ರಾಜ್ಯ ಬಿಜೆಪಿಯಿಂದ 15+ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರು ಫೈನಲ್

Public TV
2 Min Read

– ಕೋರ್‌ ಕಮಿಟಿ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಶಾರ್ಟ್‌ ಲಿಸ್ಟ್‌ಗೆ ರಾಜ್ಯ ನಾಯಕರ ಒಪ್ಪಿಗೆ

ಬೆಂಗಳೂರು: ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಶಾರ್ಟ್‌ ಲಿಸ್ಟ್‌ಗೆ ಒಪ್ಪಿಗೆ ಸಿಕ್ಕಿದೆ. ರಾಜ್ಯ ಬಿಜೆಪಿಯಿಂದ 15+ ಕ್ಷೇತ್ರಗಳಿಗೆ ಸಂಭಾವ್ಯರ ಹೆಸರುಗಳು ಫೈನಲ್ ಆಗಿದೆ.

ಗೊಂದಲ ಇಲ್ಲದ, ಗೆಲ್ಲುವ ಗ್ಯಾರಂಟಿ ಇರುವ, ಸರ್ವ ಸಮ್ಮತ ಸಂಭಾವ್ಯರ 15+ ಹೆಸರುಗಳಿಗೆ ಕೋರ್ ಕಮಿಟಿ ಸಹಮತ ಸೂಚಿಸಿದೆ. ಒಂದೆರಡು ದಿನಗಳಲ್ಲಿ ಹೈಕಮಾಂಡ್‌ಗೆ 15+ ಶಾರ್ಟ್ ಲಿಸ್ಟ್ ಹೆಸರುಗಳ ರವಾನೆ ಆಗಲಿದೆ. ಬಿಜೆಪಿ ಹೈಕಮಾಂಡ್ ರಿಲೀಸ್ ಮಾಡುವ ಎರಡನೇ ಪಟ್ಟಿಯಲ್ಲಿ ಕರ್ನಾಟಕ ಕ್ಷೇತ್ರಗಳಿಗೂ ಅಭ್ಯರ್ಥಿ ಘೋಷಣೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಂದಿನ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ನಾಯಕರು ಸಂಭಾವ್ಯರ ರಾಜ್ಯ ಪಟ್ಟಿ ಫೈನಲ್ ಮಾಡಿದ್ದಾರೆ.

ಗೊಂದಲ ಇರುವ ಕ್ಷೇತ್ರಗಳ ಆಕಾಂಕ್ಷಿಗಳ ಬಗ್ಗೆಯೂ ಕೋರ್ ಕಮಿಟಿಯಲ್ಲಿ ಚರ್ಚೆ ನಡೆಸಲಾಗಿದೆ. ಅಭ್ಯರ್ಥಿ ಆಯ್ಕೆ ಕ್ಲಿಷ್ಟಕರ ಇರುವ 10+ ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆದಿದೆ. ಗೊಂದಲ ಇರುವ ಕ್ಷೇತ್ರಗಳ ಸಂಭಾವ್ಯರ ಪಟ್ಟಿಯನ್ನೂ ಹೈಕಮಾಂಡ್‌ಗೆ ಕಳಿಸಲು ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. ಈ ಕ್ಷೇತ್ರಗಳಿಗೆ ಪ್ರತಿ ಕ್ಷೇತ್ರಕ್ಕೂ ಕನಿಷ್ಠ 3 ಹೆಸರುಗಳಿರುವ ಪಟ್ಟಿಯನ್ನು ಕಳಿಸಲು ನಿರ್ಧಾರ ಮಾಡಲಾಗಿದೆ.

ಕೋರ್ ಕಮಿಟಿ ಸಭೆಯಲ್ಲಿ ವೀಕ್ಷಕರಿಂದ ಸಲ್ಲಿಕೆಯಾದ ಹೆಸರುಗಳ ಬಗ್ಗೆ ಚರ್ಚೆ ನಡೆಯಿತು. ಕಳೆದ ಎರಡು ದಿನಗಳಲ್ಲಿ 28 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿದ್ದರು. ಕೇಂದ್ರೀಯ ಚುನಾವಣಾ ಸಮಿತಿಗೆ ಮೂರರಿಂದ ಐದು ಹೆಸರುಗಳನ್ನು ಕಳುಹಿಸಲು ತೀರ್ಮಾನಿಸಲಾಗಿದೆ. ಒಟ್ಟಾರೆ ಬಿಜೆಪಿ ರಾಜ್ಯ ಘಟಕದಿಂದ 28 ಕ್ಷೇತ್ರಗಳಿಗೂ ಹೆಸರು ಶಿಫಾರಸು ಮಾಡಲು ತೀರ್ಮಾನ ಮಾಡಲಾಗಿದೆ.
ಎರಡು ಭಾಗವಾಗಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ನಾಯಕರು ಕಳುಹಿಸಲಿದ್ದಾರೆ. ಮೊದಲ ಭಾಗದಲ್ಲಿ ಗೆಲ್ಲುವ ಖಚಿತತೆ ಇರುವವರ ಪಟ್ಟಿ, ಎರಡನೇ ಭಾಗದಲ್ಲಿ ಗೊಂದಲ ಇರುವ ಕ್ಷೇತ್ರಗಳ ಪಟ್ಟಿ ಕಳುಹಿಸಲು ನಿರ್ಧರಿಸಲಾಗಿದೆ.

ಹಾಲಿ ಸಂಸದರ ಹೆಸರು ಒಳಗೊಂಡಂತೆ 3 ರಿಂದ 5 ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳು ಇದೆ ಎನ್ನಲಾಗಿದೆ. ಮೈತ್ರಿ ಸೀಟು ಹಂಚಿಕೆ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು. ಜೆಡಿಎಸ್‌ಗೆ ಎಷ್ಟು ಮತ್ತು ಯಾವ ಕ್ಷೇತ್ರ ಬಿಟ್ಟು ಕೊಡಬೇಕೆಂಬ ಬಗ್ಗೆ ಹೈಕಮಾಂಡ್ ನಿರ್ಧಾರಕ್ಕೆ ರಾಜ್ಯ ನಾಯಕರು ಬಿಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿಗಳನ್ನು ಫೈನಲ್ ಮಾಡಿದ ನಂತರ ಮೈತ್ರಿ ಸೀಟು ಹಂಚಿಕೆ ಬಗ್ಗೆ ಬಿಜೆಪಿ ಹೈಕಮಾಂಡ್‌ ತೀರ್ಮಾನಿಸಲಿದೆ.

ಸಭೆಯಲ್ಲಿ ಮಾಜಿ ಸಿಎಂಗಳಾದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ್‌ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಲೋಕಸಭಾ ಚುನಾವಣಾ ರಾಜ್ಯ ಉಸ್ತುವಾರಿ ಅಗರ್ವಾಲ್‌, ಮಾಜಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಅಶ್ವಥ್‌ ನಾರಾಯಣ್‌, ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಮಾಜಿ ಸಚಿವರಾದ ಶ್ರೀರಾಮುಲು, ಸಿ.ಟಿ.ರವಿ ಇತರರು ಉಪಸ್ಥಿತರಿದ್ದರು.

Share This Article