ರಾಹುಲ್‌ Vs ನರೇಂದ್ರ ಮೋದಿ – ಲೋಕಸಭೆಯಲ್ಲಿ ಗದ್ದಲಕ್ಕೆ ಕಾರಣವಾಯ್ತು ‘ಹಿಂದೂ’ ಹೇಳಿಕೆ

Public TV
3 Min Read

– ಆರ್‌ಎಸ್‌ಎಸ್‌ ಹಿಂದೂ ಸಮಾಜವನ್ನು ಗುತ್ತಿಗೆ ಪಡೆದಿಲ್ಲ
– ರಾಮಜನ್ಮಭೂಮಿಯಲ್ಲಿ ಬಿಜೆಪಿಗೆ ಸೋಲಾಗಿದೆ 

ನವದೆಹಲಿ: ಅಧಿವೇಶನದ ವೇಳೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಹಿಂದೂ ಹಿಂಸಾಚಾರ ಪದವನ್ನು ಉಲ್ಲೇಖಿಸಿದ್ದಕ್ಕೆ ಲೋಕಸಭೆಯಲ್ಲಿ (Lok Sabha) ಕೋಲಾಹಲ ನಡೆದಿದೆ.

ವಿಪಕ್ಷ ನಾಯಕನಾಗಿ ಆಯ್ಕೆಯಾದ ರಾಹುಲ್‌ ಗಾಂಧಿ ಅವರು ಇಂದು ಮಧ್ಯಾಹ್ನ ಲೋಕಸಭೆಯಲ್ಲಿ ತಮ್ಮ ಮೊದಲ ಭಾಷಣ ಮಾಡಿದರು. ಈ ವೇಳೆ, ಅಭಯಮುದ್ರವು ಕಾಂಗ್ರೆಸ್‌ನ (Congress) ಸಂಕೇತವಾಗಿದೆ. ಅಭಯಮುದ್ರವು ನಿರ್ಭಯತೆಯ ಸಂಕೇತವಾಗಿದೆ, ಧೈರ್ಯ ಮತ್ತು ಸುರಕ್ಷತೆಯ ಸಂಕೇತವಾಗಿದೆ, ಇದು ಭಯವನ್ನು ಹೋಗಲಾಡಿಸುತ್ತದೆ. ನಮ್ಮ ಮಹಾಪುರುಷರೆಲ್ಲರೂ ಅಹಿಂಸೆ, ಭಯವನ್ನು ಹೋಗಲಾಡಿಸುವ ಬಗ್ಗೆ ಮಾತನಾಡಿದ್ದಾರೆ. ಆದರೆ, ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ, ಅಸತ್ಯದ ಬಗ್ಗೆ ಮಾತನಾಡುತ್ತಾರೆ. ನೀವು ನಿಜವಾದ ಹಿಂದೂಗಳಲ್ಲ ಎಂದು ಹೇಳಿದರು.

ಅಧಿವೇಶನದಲ್ಲಿ ಹಿಂದೂ ಪದವನ್ನು ರಾಹುಲ್‌ ಗಾಂಧಿ ಪ್ರಸ್ತಾಪ ಮಾಡಿದ್ದಕ್ಕೆ ಕೂಡಲೇ ಮಧ್ಯೆ ನಿಂತು ಆಕ್ಷೇಪ ವ್ಯಕ್ತಪಡಿಸಿದ ಮೋದಿ (PM Narendra Modi), ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆಯುವುದು ಬಹಳ ಗಂಭೀರವಾದ ವಿಷಯ ಎಂದು ಆಕ್ಷೇಪಿಸಿದರು.

ಪ್ರಧಾನಿ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಜೆಪಿ ಸೇರಿದಂತೆ ಆಡಳಿತ ಪಕ್ಷದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ರಾಹುಲ್‌ ಗಾಂಧಿ, ಆರ್‌ಎಸ್‌ಎಸ್‌ ಹಿಂದೂ ಸಮಾಜವನ್ನು ಗುತ್ತಿಗೆ ಪಡೆದಿಲ್ಲ. ರಾಮಜನ್ಮಭೂಮಿಯಲ್ಲಿ ಬಿಜೆಪಿಗೆ ಸೋಲಾಗಿದೆ ಎಂದು ಹೇಳಿದರು.

 

ಮೋದಿ ಆಕ್ಷೇಪ ವ್ಯಕ್ತಪಡಿಸಿದ ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೂಡ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡರು, ಕೋಟ್ಯಂತರ ಜನರು ಹಿಂದೂಗಳು ಎಂದು ಹೆಮ್ಮೆಪಡುತ್ತಾರೆ ಎಂದು ಹೇಳಿದರು. ಅವರೆಲ್ಲರೂ ಹಿಂಸಾತ್ಮಕರು ಎಂದು ರಾಹುಲ್ ಗಾಂಧಿ ಭಾವಿಸುತ್ತಾರೆಯೇ? ಎಲ್ಲಾ ಹಿಂದೂಗಳನ್ನು ಹಿಂಸಾತ್ಮಕವಾಗಿ ಚಿತ್ರಿಸುವ ಹೇಳಿಕೆಗಾಗಿ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಸಶಸ್ತ್ರ ಪಡೆಗಳಿಗೆ ಪ್ರವೇಶಕ್ಕಾಗಿ ಅಗ್ನಿವೀರ್ ಯೋಜನೆ ಕುರಿತು ಮಾತನಾಡಿದ ರಾಹುಲ್‌, ಒಬ್ಬ ಅಗ್ನಿವೀರ್ ನೆಲಬಾಂಬ್ ಸ್ಫೋಟದಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಆದರೆ ಅವನನ್ನು ‘ಹುತಾತ್ಮ’ ಎಂದು ಸಂಬೋಧನೆ ಮಾಡಲಿಲ್ಲ. ‘ಅಗ್ನಿವೀರ್’ ಒಬ್ಬ ಯೂಸ್ ಆಂಡ್‌ ಥ್ರೋ ಕಾರ್ಮಿಕನಾಗಿ ನೋಡಲಾಗುತ್ತದೆ ಎಂದು ಕಿಡಿಕಾರಿದರು.

ಇದಕ್ಕೆ ಕೂಡಲೇ ಆಕ್ಷೇಪ ವ್ಯಕ್ತಪಡಿಸಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ರಾಹುಲ್ ಗಾಂಧಿ ಅವರು ತಪ್ಪು ಹೇಳಿಕೆಗಳನ್ನು ನೀಡಿ ಸದನವನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಬಾರದು, ರಕ್ಷಿಸುವಾಗ ಪ್ರಾಣ ತ್ಯಾಗ ಮಾಡಿದ ಅಗ್ನಿವೀರನ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಅಗ್ನಿವೀರರು ಮೃತಪಟ್ಟಾಗ ಎಲ್ಲಾ ರೀತಿಯ ಗೌರವ ನೀಡಲಾಗಿದೆ ಎಂದು ಕೂಡಲೇ ಉತ್ತರ ನೀಡಿದರು.

Share This Article