ಎಲ್ಲಿ ಹೋದ್ರೂ ಮೋದಿ, ಮೋದಿ ಕೂಗು ಕೇಳಿಸುತ್ತೆ: ಅಮಿತ್ ಶಾ

Public TV
1 Min Read

– ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ

ಗಾಂಧಿನಗರ: ದೇಶವನ್ನು ಯಾರು ಮುನ್ನಡೆಸಬೇಕು ಎನ್ನುವುದಕ್ಕಾಗಿ ಮಾತ್ರ ಈ ಲೋಕಸಭಾ ಚುನಾವಣೆ ನಡೆಯುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಗುಜರಾತ್‍ನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ನಾಮಮತ್ರ ಸಲ್ಲಿಸುವುದಕ್ಕೂ ಮುನ್ನ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಜನರು 70 ವರ್ಷಗಳಿಂದ ಉತ್ತಮ ನಾಯಕನಿಗಾಗಿ ಕಾಯುತ್ತಿದ್ದರು. ಅವರ ಬೇಡಿಕೆಯಂತೆ ಉತ್ತಮ ನಾಯಕ ಸಿಕ್ಕಿದ್ದಾನೆ ಎಂದು ನರೇಂದ್ರ ಮೋದಿ ಅವರನ್ನು ಹೊಗಳಿದರು.

ನಾನು ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದೇನೆ. ದೇಶದಲ್ಲಿ ಪ್ರಧಾನಿ ಮೋದಿ ಅವರನ್ನ ಜನರು ಜಪಿಸುತ್ತಿದ್ದಾರೆ. ಹಿಮಾಚಲದಿಂದ ಕನ್ಯಾಕುಮಾರಿವರೆಗೆ ಹಾಗೂ ಕಾಂಪುರ್ ದಿಂದ ಗಾಂಧಿನಗರವರೆಗೂ ಮೋದಿ, ಮೋದಿ ಎನ್ನುವ ಕೂಗನ್ನು ನಾನು ಕೇಳಿದ್ದೇನೆ ಎಂದು ಹೇಳಿದರು.

ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ನನಗೆ ಸಿಕ್ಕಿದೆ. ಇದು ನನ್ನ ಅದೃಷ್ಟವಾಗಿದೆ. ಈ ಕ್ಷೇತ್ರದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪುರುಷೋತ್ತಮ್ ಗಣೇಶ್ ಮಾಳ್ವಂಕರ್ ಕೂಡ ಸ್ಪರ್ಧಿಸಿದ್ದರು ಎಂದು ನೆನಪಿಸಿಕೊಂಡರು.

ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಮಾತನಾಡಿ, ಸಾರ್ವಜನಿಕ ಹಿತಾಸಕ್ತಿ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಶಿವಸೇನೆ ಹೋರಾಡಿತ್ತು. ಇದರಿಂದಾಗಿ ಉಭಯ ಪಕ್ಷಗಳ ಮಧ್ಯೆ ವೈಮನಸ್ಸು ಉಂಟಾಗಿತ್ತು. ಆದರೆ ಉಭಯ ಪಕ್ಷಗಳು ಎಂದಿಗೂ ಪರಸ್ಪರ ಬೆನ್ನಿಗೆ ಚೂರಿ ಹಾಕಲಿಲ್ಲ ಎಂದು ತಿಳಿಸಿದರು.

ಗಾಂಧಿನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿದ ಬಿಜೆಪಿ ಅಭ್ಯರ್ಥಿ ಅಮಿತ್ ಶಾ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಚಿವರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಸಾಥ್ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *