ಗುಂಡಿನ ದಾಳಿ, ಇವಿಎಂ ಎಸೆತ, ಬಲವಂತದ ಮತದಾನ – ಇದು ಪಶ್ಚಿಮ ಬಂಗಾಳ ಎಲೆಕ್ಷನ್ ಸ್ಟೈಲ್

Public TV
2 Min Read

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣೆ ಮತದಾನವು ಇಂದು ನಡೆಯುತ್ತಿದ್ದು, ಅನೇಕ ಕಡೆಗಳಲ್ಲಿ ಗಲಾಟೆ, ಹಲ್ಲೆ ಹಾಗೂ ಬಲವಂತವಾಗಿ ಮತದಾನ ಮಾಡಲಾಗಿದೆ.

ರಾಯ್‍ಗಂಜ್ ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಮೊಹಮ್ಮದ್ ಸಲಿಂ ಅವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಕೆಲ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮೊಹಮ್ಮದ್ ಸಲಿಂ ಅವರು ಕಾಂಗ್ರೆಸ್ ಹಾಲಿ ಸಂಸದೆ ದೀಪಾ ದಾಸ್ಮುನ್ಸಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ದೀಪಾ ಅವರ ಪತಿ ರಂಜನ್ ದುಸ್ಮಾನ್ಸಿ ಅವರು 1999ರಿಂದಲೂ ರಾಯ್‍ಗಂಜ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆದರೆ ಅವರ ಅನಾರೋಗ್ಯದಿಂದಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಪತಿ ದೀಪಾ ದಾಸ್ಮುನ್ಸಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಇಸ್ಲಾಂಪುರ್ ಮತಗಟ್ಟೆಯ 100 ಮೀಟರ್ ದೂರದಲ್ಲಿ ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಸೇರಿದ್ದಾರೆ. ಈ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಮತದಾರರನ್ನು ಹೆದರಿಸುತ್ತಿದ್ದಾರೆ. ಅವರ ಬಳಿಗೆ ಹೋಗುತ್ತಿದ್ದಂತೆ ನನ್ನ ವಾಹನದ ಮೇಲೆ ದಾಳಿ ಮಾಡಿದರು. ಪೊಲೀಸರು ದಾಳಿ ಮಾಡಿದವರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ಮೊಹಮ್ಮದ್ ಸಲಿಂ ಆರೋಪಿಸಿದ್ದಾರೆ.

ರಾಯ್‍ಗಂಜ್‍ನಲ್ಲಿ ಟಿಎಂಸಿ ಕಾರ್ಯಕರ್ತರು ಬೂತ್ ಅನ್ನು ತಮ್ಮ ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಬೂತ್ ಒಳಗೆ ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ಬಲವಂತವಾಗಿ ಇವಿಎಂ ರೂಂ ಪ್ರವೇಶಿಸಿ ಮತದಾರರ ಮೇಲೆ ಒತ್ತಡ ಹಾಕಿ ವೋಟ್ ಹಾಕಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ದೂರಿದೆ.

ಪಶ್ಚಿಮ ಬಂಗಾಳದ ಚೋಪ್ರಾದಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ. ಈ ವೇಳೆ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಒಡೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಉತ್ತರ ಡಿಗಿರ್ ಪರ್ ಕ್ಷೇತ್ರದಲ್ಲಿ ಮತದಾನದ ಆರಂಭವಾದ ಕೆಲವೇ ಸಮಯದಲ್ಲಿ ಗಲಭೆ ಆರಂಭವಾಗಿದೆ. ಮತದಾನ ಮಾಡದಂತೆ ಗುಂಪೊಂದು ಸಾರ್ವಜನಿಕರಿಗೆ ಒತ್ತಾಯಿಸಿತ್ತು. ಈ ವೇಳೆ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿ ಗುಂಪನ್ನು ಚದುರಿಸಿ, ಪುನಃ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿತು.

ಪುರುಲಿಯಾ ಜಿಲ್ಲೆಯ ಸೇನಾಬೊನಾ ಗ್ರಾಮದ ಹೊರ ವಲಯದ ಮರದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆ ಮಾಡಿ ಟಿಎಂಸಿ ಕಾರ್ಯರ್ತರು ಈ ಕೃತ್ಯ ಎಸದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *