಬಾಗಿಲು ತಾಲ್ಲೂಕಿನ ತಿಪ್ಪದೊಡ್ಡಿಯಲ್ಲಿ ಎರಡು ಕಡೆ, ಒಟ್ಟು ವೆಂಕಟೇಶಪ್ಪ ಅವರಿಗೆ ಸೇರಿದ ಐದು ಕಡೆ ಏಕಕಾಲಕ್ಕೆ ದಾಳಿ ನಡೆದಿದೆ.

ಕಳೆದ ಎಂಟು ವರ್ಷಗಳಿಂದ ಬಂಗಾರಪೇಟೆ ತಾಲ್ಲೂಕು ಪಂಚಾಯತ್ ಇಓ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶಪ್ಪ ಅವರಿಗೆ ಎರಡು ದಿನಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಗೆ ವರ್ಗಾವಣೆಯಾಗಿತ್ತು. ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಇದನ್ನೂ ಓದಿ: ಕರ್ನಾಟಕ ಚುನಾವಣೆ – ಏ.26 ಕ್ಕೆ ರಾಜ್ಯಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಎಂಟ್ರಿ

Share This Article