– ಲೋಕಸಭೆಯಲ್ಲಿ ಮಸೂದೆ ಮಂಡಿಸಿದ ಅಶ್ವಿನಿ ವೈಷ್ಣವ್
– ಭಾರತದ ಯುವಕರನ್ನು ರಕ್ಷಿಸಲು ಮಸೂದೆ
ನವದೆಹಲಿ: ಲೋಕಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಮಸೂದೆ (Online Gaming Bill, 2025) ಅಂಗೀಕಾರವಾಗಿದೆ. ವಿಪಕ್ಷಗಳ ಗದ್ದಲದ ನಡುವೆಯೂ ಈ ಮಸೂದೆಯನ್ನು ಸರ್ಕಾರ ಧ್ವನಿ ಮತದಿಂದ ಪಾಸ್ ಮಾಡಿಸುವಲ್ಲಿ ಯಶಸ್ವಿಯಾಗಿದೆ.
ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಲೋಕಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡಿಸಿದರು. ಈ ಆಟಗಳಲ್ಲಿ ಹೆಚ್ಚುತ್ತಿರುವ ವ್ಯಸನ, ಹಣ ವರ್ಗಾವಣೆ ಮತ್ತು ಆರ್ಥಿಕ ವಂಚನೆಯ ಘಟನೆಗಳನ್ನು ತಡೆಯಲು ಮಸೂದೆ ಮಂಡಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಈ ಮಸೂದೆಯು ಇ-ಸ್ಪೋರ್ಟ್ಸ್ ಮತ್ತು ಆನ್ ಲೈನ್ ಸಾಮಾಜಿಕ ಆಟಗಳನ್ನು ಪ್ರೋತ್ಸಾಹಿಸುತ್ತದೆ. ಆದರೆ ಹಾನಿಕಾರಕ ಆನ್‌ಲೈನ್ ಹಣದ ಗೇಮಿಂಗ್ ಸೇವೆಗಳು, ಅವುಗಳ ಜಾಹೀರಾತುಗಳು ಮತ್ತು ಹಣಕಾಸು ವ್ಯವಹಾರಗಳನ್ನು ನಿಷೇಧಿಸುತ್ತದೆ. ಆನ್ ಲೈನ್ ಫ್ಯಾಂಟಸಿ ಸ್ಪೋರ್ಟ್ಸ್‌ನಿಂದ ಹಿಡಿದು ಆನ್ ಲೈನ್ ಜೂಜು (ಪೋಕರ್, ರಮ್ಮಿ ಮತ್ತು ಇತರ ಕಾರ್ಡ್ ಆಟಗಳು) ಹಾಗೂ ಆನ್ ಲೈನ್ ಲಾಟರಿಗಳವರೆಗೆ ಎಲ್ಲಾ ಆನ್ ಲೈನ್ ಬೆಟ್ಟಿಂಗ್ ಮತ್ತು ಜೂಜಿನ ಚಟುವಟಿಕೆಗಳನ್ನು ಈ ಮಸೂದೆ ಕಾನೂನುಬಾಹಿರಗೊಳಿಸುತ್ತದೆ.
ಹಣವನ್ನು ಮರುಪಾವತಿ ಮಾಡುತ್ತೇವೆ ಎಂದು ಭರವಸೆ ನೀಡಿ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುವ ಈ ಗೇಮಿಂಗ್ ಆಟಗಳಿಂದ ಭಾರತದ ಯುವಕರನ್ನು ರಕ್ಷಿಸಲು ಈ ಮಸೂದೆಯನ್ನು ಸಿದ್ಧಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ಕ್ರಿಮಿನಲ್ ಕೇಸಲ್ಲಿ ಜನಪ್ರತಿನಿಧಿಗಳ ಬಂಧನವಾದ್ರೆ ಹುದ್ದೆಯಿಂದ ವಜಾ – ಮಸೂದೆ ಮಂಡನೆ, ಲೋಕಸಭೆಯಲ್ಲಿ ಕೋಲಾಹಲ
ವರ್ಗೀಕರಣ, ನೋಂದಣಿ, ದೂರುಗಳ ಮೇಲ್ವಿಚಾರಣೆ ಮತ್ತು ಆಟವು ಹಣದ ಆಟವಾಗಿ ಅರ್ಹತೆ ಪಡೆಯುತ್ತದೆಯೇ ಎಂಬುದನ್ನು ನಿರ್ಧರಿಸುವುದು ಸೇರಿದಂತೆ ಆನ್‌ಲೈನ್ ಆಟಗಳನ್ನು ನಿಯಂತ್ರಿಸಲು ರಾಷ್ಟ್ರೀಯ ಪ್ರಾಧಿಕಾರವನ್ನು ಸ್ಥಾಪಿಸಲಾಗುತ್ತದೆ.
ಪ್ರಸ್ತಾವಿತ ಮಸೂದೆಯಲ್ಲಿ ಮೂರು ಪ್ರಮುಖ ಅಂಶಗಳಿದೆ. ಒಂದನೇಯದ್ದು ಬೆಟ್ಟಿಂಗ್‌ನಂತ ಚಟುವಟಿಕೆಗಳನ್ನು ತಡೆಯುವುದು. ಎರಡನೇಯದ್ದು ಅಂತಹ ವೇದಿಕೆಗಳಿಗೆ ಜಾಹೀರಾತು ಮಾಡುವುದು ಅಥವಾ ಪ್ರಚಾರ ಮಾಡುವುದಕ್ಕೆ ನಿರ್ಬಂಧ. ಮೂರನೇಯದ್ದು ಬ್ಯಾಂಕುಗಳು ಮತ್ತು ಪಾವತಿ ವ್ಯವಸ್ಥೆಗಳು ಆನ್‌ಲೈನ್ ಗೇಮ್‌ಗಳಿಗೆ ಸಂಬಂಧಿಸಿದಂತೆ ಹಣವನ್ನು ವರ್ಗಾವಣೆಗೆ ನಿಷೇಧ ಹೇರುತ್ತದೆ.
ಶಿಕ್ಷೆ ಏನು?
ಅಕ್ರಮ ಹಣದ ಗೇಮಿಂಗ್ ಮಾಡಿದ್ದು ಸಾಬೀತಾದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು / ಅಥವಾ 1 ಕೋಟಿ ರೂ.ವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ. ಆನ್‌ಲೈನ್ ಗೇಮ್‌ಗಳಿಗೆ ಜಾಹೀರಾತು ಮಾಡಿದವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು / ಅಥವಾ 50 ಲಕ್ಷ ರೂ.ವರೆಗೆ ದಂಡವನ್ನು ವಿಧಿಸಬಹುದು. ಸಂಬಂಧಿತ ವಹಿವಾಟುಗಳಲ್ಲಿ ಭಾಗಿಯಾಗಿರುವ ಹಣಕಾಸು ಸಂಸ್ಥೆಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು/ ಅಥವಾ 1 ಕೋಟಿ ರೂ.ವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ.
ಒಂದು ವೇಳೆ ಮತ್ತೊಮ್ಮೆ ಈ ಅಪರಾಧ ಎಸಗಿದ್ದಲ್ಲಿ ದೀರ್ಘಾವಧಿಯ ಜೈಲು ಶಿಕ್ಷೆ ಮತ್ತು ಹೆಚ್ಚಿನ ದಂಡ ಸೇರಿದಂತೆ ಕಠಿಣ ಶಿಕ್ಷೆಗಳನ್ನು ಎದುರಿಸಬೇಕಾಗುತ್ತದೆ.
ಈ ಅಪರಾಧ ಎಸಗಿದ್ದಲ್ಲಿ ಜಾಮೀನು ಸಿಗುವುದಿಲ್ಲ. ಶಂಕಿತ ಪ್ರಕರಣಗಳಲ್ಲಿ ತನಿಖೆ ಮಾಡಲು, ಶೋಧಿಸಲು ಮತ್ತು ಆಸ್ತಿಯನ್ನು ವಶಪಡಿಸಿಕೊಳ್ಳಲು ಮತ್ತು ವಾರಂಟ್ ಇಲ್ಲದೆ ಬಂಧಿಸಲು ಅಧಿಕಾರಿಗಳಿಗೆ ಅಧಿಕಾರ ನೀಡಲಾಗುತ್ತದೆ.
I&B Minister @AshwiniVaishnaw moves The Promotion and Regulation of Online Gaming Bill, 2025 in Lok Sabha for consideration and passing.@MIB_India @ombirlakota @LokSabhaSectt pic.twitter.com/gzYaQysnlX
— SansadTV (@sansad_tv) August 20, 2025
ಆನ್‌ಲೈನ್ ಗೇಮ್ ಆಡಿದವರನ್ನು ಅಪರಾಧಿಗಳೆಂದು ಪರಿಗಣಿಸುವುದಿಲ್ಲ. ಬದಲಾಗಿ ಇವರನ್ನು ಬಲಿಪಶುಗಳು ಎಂದು ಪರಿಗಣಿಸಲಾಗುವುದು ಎಂದು ಸರ್ಕಾರ ಹೇಳಿದೆ.
ನಾವು ‘ಸೂಕ್ತ ಜಾಗರೂಕತೆ’ ವಹಿಸಿದ್ದೇವೆ ಎಂದು ಸಾಬೀತುಪಡಿಸದ ಹೊರತು, ಈ ಕಾಯ್ದೆಯ ಅಡಿಯಲ್ಲಿ ಬರುವ ಅಪರಾಧಗಳಿಗೆ ಕಂಪನಿಗಳು ಮತ್ತು ಅವುಗಳ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗಿಯಾಗಿರದ ಸ್ವತಂತ್ರ ನಿರ್ದೇಶಕರು ಅಥವಾ ಕಾರ್ಯನಿರ್ವಾಹಕೇತರ ನಿರ್ದೇಶಕರಿಗೆ ರಕ್ಷಣೆ ನೀಡಲಾಗಿದೆ.
I&B Minister @AshwiniVaishnaw introduces The Promotion and Regulation of Online Gaming Bill, 2025 in Lok Sabha.@LokSabhaSectt @ombirlakota @MIB_India pic.twitter.com/Cm7RD5GPxW
— SansadTV (@sansad_tv) August 20, 2025
ಇ-ಸ್ಪೋರ್ಟ್ಸ್ ಕಾರ್ಯಕ್ರಮಗಳನ್ನು ಆಯೋಜಿಸಲು ಬೇಕಾದ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು ಕ್ರೀಡಾ ಸಚಿವಾಲಯದಿಂದ ರೂಪಿಸಲಾಗುತ್ತದೆ. ಇ-ಸ್ಪೋರ್ಟ್ಸ್‌ನ ಪ್ರಗತಿಗಾಗಿ ತರಬೇತಿ ಅಕಾಡೆಮಿಗಳು, ಸಂಶೋಧನಾ ಕೇಂದ್ರಗಳು ಮತ್ತು ತಂತ್ರಜ್ಞಾನ ವೇದಿಕೆಗಳನ್ನು ಸ್ಥಾಪನೆ ಮಾಡಲಾಗುತ್ತದೆ.